ಬೆಂಗಳೂರು: ‘ಬ್ಯಾಂಕಿಂಗ್ ವಲಯದ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಬೇಕಾದರೆ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಮೊತ್ತದ ದುರ್ಬಳಕೆ ಆರೋಪದ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸುವ ಅಗತ್ಯವಿದೆ’ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾವನ್ನು ಹೈಕೋರ್ಟ್‌ನಲ್ಲಿ ಪ್ರತಿನಿಧಿಸುತ್ತಿರುವ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಬಲವಾಗಿ ಪ್ರತಿಪಾದಿಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವರ್ಗಾಯಿಸಬೇಕು’ ಎಂದು ಕೋರಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಯೂನಿಯನ್ ಬ್ಯಾಂಕ್ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ಆರ್.ವೆಂಕಟರಮಣಿ, ‘ತನಿಖೆ ನಡೆಸುವಂತೆ ಕೋರಿ ಬ್ಯಾಂಕ್ ಸಿಬಿಐಗೆ ಪತ್ರ ಬರೆದಿತ್ತು. ದೂರು ದಾಖಲಾಗಿದ್ದು, ಸಿಬಿಐ ತನಿಖೆ ಕೈಗೆತ್ತಿಕೊಂಡಂತಾಗಿದೆ. ಹೀಗಾಗಿ, ಬ್ಯಾಂಕುಗಳ ಹಿತದೃಷ್ಟಿಯಿಂದ ಕೋಟ್ಯಂತರ ರೂಪಾಯಿ ದುರುಪಯೋಗ ಆರೋಪದ ಇಂತಹ ತನಿಖೆಯನ್ನು ಸಿಬಿಐಗೆ ವಹಿಸುವುದು ಅವಶ್ಯ ಇದೆ’ ಎಂದರು.
‘ಈ ದಿನಗಳಲ್ಲಿ ಬ್ಯಾಂಕುಗಳು ಹಲವು ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬ್ಯಾಂಕಿಂಗ್ ಉದ್ಯಮ ದೇಶದ ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ. ವಿತ್ತೀಯ ಶಿಸ್ತುಗಳು ಭಾರಿ ದೊಡ್ಡ ಪರಿಣಾಮಗಳನ್ನು ಬೀರುತ್ತಿವೆ. ಈ ದೆಸೆಯಿಂದಲೇ, ಬ್ಯಾಂಕುಗಳ ಪ್ರಾಮಾಣಿಕತೆಯನ್ನು ಖಾತ್ರಿಪಡಿಸಲು ಆರ್‌ಬಿಐ ಮಾಸ್ಟರ್ ಸುತ್ತೋಲೆಯನ್ನು ಹೊರಡಿಸಿದೆ. ಬ್ಯಾಂಕುಗಳ ವಹಿವಾಟಿನ ಯಾವುದೇ ಅಕ್ರಮಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಅಗತ್ಯವಿದೆ ಎಂದು ಹೇಳಿದೆ. ಹಾಗಾಗಿ, ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನೂ ಸಿಬಿಐ ತನಿಖೆಗೆ ವಹಿಸುವುದೇ ಸೂಕ್ತ’ ಎಂದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಾಜ್ಯ ಸರ್ಕಾರದ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿ.ಜಿ.ಭಾನುಪ್ರಕಾಶ್, ‘ಅರ್ಜಿಯ ಸಿಂಧುತ್ವದ ಬಗ್ಗೆ ಪ್ರಾಥಮಿಕ ಪ್ರಶ್ನೆ ಇದೆ. ಏಕೆಂದರೆ ಇದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಧ್ಯದ ವ್ಯಾಜ್ಯ’ ಎಂದರು.
ಆದರೆ ಇದನ್ನು ಅಲ್ಲಗಳೆದ ನ್ಯಾಯಪೀಠ, ‘ಕೋರ್ಟ್ ಇದನ್ನು ಒಪ್ಪುವುದಿಲ್ಲ, ಇದು ಖಂಡಿತಾ ರಾಜ್ಯ ಮತ್ತು ಕೇಂದ್ರದ ನಡುವಿನ ವ್ಯಾಜ್ಯವಲ್ಲ’ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಪೀಠವು ‘ಅರ್ಜಿಯ ಸಿಂಧುತ್ವದ ಬಗ್ಗೆ ನಿರ್ಧರಿಸುತ್ತೇನೆ’ ಎಂದು ಹೇಳಿ ಇದೇ 30ಕ್ಕೆ ವಿಚಾರಣೆ ಮುಂದೂಡಿತು. ಸಿಬಿಐ ಪರ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.