ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
505 ಹಳೆ KSRTC ಬಸ್‌ಗಳಿಗೆ ಹೊಸ ಕಳೆ
505 ಹಳೆ KSRTC ಬಸ್‌ಗಳಿಗೆ ಹೊಸ ಕಳೆ
ಖರೀದಿಯ ಹೊರೆ ತಪ್ಪಿಸುತ್ತಿರುವ ಬಸ್‌ ಕಾರ್ಯಾಗಾರಗಳು
Published 19 ಜುಲೈ 2023, 20:29 IST
Last Updated 19 ಜುಲೈ 2023, 20:29 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಬಸ್‌ಗಳ ಖರೀದಿಯ ಹೊರೆಯನ್ನು ಕೆಎಸ್‌ಆರ್‌ಟಿಸಿ ಕಾರ್ಯಾಗಾರಗಳು ಕಡಿಮೆ ಮಾಡುತ್ತಿವೆ. ಹಳೇ ಬಸ್‌ಗಳನ್ನೇ ನವೀಕರಿಸಿ ಹೊಸತಾಗಿ ಪರಿವರ್ತಿಸುತ್ತಿವೆ. 10 ತಿಂಗಳುಗಳಲ್ಲಿ 505 ನವೀಕೃತ ಬಸ್‌ಗಳನ್ನು ನಿರ್ಮಿಸಿವೆ.

ಕೊರೊನಾ ಕಾಲದಲ್ಲಿ ಕೆಎಸ್‌ಆರ್‌ಟಿಸಿಗೆ ಭಾರಿ ಹೊಡೆತ ಬಿದ್ದಿತ್ತು. ಹೊಸ ಬಸ್‌ ಖರೀದಿ ಮಾಡಿ ಇನ್ನಷ್ಟು ವೆಚ್ಚ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇಂಥ ಸಂದರ್ಭದಲ್ಲಿ ಹಳೇ ಬಸ್‌ಗಳನ್ನೇ ಸಂಪೂರ್ಣವಾಗಿ ನವೀಕರಿಸಲು ಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ನಿರ್ಧಾರ ಕೈಗೊಂಡಿದ್ದರು. ಅಲ್ಲಿವರೆಗೆ ಕಾರ್ಯಾಗಾರಗಳು ಬಸ್‌ ರಿಪೇರಿಗಷ್ಟೇ ಸೀಮಿತವಾಗಿದ್ದವು.

‘ಹೊಸ ಬಸ್‌ ಖರೀದಿಗೆ ಕನಿಷ್ಠ ₹ 40 ಲಕ್ಷ ಬೇಕಾಗುತ್ತದೆ. 500 ಬಸ್‌ ಅಂದರೆ ₹ 200 ಕೋಟಿ ಬೇಕಾಗುತ್ತದೆ. ಅಷ್ಟು ಸಾಲ ಮಾಡಿದ್ರೆ ವರ್ಷಕ್ಕೆ ₹ 18 ಕೋಟಿ ಬಡ್ಡಿ ಕಟ್ಟಬೇಕಿತ್ತು. ಇದೀಗ 500 ಬಸ್‌ಗಳು ಕೇವಲ ₹ 15 ಕೋಟಿಯಲ್ಲಿ ನವೀಕೃತವಾಗಿವೆ’ ಎಂದು

ಹಳೇ ಬಸ್‌ಗಳ ನವೀಕರಣವು ₹ 3 ಲಕ್ಷದಿಂದ ₹ 4 ಲಕ್ಷದೊಳಗೆ ಆಗುತ್ತದೆ. ಅಂದರೆ ಒಂದು ಬಸ್‌ ಖರೀದಿ ಮಾಡುವ ವೆಚ್ಚದಲ್ಲಿ 10 ನವೀಕೃತ ಬಸ್‌ಗಳು ತಯಾರಾಗುತ್ತಿವೆ’ ಎಂದು ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೆಎಸ್‌ಆರ್‌ಟಿಸಿಯಲ್ಲಿ ವಿಭಾಗವಾರು 15 ಕಾರ್ಯಾಗಾರಗಳಿವೆ. ಬಸ್‌ಗಳಲ್ಲಿ ದೊಡ್ಡಮಟ್ಟದ ದುರಸ್ತಿ ಇದ್ದಾಗ ಪ್ರಾದೇಶಿಕ ಮಟ್ಟಕ್ಕೆ ಕಳುಹಿಸಲಾಗುತ್ತಿತ್ತು. ಕೆಂಗೇರಿ ಮತ್ತು ಹಾಸನದಲ್ಲಿ ಪ್ರಾದೇಶಿಕ ಕಾರ್ಯಾಗಾರಗಳಿವೆ. ಎಲ್ಲ ಕಡೆಗಳಲ್ಲಿ ನಮ್ಮ ಎಂಜಿನಿಯರ್‌ಗಳು ಬಸ್‌ ನವೀಕರಿಸಿ, ಅವರ ಪ್ರತಿಭೆಯನ್ನು ತೋರಿಸಿದ್ದಾರೆ. ಜತೆಗೆ ನಿಗಮವನ್ನು ಉಳಿಸಲು ದೊಡ್ಡ ಕೊಡುಗೆ ನೀಡಿದ್ದಾರೆ. ಇರುವ ಎಂಜಿನಿಯರ್‌ಗಳೇ ಕೆಲಸ ಮಾಡಿದ್ದು, ಹೊರಗಿನಿಂದ ಒಬ್ಬರನ್ನೂ ಬಳಸಿಕೊಂಡಿಲ್ಲ’ ಎಂದು ಅವರು ಹೆಮ್ಮೆ ಪಟ್ಟುಕೊಂಡರು.

10 ಲಕ್ಷ ಕಿಲೋಮೀಟರ್‌ಗಳಿಗಿಂತ ಹೆಚ್ಚು ಸಂಚರಿಸಿದ ಬಸ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನವೀಕರಣದಿಂದಾಗಿ ಈ ಬಸ್‌ಗಳು ಮತ್ತೆ ₹ 3 ಲಕ್ಷ ಕಿಲೋಮೀಟರ್‌ ಓಡಲಿವೆ. ನಾಲ್ಕೈದು ವರ್ಷಗಳ ಸೇವೆ ಸಿಗಲಿದೆ. 10–11 ವರ್ಷಕ್ಕೆ ನಿಲುಗಡೆಗೊಳ್ಳುತ್ತಿದ್ದ ಬಸ್‌ಗಳು ಇದರಿಂದಾಗಿ 15 ವರ್ಷಗಳ ಕಾಲ ಸಂಚರಿಸಲಿವೆ. ಸಾರಿಗೆ ಕಾನೂನಿನ ಪ್ರಕಾರವೇ ವಾಹನಗಳಿಗೆ 15 ವರ್ಷ ಓಡಾಡಲು ಅವಕಾಶ ಇದೆ’ ಎಂದು ಮಾಹಿತಿ ನೀಡಿದರು.

‘ತುಕ್ಕು ಹಿಡಿದ ಮತ್ತು ಹಾನಿಗೊಳಗಾದ ಎಲ್ಲ ಭಾಗಗಳನ್ನು ಹೊರತೆಗೆಯುತ್ತೇವೆ. ಪೂರ್ತಿ ಬಸ್‌ ಬಿಚ್ಚಿ ಶುರುವಿಂದ  ರಚನೆ ಕಾರ್ಯ ಮಾಡುತ್ತೇವೆ. ಪ್ಯಾನೆಲಿಂಗ್ ಮುಗಿದ ಮೇಲೆ ಬಸ್‌ನ ಹೊರಭಾಗಕ್ಕೆ ಕಬ್ಬಿಣದ ಹೊಸ ಶೀಟ್ ಅಳವಡಿಸಲಾಗುತ್ತದೆ. ಕಿಟಕಿಗಳು, ಅದರ ಗ್ಲಾಸ್‌, ಸೀಟ್‌ ಕುಶನ್‌ ಸಹಿತ ಎಲ್ಲವನ್ನೂ ಬದಲಾಯಿಸುತ್ತೇವೆ’ ಎಂದು ಮೆಕ್ಯಾನಿಕಲ್‌ ಎಂಜಿನಿಯರ್‌ಗಳು ತಿಳಿಸಿದರು.

‘ಎಂಜಿನ್‌ ಹದಗೆಟ್ಟಿದ್ದರೆ ಸರಿಪಡಿಸುವ ತಜ್ಞ ಮೆಕ್ಯಾನಿಕ್‌ಗಳು ನಮ್ಮಲ್ಲಿದ್ದಾರೆ. ಹೊಸ ಬಸ್‌ಗಳಂತೆ ಕಾಣುವಂತೆ ಮಾತ್ರ ಮಾಡುವುದಲ್ಲ. ಇಂಧನ ಬಳಕೆ, ಗುಣಮಟ್ಟ ಕೂಡ ಅದೇ ರೀತಿ ಇರುವಂತೆ ಮಾಡುತ್ತೇವೆ’ ಎಂದು ವಿವರಿಸಿದರು.

ಇನ್ನೂ 500 ಬಸ್‌ಗಳು ನವೀಕರಣಗೊಳ್ಳುತ್ತಿವೆ. ಇದರಿಂದ ಕೆಎಸ್‌ಆರ್‌ಟಿಸಿ ಬಸ್‌ ಕೊರತೆ ಸಮಸ್ಯೆ ಒಂದಷ್ಟು ಕಡಿಮೆಯಾಗಲಿದೆ.

ಬಸ್‌ನ ಹೊರಭಾಗಕ್ಕೆ ಲೋಹದ ಹೊಸ ಹಾಳೆ ಅಳವಡಿಸುತ್ತಿರುವ ಮಹಿಳಾ ಮೆಕ್ಯಾನಿಕ್‌ಗಳು
ಬಸ್‌ನ ಹೊರಭಾಗಕ್ಕೆ ಲೋಹದ ಹೊಸ ಹಾಳೆ ಅಳವಡಿಸುತ್ತಿರುವ ಮಹಿಳಾ ಮೆಕ್ಯಾನಿಕ್‌ಗಳು
ಕೆಎಸ್‌ಆರ್‌ಟಿಸಿ ₹ 850 ಕೋಟಿ ಸಾಲದಲ್ಲಿದೆ. ಬಸ್‌ ಖರೀದಿಯಿಂದ ಮತ್ತಷ್ಟು ಹೊರೆಯಾಗುತ್ತದೆ. ಅದನ್ನು ನವೀಕರಣವು ತಪ್ಪಿಸಿದೆ.
– ಅನ್ಬುಕುಮಾರ್‌ ವ್ಯವಸ್ಥಾಪಕ ನಿರ್ದೇಶಕ ಕೆಎಸ್‌ಆರ್‌ಟಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT