ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಶಿಕ್ಷಕರಾಗಿ ಲಿಂಗತ್ವ ಅಲ್ಪಸಂಖ್ಯಾತರು: ನೇಮಕಾತಿಯಲ್ಲಿ ಶೇ 1ರಷ್ಟು ಮೀಸಲಾತಿ

ಸರ್ಕಾರಿ ನೇಮಕಾತಿಯಲ್ಲಿ ಶೇ 1ರಷ್ಟು ಮೀಸಲಾತಿ
Last Updated 23 ನವೆಂಬರ್ 2022, 22:45 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನೊಳಗಿನ ಆ ನೋವು ಮರೆಯಲೆಂದು ಓದಿನ ಕಡೆಗೆ ಗಮನ ಹರಿಸಿದೆ. ಅದು ನನ್ನ ಕೈಹಿಡಿದು ಶಿಕ್ಷಕಿ ಹುದ್ದೆಯ ಬದುಕಿಗೆ ದಾರಿ ಮಾಡಿಕೊಟ್ಟಿದೆ...’ ಹೀಗೆ ಹೇಳುತ್ತಲೇ ಅಶ್ವತ್ಥಾಮ (ಪೂಜಾ) ಅವರು ಭಾವುಕರಾದರು.

ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ 1ರಷ್ಟು ಮೀಸಲಾತಿ ನೀಡಿದ್ದು, ಅದರ ಅಡಿಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ನೀರಮಾನ್ವಿ ಗ್ರಾಮದ ಅಶ್ವತ್ಥಾಮ (ಪೂಜಾ) ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಆಯ್ಕೆಯಾಗಿದ್ದಾರೆ.

ಪೂಜಾ ಅವರ ಜತೆಚಿಕ್ಕಬಳ್ಳಾಪುರದ ಕೆ. ಸುರೇಶ್ ಬಾಬು (ಪವಿತ್ರಾ) ಹಾಗೂ ತುಮಕೂರು ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾತರೊಬ್ಬರು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ.ಪವಿತ್ರಾ ಇಂಗ್ಲಿಷ್ ಭಾಷಾ ಶಿಕ್ಷಕರಾಗಿ, ಪೂಜಾ ಮತ್ತು ತುಮಕೂರು ಜಿಲ್ಲೆಯ ವ್ಯಕ್ತಿಯು ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ.

‘ಹುಟ್ಟಿನಿಂದ ಗಂಡಾಗಿದ್ದರೂ ಮಾನಸಿಕವಾಗಿ ಹೆಣ್ಣಾಗಿದ್ದೆ. ಆದರೆ ಹೇಳಿಕೊಳ್ಳಲು ಭಯವಿತ್ತು. ಆ ನೋವು ಮರೆಯಲೆಂದೇ ಎಂ.ಎ, ಬಿ.ಎಡ್ ಮಾಡಿದೆ.ಲಿಂಗತ್ವ ಅಲ್ಪಸಂಖ್ಯಾತರೆಂದರೆ ಭಿಕ್ಷಾಟನೆ ಮಾಡುವವರು, ಸೆಕ್ಸ್ ವರ್ಕ್ ಮಾಡ್ತಾರೆ ಅನ್ನೋದು ಜನರ ಮನದಲ್ಲಿದೆ. ನಾನು ಆ ರೀತಿ ಆಗಬಾರದೆಂದು ಶಿಕ್ಷಕರ ಪರೀಕ್ಷೆ ಬರೆದೆ. ಕೊನೆಗೂ ಶಿಕ್ಷಕಿಯಾದೆ. ಆಗ ಮಗ ಆಗಿದ್ದೆ. ಈಗ ಮಗಳಾಗಿ ಸಾಧನೆ ಮಾಡಿದ್ದೀಯಾ ಎಂದು ತಾಯಿ ಸಂತಸದಿಂದಿದ್ದಾರೆ. ಸಮಾಜ ಗೌರವದಿಂದ ಕಂಡರೆ ನಾವೂ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕು ಕಟ್ಟಿಕೊಳ್ಳುತ್ತೇವೆ’ ಎನ್ನುತ್ತಾರೆ ಪೂಜಾ.

ನನಸಾದ ಟೀಚರ್ ಕನಸು

ಬಾಲ್ಯದಿಂದಲೇ ಟೀಚರ್ ಆಗಬೇಕೆಂದು ಕನಸು ಕಂಡಿದ್ದ ಚಿಕ್ಕಬಳ್ಳಾಪುರದ ಕೆ. ಸುರೇಶ್‌ ಬಾಬು (ಪವಿತ್ರಾ) ಅವರ ಕನಸು ಇದೀಗ ನನಸಾಗಿದೆ. ಇಂಗ್ಲಿಷ್ ಭಾಷಾ ಶಿಕ್ಷಕಿಯಾಗಿ ಆಯ್ಕೆಯಾಗಿರುವ ಅವರು, ಅದಕ್ಕೂ ಮುನ್ನ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಮನೆ ಪಾಠ ಮಾಡುತ್ತಿದ್ದರು.

‘ನಮ್ಮ ಕುಟುಂಬ ಮತ್ತು ಎನ್‌ಜಿಒಗಳ ನೆರವಿನಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಚಿಕ್ಕಬಳ್ಳಾಪುರದ ‘ನಿಸರ್ಗ ಸಂಸ್ಥೆ’ ನೆರವು ಮರೆಯಲಾಗದು.ಪಿಯುಸಿಯಲ್ಲಿ ವಿಜ್ಞಾನ ಓದಬೇಕೆಂಬ ಆಸೆಯಿತ್ತು. ಕೀಳರಿಮೆಯಿಂದ ಮಾಡಲಾಗಲಿಲ್ಲ. ಬದಲಿಗೆ ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಮಾಡಿದೆ. ಅಪ್ಪ– ಅಮ್ಮ ತೀರಿಹೋಗಿದ್ದಾರೆ. ಅಂಗವಿಕಲನಾಗಿರುವ ಅಣ್ಣನೇ ನನಗೆಲ್ಲ. ಅವನ ಬೆಂಬಲದಿಂದಾಗಿಯೇ ರೆಗ್ಯುಲರ್ ಬಿಎಡ್‌ ಮಾಡಿ, ಡಿಸ್ಟಿಂಕ್ಷನ್‌ನಲ್ಲಿ ಪಾಸಾದೆ. 2019ರಲ್ಲಿ ಸಾಮಾನ್ಯ ಕೋಟಾದಲ್ಲಿ ಪರೀಕ್ಷೆ ಬರೆದಿದ್ದೆ. ಆಗ ಬರೀ ಒಂದೂವರೆ ಅಂಕದಿಂದ ಸರ್ಕಾರಿ ನೌಕರಿ ವಂಚಿತಳಾಗಿದ್ದೆ. ಈ ಬಾರಿ ಮತ್ತಷ್ಟು ಪರಿಶ್ರಮ ಪಟ್ಟೆ. ಪರಿಶಿಷ್ಟ ಜಾತಿ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಮೀಸಲಾತಿಯಿಂದಾಗಿ ಸರ್ಕಾರಿ ನೌಕರಿ ಸಿಕ್ಕಿತು’ ಎಂದು ಸಂತಸ ವ್ಯಕ್ತಪಡಿಸಿದರು ಪವಿತ್ರಾ.

‘ನಮ್ಮ ಸಮುದಾಯದಲ್ಲಿ ನನ್ನಂತೆಯೇ ಹಲವು ವಿದ್ಯಾವಂತರು, ಪ್ರತಿಭಾವಂತರಿದ್ದಾರೆ. ಸರ್ಕಾರವಾಗಲೀ, ಖಾಸಗಿಯವರಾಗಲೀ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ’ ಎಂದರು.

ಸಮಾಜ ವಿಜ್ಞಾನ ಶಿಕ್ಷಕರಾಗಿ ಆಯ್ಕೆಯಾಗಿರುವ ತುಮಕೂರಿನ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿ ತಮ್ಮ ಗುರುತು ಬಹಿರಂಗಪಡಿಸಲು ಇಚ್ಛಿಸಲಿಲ್ಲ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT