ಬೆಂಗಳೂರು: ಖಾಸಗಿ ಅನುದಾನಿತ ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.
1995–96ನೇ ಶೈಕ್ಷಣಿಕ ಸಾಲಿನ ಪೂರ್ವದಲ್ಲಿ ಆರಂಭವಾಗಿ ವೇತನಾನುದಾನಕ್ಕೆ ಒಳಪಟ್ಟಿರುವ ಶಾಲಾ–ಕಾಲೇಜುಗಳಲ್ಲಿ ಜನವರಿ 2016ರಿಂದ ಡಿಸೆಂಬರ್ 2020ರವರೆಗಿನ ಅವಧಿಯಲ್ಲಿ ನಿವೃತ್ತಿ, ನಿಧನ, ರಾಜೀನಾಮೆ ಮತ್ತಿತರ ಕಾರಣಗಳಿಂದ ಖಾಲಿ ಇರುವ ಎಲ್ಲ ವಿಷಯಗಳ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬಹುದು.
ಅನುದಾನ ಸಂಹಿತೆ, ನೇಮಕಾತಿ ನಿಯಮಗಳಿಗೆ ಒಳಪಟ್ಟು ಹುದ್ದೆಗಳನ್ನು ಭರ್ತಿಮಾಡಿಕೊಳ್ಳಬೇಕು. ಮೀಸಲಾತಿ ನಿಯಮ ಹಾಗೂ ಕಲ್ಯಾಣ ಕರ್ನಾಟಕದ ಮೀಸಲಾತಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಅಗತ್ಯ ಮಕ್ಕಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ ಸಂಪೂರ್ಣ ಮಾಹಿತಿ ಮತ್ತು ದಾಖಲೆಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.