ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಿರ್ಬಂಧಿತ ವಿದ್ಯುತ್‌: ಸರ್ಕಾರಕ್ಕೆ ಅಂತಿಮ ಗಡುವು

Published 18 ಏಪ್ರಿಲ್ 2024, 15:44 IST
Last Updated 18 ಏಪ್ರಿಲ್ 2024, 15:44 IST
ಅಕ್ಷರ ಗಾತ್ರ

ಬೆಂಗಳೂರು: ‘ಗೃಹ ಬಳಕೆದಾರರಿಗೆ ಮಾಲಿನ್ಯರಹಿತ, ಸುರಕ್ಷಿತ, ಶುದ್ಧ ಹಾಗೂ ಕೈಗೆಟುಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪೂರೈಸಲು ಕ್ರಿಯಾ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಕೊನೆಯ ಅವಕಾಶ ನೀಡಿದೆ.

ಈ ಸಂಬಂಧ ಕೋರಮಂಗಲದ ಮುರಳೀಧರ ರಾವ್ 2022ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

‘ಇದು ಕೊನೆಯ ಅವಕಾಶ. ಇನ್ನು ಮುಂದೆ ಕಾಲಾವಕಾಶ ನೀಡಲಾಗುವುದಿಲ್ಲ’ ಎಂದು ಪ್ರತಿವಾದಿಗಳಿಗೆ ತಾಕೀತು ಮಾಡಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಉತ್ತರಿಸುವಂತೆ ಸೂಚಿಸಿದೆ. ವಿಚಾರಣೆಯನ್ನು ಜೂನ್ 14ಕ್ಕೆ ಮುಂದೂಡಲಾಗಿದೆ.

ಅರ್ಜಿಯಲ್ಲಿ ಏನಿದೆ?: ‘ಮಾಲಿನ್ಯರಹಿತ, ಸುರಕ್ಷಿತ, ಶುದ್ಧ ಹಾಗೂ ಕೈಗೆಟುಕುವ ದರದಲ್ಲಿ ಅನಿರ್ಬಂಧಿತ ವಿದ್ಯುತ್ ಪಡೆಯುವುದು ಗೃಹ ಬಳಕೆದಾರರ ಹಕ್ಕು. ಅದನ್ನು ಪೂರೈಸುವುದು ಬೆಸ್ಕಾಂನ ಜವಾಬ್ದಾರಿ. ಆದರೆ, ಬೆಸ್ಕಾಂನ ಅಸಾಮರ್ಥ್ಯದಿಂದಾಗಿ ಗ್ರಾಹಕರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಕಾರಣ 2015ರಿಂದ 2022ರವರೆಗೆ ನೂರಕ್ಕೂ ಹೆಚ್ಚು ಸಾರ್ವಜನಿಕರು ವಿದ್ಯುತ್ ಅವಘಡಗಳಿಗೆ ಈಡಾಗಿ ಪ್ರಾಣ ಕಳೆದುಕೊಂಡಿದ್ದಾರೆ. ವಿದ್ಯುತ್ ಬಳಕೆಯಲ್ಲಿನ ದುರ್ಬಲ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಡೀಸೆಲ್ ಜನರೇಟರ್‌ಗಳನ್ನು ಹೆಚ್ಚಾಗಿ ಅವಲಂಬಿಸುವಂತಾಗಿದೆ. ಇದು ದುಬಾರಿ ವೆಚ್ಚ ಮತ್ತು ಮಾಲಿನ್ಯಕ್ಕೂ ಕಾರಣವಾಗುತ್ತಿದೆ’ ಎಂದು ಅರ್ಜಿಯಲ್ಲಿ ದೂರಲಾಗಿದೆ.

‘ಬೆಸ್ಕಾಂ ಸೇರಿದಂತೆ ರಾಜ್ಯದಾದ್ಯಂತ ವಿದ್ಯುತ್ ಸರಬರಾಜು ವ್ಯವಸ್ಥೆಯನ್ನು ಪುನರ್‌ರಚಿಸುವ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಇದಕ್ಕಾಗಿ ದೆಹಲಿ ಮಾದರಿಯನ್ನು ಅನುಸರಿಸುವಂತೆ ಸರ್ಕಾರ ಹಾಗೂ ಸಂಬಂಧಪಟ್ಟ ಪ್ರಾಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT