ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಬಿಡುಗಡೆ

ಶ್ವಾಸಕೋಶ ಕ್ಯಾನ್ಸರ್: ಮಾನವೀಯತೆ ಆಧಾರದಲ್ಲಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
Last Updated 20 ಡಿಸೆಂಬರ್ 2022, 4:46 IST
ಅಕ್ಷರ ಗಾತ್ರ

ಮೈಸೂರು: ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರು, ಜಾಮೀನಿನ ಮೇಲೆ ಮಂಗಳವಾರ ಬೆಳಿಗ್ಗೆ ಇಲ್ಲಿನ ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡರು.

ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಸುಪ್ರೀಂ ಕೋರ್ಟ್ ಮಾನವೀಯತೆ ಆಧಾರದ ಮೇಲೆ ನ.26ರಂದು ಜಾಮೀನು ಮಂಜೂರು ಮಾಡಿತ್ತು.

ಸುಪ್ರೀಂ ಆದೇಶದನ್ವಯ ವಕೀಲ ಬಾಬುರಾಜ್ ಅವರು ಚಾಮರಾಜನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಜ್ಞಾನ ಪ್ರಕಾಶ್ ಬಿಡುಗಡೆಗೆ ಅನುಮತಿ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ ₹ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯವು ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಟ್ ಅವರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.

ಜ್ಞಾನಪ್ರಕಾಶ್ ಯಾರು?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಮಾರ್ಟಳ್ಳಿ ಸಂದನಪಾಳ್ಯದ ಜ್ಞಾನಪ್ರಕಾಶ್, 1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯವು 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.

2014ರಲ್ಲಿ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯಿಂದ ಜೀವಾವಧಿಗೆ ಇಳಿಸಿ ತೀರ್ಪು ನೀಡಿತ್ತು.

ವೀರಪ್ಪನ್ 2004ರ ಅ.18ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟರೆ, ಜೈಲಿನಲ್ಲಿ ಶಿಕ್ಷೆ‌ ಅನಭವಿಸುತ್ತಿದ್ದ
ಸೈಮನ್, ಬಿಲವೇಂದ್ರನ್ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ ಮಾತ್ರ ಇದ್ದಾರೆ.

ಕಳೆದ 29 ವರ್ಷಗಳಿಂದ ಬೆಳಗಾವಿಯ ಹಿಂಡಲಗ ಹಾಗೂ ಮೈಸೂರು ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸಿದ್ದ 68ವರ್ಷದ ಜ್ಞಾನ ಪ್ರಕಾಶ್, ಒಂದೂವರೆ ವರ್ಷದಿಂದ ಶ್ವಾಸಕೋಶ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರಿಗೆ ಬೆಂಗಳೂರಿನ ಕಿದ್ವಾಯಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ವಕೀಲರಾದ ವಿಕ್ರಂ ಹಾಗೂ ಭಾರತಿ ಅವರು, ಸುಪ್ರೀಂ ಕೋರ್ಟ್ ನಲ್ಲಿ ಜ್ಞಾನ ಪ್ರಕಾಶ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಬಿಡುಗಡೆಗೆ ಪುರಸ್ಕರಿಸಿದೆ.

'ಎರಡು ವರ್ಷದಿಂದ ಹುಶಾರಿರಲಿಲ್ಲ. ಶ್ವಾಸಕೋಶದಲ್ಲಿ ಹುಣ್ಣಾಗಿದೆ, ಕ್ಯಾನ್ಸರ್ ಎಂದರು. ಕಿದ್ವಾಯಿ ಆಸ್ಪತ್ರೆಯಲ್ಲಿ ಆರು ಬಾರಿ ಕಿಮೊಥೆರಪಿ ಮಾಡಿದ್ದಾರೆ. ಜೈಲಿಗೆ ಸೇರಿದಾಗ ಮಕ್ಕಳೆಲ್ಲ ಚಿಕ್ಕವರು. ಮೂವರು ಮಕ್ಕಳು ಇದ್ದಾರೆ. ಅವರ ಜೊತೆಗೆ ಕೊನೆಯ ದಿನಗಳಲ್ಲಿ ಇರುವ ಹಾಗೂ ಚಿಕಿತ್ಸೆ ಪಡೆಯುವ ಅವಕಾಶವನ್ನು ಕೋರ್ಟ್ ನೀಡಿದೆ' ಎಂದು ಭಾವುಕರಾದರು.

'ಜೈಲಿನಲ್ಲಿ ಮಗ್ಗ ಹಾಗೂ ವಾಚರ್ ಕೆಲಸ ಮಾಡಿದ್ದೆ. ಎಲ್ಲರೂ ಚೆನ್ನಾಗಿ ನೋಡಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಕೆಲಸ ಮಾಡಲು ಆಗುತ್ತಿರಲಿಲ್ಲ' ಎಂದರು.

ಹಲಸಿನ ಗಿಡದ ಜೊತೆ ಬಂದರು

ಜೈಲಿನಿಂದ ತಮ್ಮ ವಸ್ತುಗಳು ಹಾಗೂ ಹಲಸಿನ ಸಸಿಯೊಂದಿಗೆ ಆಚೆ ಬಂದ ಜ್ಞಾನಪ್ರಕಾಶ್ ಅವರನ್ನು ನೋಡಿದ ಸೋದರರಾದ ಆಂಥೋಣಿ, ಥಾಮಸ್ ಸೇರಿದಂತೆ ಸಂಬಂಧಿಗಳು ಭಾವುಕರಾದರು.

ಕರ್ನಾಟಕ ತಮಿಳರ್ ಕಳಂ ಪ್ರಧಾನ ಕಾರ್ಯದರ್ಶಿ ಅರ್ಪುದರಾಜ್, ಮಾರ್ಟಳ್ಳಿ ಸಂದನಪಾಳ್ಯದ ಮದಲೆ ಸ್ವಾಮಿ, ಅನ್ಬುರಾಜ್, ವಕೀಲ‌ ಬಾಬುರಾಜ್ ಇದ್ದರು.

ಪಾಲಾರ್ ಬಾಂಬ್ ಸ್ಫೋಟ ಪ್ರಕರಣ

ಪಾಲಾರ್, ಮಹದೇಶ್ವರ ಬೆಟ್ಟಕ್ಕೆ ಹೊಂದಿಕೊಂಡಿರುವ ಗ್ರಾಮ. ಇದರ ಸುತ್ತಮುತ್ತ ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ ವೀರಪ್ಪನ್ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದ. 1993 ರ ಏಪ್ರಿಲ್ 9 ರಂದು ತಮಿಳುನಾಡಿನ ಅಂದಿನ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಗೋಪಾಲಕೃಷ್ಣ ಮತ್ತು ಅವರ ತಂಡದ ಮೇಲೆ ವೀರಪ್ಪನ್ ಸಹಚರರು ದಾಳಿ ನಡೆಸಲು ಸಂಚು ರೂಪಿಸಿದ್ದರು. ಸಾಕಷ್ಟು ಬಾಂಬ್‌ಗಳನ್ನು ಸಂಗ್ರಹಿಸಿಟ್ಟಿದ್ದ ವೀರಪ್ಪನ್ ಸಹಚರರು ಪಾಲಾರ್ ಸಮೀಪದ ಸೊರೆಕಾಯಿಪಟ್ಟಿ ಬಳಿ ನೆಲಬಾಂಬ್ ಹೂತಿಟ್ಟಿದ್ದರು.

ಗೋಪಾಲ್‌ಕೃಷ್ಣ ಅವರನ್ನು ಒಳಗೊಂಡ ವಿಶೇಷ ತಂಡ ಮಾಹಿತಿದಾರರ ಜೊತೆ ತಮಿಳುನಾಡು ಗಡಿ ಭಾಗದಲ್ಲಿರುವ ಪಾಲಾರ್‌ನತ್ತ ಹೊರಟಿತು. ಸೈಮನ್ ಸಿಡಿಸಿದ ನೆಲಬಾಂಬ್‌ನಿಂದ 22 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು.

ಘಟನೆ ನಂತರ ವೀರಪ್ಪನ್ ಸೇರಿದಂತೆ 124 ಮಂದಿ ಸಹಚರರ ವಿರುದ್ಧ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಲಾಗಿತ್ತು. ಅಂದಿನ ಎಸ್‌ಟಿಎಫ್ ಮುಖ್ಯಸ್ಥರಾಗಿದ್ದ ಶಂಕರ ಬಿದರಿ ಅವರು ವೀರಪ್ಪನ್ ಸೆರೆಗಾಗಿ ತಮ್ಮ ತಂಡದೊಂದಿಗೆ ಮಲೈ ಮಹದೇಶ್ವರ ಬೆಟ್ಟದ ಸುತ್ತ ಕಾರ್ಯಾಚರಣೆ ತೀವ್ರಗೊಳಿಸಿ, ಮೂರು ತಿಂಗಳ ಬಳಿಕ ವೀರಪ್ಪನ್ ಸಹಚರರಾದ ಮೀಸೆಕಾರ ಮಾದಯ್ಯ, ಜ್ಞಾನ ಪ್ರಕಾಶ್, ಸೈಮನ್ ಮತ್ತು ಬಿಲವೇಂದ್ರನ್ ಅವರನ್ನುಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT