ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಅವ್ಯವಹಾರ: ಸಿಬಿಐ ತನಿಖೆ ಖಚಿತ

ಬೆಂಗಳೂರಿನ ಕಂಪನಿಗಳೇ ಅಧಿಕ; ಅಕ್ರಮಕ್ಕಾಗಿ ಆರ್‌ಬಿಎಲ್‌ನ ಹೈದರಾಬಾದ್ ಶಾಖೆಯಲ್ಲಿ ಖಾತೆ
Published 31 ಮೇ 2024, 16:49 IST
Last Updated 31 ಮೇ 2024, 23:26 IST
ಅಕ್ಷರ ಗಾತ್ರ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಲವು ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳ ಖಾತೆಗಳಿಗೆ ಅಕ್ರಮವಾಗಿ ₹89.62 ಕೋಟಿ ವರ್ಗಾವಣೆ ಮಾಡಿರುವ ಹಗರಣದ ತನಿಖೆ ಸಿಬಿಐಗೆ ವರ್ಗಾವಣೆಯಾಗುವುದು ಬಹುತೇಕ ಖಚಿತವಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಪೊಲೀಸ್‌ ಠಾಣೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ನಿಗಮದ ಅಧಿಕಾರಿಗಳು ನೀಡಿರುವ ದೂರನ್ನು ಆಧರಿಸಿ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಇತರ ಅಧಿಕಾರಿಗಳ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.

ಆದರೆ, ಈ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವಂತೆ ಕೋರಿ ಯೂನಿಯನ್‌ ಬ್ಯಾಂಕ್‌ ಆಡಳಿತ ಮಂಡಳಿ ಸಿಬಿಐ ಅನ್ನು ಕೋರಿದೆ. ₹3 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಬ್ಯಾಂಕ್‌ ವಂಚನೆ ಪ್ರಕರಣಗಳನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕೆಂಬ ಆದೇಶವಿದೆ. ಬ್ಯಾಂಕ್‌ ವಂಚನೆ ಪ್ರಕರಣವು ₹50 ಕೋಟಿಯನ್ನು ಮೀರಿದ್ದರೆ ಆ ಬ್ಯಾಂಕ್‌ನ ವಿಚಕ್ಷಣ ಅಧಿಕಾರಿಯೇ ಸಿಬಿಐ ಅಧಿಕಾರಿಗಳಿಗೆ ದೂರು ಸಲ್ಲಿಸಬೇಕೆಂದು 2019ರ ನವೆಂಬರ್‌ 6ರಂದು ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿತ್ತು. ಈ ಎರಡೂ ಕ್ರಮಗಳು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಗರಣಕ್ಕೆ ಅನ್ವಯವಾಗುತ್ತವೆ ಎಂದು ಸಿಬಿಐನಲ್ಲಿ ದೀರ್ಘ ಕಾಲ ಕಾರ್ಯನಿರ್ವಹಿಸಿದ ಅನುಭವವಿರುವ ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

₹89.62 ಕೋಟಿ ವರ್ಗಾವಣೆ: ವಾಲ್ಮೀಕಿ ಅಭಿವೃದ್ಧಿ ನಿಗಮವು ಯೂನಿಯನ್‌ ಬ್ಯಾಂಕ್‌ನ ಎಂ.ಜಿ. ರಸ್ತೆ ಶಾಖೆಯಲ್ಲಿ ಹೊಂದಿದ್ದ ಖಾತೆಯಿಂದ ಆರ್‌ಬಿಎಲ್‌ ಬ್ಯಾಂಕ್‌ನ (ರತ್ನಾಕರ ಬ್ಯಾಂಕ್‌ ಲಿಮಿಟೆಡ್‌) ಹೈದರಾಬಾದ್‌ ಬಂಜಾರಾ ಹಿಲ್ಸ್‌ ಶಾಖೆಯಲ್ಲಿನ ಹತ್ತು ಖಾಸಗಿ ಕಂಪನಿಗಳು ಮತ್ತು ಎಂಟು ವ್ಯಕ್ತಿಗಳ ಖಾತೆಗಳಿಗೆ ₹89.62 ಕೋಟಿ ಅಕ್ರಮವಾಗಿ ವರ್ಗಾವಣೆ ಆಗಿದೆ.

ತರಬೇತಿ ಸಂಸ್ಥೆಗಳು, ಮಾನವ ಸಂಪನ್ಮೂಲ ನಿರ್ವಹಣೆ, ಭದ್ರತಾ ಏಜೆನ್ಸಿ, ವಾಣಿಜ್ಯ ವಹಿವಾಟು ಸಂಸ್ಥೆ, ಸಾಫ್ಟ್‌ವೇರ್‌ ಕಂಪನಿಗಳ ಹೆಸರಿನಲ್ಲಿರುವ ಖಾತೆಗಳಿಗೆ ‌ಮಾರ್ಚ್‌ 3ರಿಂದ ಮಾರ್ಚ್‌ 30ರ ಅವಧಿಯಲ್ಲಿ ₹49.52 ಕೋಟಿ ವರ್ಗಾವಣೆ ಆಗಿದೆ. ವ್ಯಕ್ತಿಗಳ ಹೆಸರಿನಲ್ಲಿರುವ ಎಂಟು ಖಾತೆಗಳಿಗೆ ಮಾರ್ಚ್‌ 30ರಂದು ಒಂದೇ ಚೆಕ್‌ ಬಳಸಿ ₹40.10 ಕೋಟಿ ವರ್ಗಾಯಿಸಿರುವುದು ಪತ್ತೆಯಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆಗಳನ್ನು ಹೊಂದಿರುವ ಬಹುತೇಕ ಖಾಸಗಿ ಕಂಪನಿಗಳು ಬೆಂಗಳೂರಿನವು. ಕೆಲವು ಮಾತ್ರ ಹೊರ ರಾಜ್ಯದಲ್ಲಿವೆ. ಈ ಎಲ್ಲ ಕಂಪನಿಗಳ ಹೆಸರಿನಲ್ಲಿ ಆರ್‌ಬಿಎಲ್‌ ಬ್ಯಾಂಕ್‌ನ ಬಂಜಾರಾ ಹಿಲ್ಸ್‌ ಶಾಖೆಯಲ್ಲಿ ಖಾತೆ ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿಕೊಳ್ಳಲಾಗಿದೆ.

ಈ ಎಲ್ಲ ಮೊತ್ತವನ್ನೂ ಸದರಿ ಬ್ಯಾಂಕ್‌ ಖಾತೆಗಳಿಂದ ಮುಟ್ಟುಗೋಲು ಹಾಕಿಕೊಳ್ಳುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ಅವರು ಆರ್‌ಬಿಎಲ್‌ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್‌. ಸುಬ್ರಮಣಿಯಕುಮಾರ್‌ ಮತ್ತು ಕಾರ್ಪೋರೇಟ್‌ ಕಚೇರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ. ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇನ್ನೂ ಮರಳಿ ಬಾರದ ಹಣ!

ಅಕ್ರಮವಾಗಿ ವರ್ಗಾವಣೆಯಾಗಿರುವ ಮೊತ್ತದಲ್ಲಿ ₹50 ಕೋಟಿಯನ್ನು ಮಂಗಳವಾರ ಸಂಜೆಯೊಳಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ವರ್ಗಾಯಿಸುವುದಾಗಿ ಯೂನಿಯನ್‌ ಬ್ಯಾಂಕ್‌ ಅಧಿಕಾರಿಗಳು ಭರವಸೆ ನೀಡಿದ್ದರು. ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಕೂಡ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದರು.

ಶುಕ್ರವಾರ ಸಂಜೆಯವರೆಗೆ ಯಾವ ಮೊತ್ತವೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಗೆ ಮರಳಿ ಬಂದಿಲ್ಲ ಎಂಬುದನ್ನು ಇಲಾಖೆಯ ಮೂಲಗಳು ಖಚಿತಪಡಿಸಿವೆ.

‘ತನಿಖೆ ಸಿಬಿಐಗೆ ವರ್ಗಾವಣೆ ಆಗಬಹುದು’

‘₹3 ಕೋಟಿಗಿಂತ ಹೆಚ್ಚಿನ ಮೊತ್ತದ ಬ್ಯಾಂಕ್‌ ವಂಚನೆ ನಡೆದರೆ ಪ್ರಕರಣದ ತನಿಖೆ ಸಿಬಿಐಗೆ ವರ್ಗಾವಣೆ ಆಗಬೇಕೆಂಬ ಆದೇಶ ಇದೆ. ಆ ಪ್ರಕಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯೂ ಸಿಬಿಐಗೆ ವರ್ಗಾವಣೆ ಆಗಬಹುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.

ಈ ಕುರಿತು ಸುದ್ದಿಗಾರರಿಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ‘ಈಗ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಂದೇ ಪ್ರಕರಣಕ್ಕೆ ಎರಡು ತನಿಖೆ ನಡೆಯುವುದಿಲ್ಲ. ಸಿಬಿಐ ತನಿಖೆ ಕೈಗೆತ್ತಿಕೊಂಡರೆ ಪ್ರಕರಣವನ್ನು ವರ್ಗಾವಣೆ ಮಾಡಲಾಗುತ್ತದೆ’ ಎಂದರು.

ಖರ್ಬೀಕರ್ ನೇತೃತ್ವದಲ್ಲಿ ಎಸ್‌ಐಟಿ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ. ಚಂದ್ರಶೇಖರನ್‌ ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿವಮೊಗ್ಗದ ವಿನೋಬನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ಮತ್ತು ನಿಗಮದ ಹಣದ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಹೈಗ್ರೌಂಡ್ಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಸಿಐಡಿ ಆರ್ಥಿಕ ಅಪರಾಧಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮನೀಷ್ ಖರ್ಬೀಕರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ಗೃಹ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ.

ಬೆಂಗಳೂರು ದಕ್ಷಿಣ ಸಂಚಾರ ವಿಭಾಗದ ಡಿಸಿಪಿ ಶಿವಪ್ರಕಾಶ್‌ ದೇವರಾಜು, ರಾಜ್ಯ ಗುಪ್ತದಳದ ಎಸ್‌ಪಿ ಹರಿರಾಮ್‌ ಶಂಕರ್‌ ಮತ್ತು ಸಿಐಡಿ ಎಸ್‌ಪಿ ರಾಘವೇಂದ್ರ ಕೆ. ಹೆಗಡೆ ಅವರನ್ನು ಎಸ್‌ಐಟಿ ಸದಸ್ಯರನ್ನಾಗಿ ನೇಮಿಸಲಾಗಿದೆ.

ಈ ಎರಡು ಪ್ರಕರಣಗಳ ಜತೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಆರ್ಥಿಕ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ದಾಖಲಾಗಬಹುದಾದ ಎಲ್ಲ ಪ್ರಕರಣಗಳ ತನಿಖೆಯ ಹೊಣೆಯನ್ನು ಎಸ್‌ಐಟಿಗೆ ವಹಿಸಲಾಗಿದೆ. ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಿ ಸಿಐಡಿ ಡಿಜಿಪಿ ಮೂಲಕ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಲಾಗಿದೆ.

‘₹187 ಕೋಟಿಯಲ್ಲಿ ಸಿ.ಎಂ ಪಾಲು ಎಷ್ಟು?’

ಶಿವಮೊಗ್ಗ: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕ ರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವೇನು ಎಂಬುದು ಸ್ಪಷ್ಟವಾಗ ಬೇಕು. ₹ 187 ಕೋಟಿಯಲ್ಲಿ ಅವರಿಗೆ ಎಷ್ಟು ಪಾಲು ಸಂದಾಯವಾಗಿದೆ?’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಪ್ರಶ್ನಿಸಿದರು.

ಆತ್ಮಹತ್ಯೆ ಮಾಡಿಕೊಂಡ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಪಿ.ಚಂದ್ರ ಶೇಖರನ್‌ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಸಿದ್ದರಾಮಯ್ಯ ಅವರೇ ಹಣಕಾಸು ಖಾತೆ ನಿಭಾಯಿಸುತ್ತಾರೆ. ಹಣಕಾಸು ಸಚಿವಾಲಯದ ಅನುಮತಿ ಇಲ್ಲದೇ ಇಷ್ಟೊಂದು ದೊಡ್ಡ ಮೊತ್ತದ ಹಣ ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಲು ಸಾಧ್ಯವೇ ಇಲ್ಲ’ ಎಂದರು.

‘ಹಗರಣದಲ್ಲಿ ಒಬ್ಬ ಮಂತ್ರಿ ಮಾತ್ರವಲ್ಲ, ಅನೇಕ ಮಂತ್ರಿಗಳು ಭಾಗಿಯಾಗಿದ್ದಾರೆ. ಇದಕ್ಕೆ ಮುಖ್ಯಮಂತ್ರಿಯ ಸಹಕಾರವೂ ಇದೆ’ ಎಂದು ಆರೋಪಿಸಿದ ಆರ್‌.ಅಶೋಕ್‌, ‘ನಿಗಮದ ಹಣ ಕಳವು ಮಾಡಿದವರು ಆರಾಮಾಗಿ ಓಡಾಡಿಕೊಂಡಿದ್ದಾರೆ. ಅವರೆಲ್ಲ ಮುಖ್ಯಮಂತ್ರಿ ವಿರುದ್ಧ ಹೇಳಿಕೆ ನೀಡುತ್ತಾರೆ ಎಂಬ ಭಯದಿಂದಲೇ ಬಂಧಿಸದೇ ಬಿಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳ ಮೇಲೆ ನಿರಂತರವಾಗಿ ದೌರ್ಜನ್ಯ, ದಬ್ಬಾಳಿಕೆ ನಡೆದಿರುವುದು ಕಾಣುತ್ತೇವೆ. ನಾವು ಆ ಭಾಗ್ಯ ಈ ಭಾಗ್ಯ ಕೊಟ್ಟೆವು ಎನ್ನುತ್ತಾರೆ. ಭಾಗ್ಯ, ಭಾಗ್ಯ ಅನ್ನುತ್ತಲೇ ನಿಷ್ಠಾವಂತ ಅಧಿಕಾರಿಗಳ ಬದುಕುವ ಭಾಗ್ಯವನ್ನೇ ಸಿದ್ದರಾಮಯ್ಯ ಕಿತ್ತುಕೊಂಡುಬಿಟ್ಟಿದ್ದಾರೆ’ ಎಂದು ಹರಿಹಾಯ್ದರು.

‘ಚಂದ್ರಶೇಖರನ್‌ ಕುಟುಂಬದವರು ಕೇಳದೇ ಇದ್ದರೂ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಇದೆಲ್ಲವೂ ಹಗರಣ ಮುಚ್ಚಿಹಾಕುವ ಷಡ್ಯಂತ್ರ. ಈಗ ಸಿಬಿಐ ತನಿಖೆಗೆ ಬ್ಯಾಂಕ್‌ನವರೇ ವಿನಂತಿ ಮಾಡಿದ್ದಾರೆ. ಹೇಗಿದ್ದರೂ ಸತ್ಯ ಹೊರಬರಲಿದೆ. ಸರ್ಕಾರದ ಮಾನ ಮರ್ಯಾದೆ ಉಳಿಸಿಕೊಳ್ಳಲಾದರೂ ಸಿಬಿಐ ತನಿಖೆಗೆ ಕೊಟ್ಟು ಕೈ ತೊಳೆದುಕೊಳ್ಳಲಿ’ ಎಂದರು.

‘ಪರಮೇಶ್ವರ ಅಸಹಾಯಕ ಗೃಹ ಸಚಿವ’

ಶಿವಮೊಗ್ಗ: ಪ್ರಕರಣದ ತನಿಖೆ ಸಿಬಿಐಗೆ ಕೊಡುವುದಿಲ್ಲ ಎಂಬ ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿಕೆಗೆ ಪ್ರತಿಕ್ರಿಯಿಸಿದ ಆರ್.ಅಶೋಕ, ‘ಪರಮೇಶ್ವರ ಒಬ್ಬ ಅಸಹಾಯಕ ಗೃಹಸಚಿವ. ದಾರಿಯಲ್ಲಿ ಹೋಗುವವರೆಲ್ಲ ಅವರ ಖಾತೆ ನಿರ್ವಹಿಸುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಆಯಾ ಜಿಲ್ಲೆಗಳ ಮಂತ್ರಿಗಳು ಕೈ ಆಡಿಸುತ್ತಾರೆ. ಹೀಗಾಗಿ ಅವರಿಗೆ ಇಲಾಖೆಯ ಬಗ್ಗೆ ಆಸಕ್ತಿಯೂ ಇಲ್ಲ. ಗಮನವೂ ಇಲ್ಲ’ ಎಂದರು.

ಪ್ರಾಮಾಣಿಕ ಅಧಿಕಾರಿ ಸರ್ಕಾರದ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವುದೇ ಕಾಂಗ್ರೆಸ್‌ನ ಒಂದು ವರ್ಷದ ಸಾಧನೆ. ಮೊದಲ ವಿಕೆಟ್ (ಸಚಿವ ಬಿ.ನಾಗೇಂದ್ರ ರಾಜೀನಾಮೆ) ಪತನವಾಗುವವರೆಗೂ ನಾವು ಬಿಡುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT