ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಹೈಡ್ರಾಲಜಿ ಮಾಡೆಲ್‌ಗೆ ಕೇಂದ್ರ ಜಲ ಆಯೋಗದ ಆಸಕ್ತಿ

Last Updated 26 ಮೇ 2020, 12:04 IST
ಅಕ್ಷರ ಗಾತ್ರ

ಬೆಂಗಳೂರು: ಮಳೆಗಾಲದಲ್ಲಿ ಮಳೆ ಸುರಿಯುವ ಪ್ರಮಾಣ ಆಧರಿಸಿ, ನದಿಗಳಲ್ಲಿ ನೀರಿನ ಹರಿವು, ಅಣೆಕಟ್ಟಿಗೆ ಸೇರುವ ಪ್ರಮಾಣ ಮತ್ತು ಪ್ರವಾಹ ಮುನ್ಸೂಚನೆಯನ್ನು ಕರಾರುವಾಕ್ಕಾಗಿ ನೀಡುವ ರಾಜ್ಯದ ‘ಹೈಡ್ರಾಲಜಿ ಮಾಡೆಲ್‌’ ಬಗ್ಗೆ ಕೇಂದ್ರ ಜಲ ಆಯೋಗ ಆಸಕ್ತಿ ತೋರಿದೆ.

ಸದ್ಯಕ್ಕೆ ಬಳಸುತ್ತಿರುವ ವಿಧಾನ ಅಷ್ಟೇನು ಕರಾರುವಾಕ್ಕಾಗಿ ಮುನ್ಸೂಚನೆ ನೀಡುತ್ತಿಲ್ಲ. ವ್ಯವಸ್ಥೆಯನ್ನು ಸುಧಾರಣೆ ಮಾಡಲು ಜಲ ಆಯೋಗ ಉದ್ದೇಶಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಡಿಎಂಸಿ) ಆಧುನಿಕ ತಂತ್ರಜ್ಞಾನ ಬಳಸಿಕೊಂಡು ನಗರ ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡುವ ಹೈಡ್ರಾಲಜಿ ಮಾಡೆಲ್‌ ಅಭಿವೃದ್ಧಿಪಡಿಸಿದೆ. ಇದು ಯಶಸ್ವಿ ಆಗಿರುವುದರಿಂದ ತಂತ್ರಜ್ಞಾನವನ್ನು ದೇಶದಲ್ಲಿ ಅಳವಡಿಸುವ ಬಗ್ಗೆ ಜಲ ಆಯೋಗ ಚಿಂತನೆ ನಡೆಸಿದೆ.

ಅಲ್ಲದೆ ಕೆಎಸ್‌ಎನ್ಎಂಡಿಸಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗುವುದರಿಂದ ಎಷ್ಟು ಹಳ್ಳಿಗಳು ಜಲಾವೃತವಾಗುತ್ತವೆ, ಎಷ್ಟು ಸೇತುವೆಗಳು ಮುಳುಗುತ್ತವೆ, ಎಲ್ಲೆಲ್ಲಿ ರಸ್ತೆ ಸಂಪರ್ಕಗಳು ಕಡಿತ ಆಗಬಹುದು ಎಂಬ ಮಾಹಿತಿ ಪಡೆಯುವ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿದೆ. ಇದರಿಂದ ರಾಷ್ಟ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗುತ್ತದೆ.

‘ನಮ್ಮ ಹೈಡ್ರಾಲಜಿ ಮಾಡೆಲ್‌ನ ವಿಶೇಷತೆ ಎಂದರೆ, ಎಷ್ಟು ಪ್ರಮಾಣದಲ್ಲಿ ಮಳೆ ಬರುತ್ತಿದೆ. ಇದರಿಂದ ನದಿಗಳಲ್ಲಿ ನೀರಿನ ಹರಿವು ಎಷ್ಟಾಗಬಹುದು. ಪ್ರವಾಹ ಸೃಷ್ಟಿ ಆಗುತ್ತದೆಯೇ ಎಂಬ ಕುರಿತು ಮಾಹಿತಿಯನ್ನು ನೀಡುತ್ತದೆ. ತಂತ್ರಜ್ಞಾನದ ಬಗ್ಗೆ ಕೇಂದ್ರ ಜಲ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ಭಾರತೀಯ ಹವಾಮಾನ ಕೇಂದ್ರ ಮಳೆ ಮುನ್ಸೂಚನೆ ನೀಡುವಂತೆ ಅಣೆಕಟ್ಟುಗಳ ಮುನ್ಸೂಚನೆ ನೀಡುವ ವ್ಯವಸ್ಥೆ ರೂಪಿಸಬೇಕು ಎಂಬುದು ಕೇಂದ್ರ ಜಲ ಆಯೋಗದ ಉದ್ದೇಶ. ಸಾಕಷ್ಟು ರಾಜ್ಯಗಳಿಂದ ಜಲ ಆಯೋಗಕ್ಕೆ ಮಳೆಯ ಪ್ರಮಾಣದ ಬಗ್ಗೆ ಸರಿಯಾದ ದತ್ತಾಂಶ ಹೋಗುತ್ತಿಲ್ಲ. ಕರ್ನಾಟಕ ಮಾತ್ರ ಸರಿಯಾದ ಮಾಹಿತಿಯನ್ನು ನೀಡುತ್ತಿದೆ ಎಂದರು.

‘ಮಹಾರಾಷ್ಟ್ರದಲ್ಲಿ ಮಳೆ ಬಂದರೆ ಕೃಷ್ಣಾ ನದಿಗೆ ಎಷ್ಟು ನೀರು ಹರಿದು ಬರುತ್ತದೆ. ನೀರು ಆ ರಾಜ್ಯದ ಗಡಿಯನ್ನು ದಾಟಿ ಕರ್ನಾಟಕ ಪ್ರವೇಶಿಸಿದಾಗ ಎಷ್ಟು ಹೆಚ್ಚಾಗುತ್ತದೆ. ಅಣೆಕಟ್ಟಿಗೆ ಯಾವಾಗ ತಲುಪಬಹುದು. ಮಹಾರಾಷ್ಟ್ರದಲ್ಲಿ 30 ಸಾವಿರ ಕ್ಯುಸೆಕ್‌ ಬಿಟ್ಟರೆ, ನಮ್ಮ ರಾಜ್ಯಕ್ಕೆ ಬಂದು ಸೇರುವಾಗ ಅದು 1 ಲಕ್ಷ ಕ್ಯೂಸೆಕ್ ಆಗಬಹುದು. ಯಾವಾಗ ತಲುಪುತ್ತದೆ ಮತ್ತಿತರ ಮಾಹಿತಿಗಳನ್ನು ಹೈಡ್ರಾಲಜಿ ಮಾಡೆಲ್‌ನಿಂದ ನಿಖರವಾಗಿ ಪಡೆಯಲು ಸಾಧ್ಯ’ ಎಂದು ಹೇಳಿದರು.

ಪ್ರವಾಹದ ದುಷ್ಪರಿಣಾಮ ತಡೆಯಬಹುದು

ನಿಖರ ಮಾಹಿತಿ ಪಡೆಯುವುದರಿಂದ ಪ್ರವಾಹದಿಂದ ಆಗಬಹುದಾದ ಜೀವ ಹಾನಿ ಮತ್ತಿತರ ದುಷ್ಪರಿಣಾ ತಪ್ಪಿಸಬಹುದು. ಮಹಾರಾಷ್ಟ್ರದಲ್ಲಿ ಮಳೆಯಾಗಿ ಪ್ರವಾಹ ಕರ್ನಾಟಕದಲ್ಲಿ ಉಕ್ಕೇರುವುದನ್ನು ಮುಂಚಿತವಾಗಿ ತಿಳಿದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT