ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌, ಲಾರಿಯಲ್ಲಿ ಟ್ರ್ಯಾಕಿಂಗ್‌ ಸಿಸ್ಟಂ

Last Updated 10 ಡಿಸೆಂಬರ್ 2018, 20:45 IST
ಅಕ್ಷರ ಗಾತ್ರ

ಬೆಂಗಳೂರು: ಬಸ್‌, ಲಾರಿ, ಟ್ರಕ್‌ಗಳಲ್ಲಿ ವಾಹನ ಓಡಾಟದ ನಿಗಾ ವ್ಯವಸ್ಥೆ ಅಳವಡಿಸುವುದು ಕಡ್ಡಾಯವಾಗಲಿದೆ.

ಅದೇ ರೀತಿಬಸ್‌ಗಳಲ್ಲಿ ಅಪಾಯ/ ತುರ್ತು ಸಂದರ್ಭದಲ್ಲಿ ಎಚ್ಚರಿಕೆ ಮೊಳಗಿಸುವ ಸ್ವಿಚ್‌ ಅಳವಡಿಕೆಯನ್ನೂ ಕಡ್ಡಾಯ ಮಾಡಲಾಗಿದೆ. ಎರಡೂ ವ್ಯವಸ್ಥೆಗಳನ್ನು ಜ. 1ರಿಂದ ನೋಂದಣಿಯಾಗುವ ವಾಹನಗಳಿಗೆ ಅಳವಡಿಸಬೇಕು. ಪ್ರಯಾಣಿಕರ ಸುರಕ್ಷತೆ, ಪರವಾನಗಿ ಪ್ರದೇಶದೊಳಗೆ ವಾಹನದ ಓಡಾಟದ ಮೇಲೆ ನಿಗಾ ವಹಿಸುವುದು, ಮಹಿಳಾ ಸುರಕ್ಷತೆ, ಬಿಲ್‌ನಲ್ಲಿ ನಮೂದಿಸದ ಸ್ಥಳಕ್ಕೆ ಸರಕು ಪೂರೈಕೆ ತಡೆ, ತೆರಿಗೆ ವಂಚನೆ ಇತ್ಯಾದಿ ತಪ್ಪಿಸಲು ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ತಿಳಿಸಿದರು.

‘ಆರಂಭಿಕ ಹಂತದಲ್ಲಿ ಈ ಎರಡು ಬಗೆಯ ವಾಹನಗಳಿಗೆ ವಾಹನಓಡಾಟದ ನಿಗಾ ವ್ಯವಸ್ಥೆ (ವೆಹಿಕಲ್‌ ಲೊಕೇಷನ್‌ ಟ್ರ್ಯಾಕಿಂಗ್‌ ಸಿಸ್ಟಂ) ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಮುಂದೆ ಬೇರೆ ವಾಹನಗಳಿಗೆ ವಿಸ್ತರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಬಹುದು’ ಎಂದು ಅವರು ಹೇಳಿದರು.

ನಿಗಾ ಹೇಗೆ?‌

ಜಿಪಿಎಸ್‌ ಆಧರಿತ ಟ್ರ್ಯಾಕಿಂಗ್‌ ವ್ಯವಸ್ಥೆಯನ್ನು ವಾಹನಗಳ ಮಾಲೀಕರೇ ಅಳವಡಿಸಬೇಕು. ಸರ್ಕಾರ ನೇಮಿಸಿದ ಏಜೆನ್ಸಿಯು ವಾಹನದ ಮಾಹಿತಿಯನ್ನು ತನ್ನ ನಿಯಂತ್ರಣ ಕೇಂದ್ರದಲ್ಲಿ ದಾಖಲಿಸುತ್ತದೆ. ವಾಹನ ಸಂಚರಿಸಿದಂತೆ ಅದರ ಸಂಚಾರ ಮಾರ್ಗ ವಿವರ ಎಲ್ಲವೂ ನಿಗಾ ಕೇಂದ್ರದಲ್ಲಿ ದಾಖಲಾಗುತ್ತದೆ.

ಇದುವರೆಗೆ ಹೇಗಿತ್ತು?

‘ಆಯಾ ರಾಜ್ಯದ ಸಾರಿಗೆ ಸಂಸ್ಥೆಗಳು ಮತ್ತು ಖಾಸಗಿ ಒಡೆತನದ ಪ್ರತಿಷ್ಠಿತ ಸಾರಿಗೆ ಸಂಸ್ಥೆಗಳು ಜಿಪಿಎಸ್‌ ಆಧಾರಿತ ಟ್ರ್ಯಾಕಿಂಗ್‌ ವ್ಯವಸ್ಥೆ ಹೊಂದಿವೆ. ಆಯಾ ಸಂಸ್ಥೆಗಳೇ ಅವುಗಳ ನಿಗಾ ವಹಿಸುತ್ತಿದ್ದವು. ಹಾಗೆಂದು ನಿಯಮ ಪ್ರಕಾರ ಇದು ಕಡ್ಡಾಯವಾಗಿರಲಿಲ್ಲ. ಮುಂದೆ ಸ್ಟೇಜ್‌ ಕ್ಯಾರಿಯೇಜ್‌, ಪ್ರವಾಸಿ ವಾಹನಗಳು, ಶಾಲಾ ವಾಹನಗಳು ಈ ವ್ಯವಸ್ಥೆ ಅಳವಡಿಸಲೇಬೇಕು. ಎಲ್ಲವುಗಳ ಚಲನವಲನಗಳ ಮೇಲೆ ಸರ್ಕಾರಿ ವ್ಯವಸ್ಥೆ ನೇರವಾಗಿ ನಿಗಾ ವಹಿಸುತ್ತದೆ. ತೆರಿಗೆ ಕಟ್ಟದೆ ಓಡುವ ವಾಹನಗಳನ್ನು ಗುರುತಿಸಲೂ ಇದು ಸಹಕಾರಿಯಾಗಲಿದೆ’ ಎಂದು ಸಾರಿಗೆ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

ಪ್ಯಾನಿಕ್‌ ಬಟನ್‌

ಬಸ್‌ಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಗೆ ಏನಾದರೂ ತೊಂದರೆಯಾದರೆ ತಕ್ಷಣಕ್ಕೆ ಎಚ್ಚರಿಕೆ ಮೊಳಗಿಸುವ ಅಲರಾಂ ಹಾಗೂ ಸಂಬಂಧಿಸಿದ ರಕ್ಷಣಾ ಸಂಸ್ಥೆಗಳಿಗೆ ಮಾಹಿತಿ ಕಳುಹಿಸುವ ವ್ಯವಸ್ಥೆ ವಾಹನಗಳ ಒಳಗೆ ಇರಲೇಬೇಕು. ಪ್ರಯಾಣಿಕರ ಕೈಗೆಟಕುವಂತೆ ಅದರ ಸ್ವಿಚ್‌ ಇರಬೇಕು. ದೆಹಲಿ ಮತ್ತು ಮುಂಬೈನ ಮಹಾನಗರ ಸಾರಿಗೆ ಬಸ್‌ಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ. ಹೊಸ ಮಾದರಿಯ ಬಸ್‌ಗಳಲ್ಲಿ ಈ ಅಲರಾಂ ಅಳವಡಿಕೆಗೆ ಅವಕಾಶ ಇಟ್ಟಿರುತ್ತಾರಾದರೂ ಆ ವ್ಯವಸ್ಥೆಯನ್ನು ಜೋಡಿಸಲು ಮುಂದಾಗುವವರು ಕಡಿಮೆ. ಇನ್ನು ಮುಂದೆ ಇದು ಕಡ್ಡಾಯವಾಗಲಿದೆ ಎಂದು ಆಟೋಮೊಬೈಲ್‌ ವಿದ್ಯುತ್‌ ತಂತ್ರಜ್ಞರೊಬ್ಬರು ಹೇಳಿದರು.

ಎಚ್‌ಎಸ್‌ಆರ್‌ಪಿ ಕಡ್ಡಾಯ

ಮುಂದಿನ ವರ್ಷ ಏ. 1ರಿಂದ ನೋಂದಣಿಯಾಗುವ ಎಲ್ಲ ವಾಹನಗಳು ಅತಿಭದ್ರತೆಯ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ಹೊಂದಿರುವುದು ಕಡ್ಡಾಯ. ಈ ಬಗ್ಗೆ ಕೇಂದ್ರದ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಆದೇಶ ಹೊರಡಿಸಿದೆ.

ವಾಹನ ಉತ್ಪಾದಕರೇ ಈ ನೋಂದಣಿ ಫಲಕವನ್ನು ಅಳವಡಿಸಿ ಕೊಡಬೇಕು. ಈ ರೀತಿ ನಿಯಮ ರೂಪಿಸಲಾಗಿದೆ. ನಕಲಿ ನಂಬರ್‌ ಪ್ಲೇಟ್‌ ಬಳಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ಕ್ರಮ ಜಾರಿಗೆ ಬರಲಿದೆ.

ಫಲಕದ ಬೆಲೆ ಇತ್ಯಾದಿಗಳು ಡೀಲರ್‌ ಮತ್ತು ಗ್ರಾಹಕನಿಗೆ ಸಂಬಂಧಪಟ್ಟವುಗಳು. ನಾವು ಇಂಥ ಫಲಕ ಇದ್ದರೆ ಮಾತ್ರ ನೋಂದಣಿ ಸಂಖ್ಯೆ ಕೊಡುತ್ತೇವೆ. ಇದರಲ್ಲಿ ಸಾರಿಗೆ ಇಲಾಖೆಯ ಪಾತ್ರವೇನೂ ಇಲ್ಲ ಎಂದು ಇಕ್ಕೇರಿ ತಿಳಿಸಿದರು.

ಈಗಾಗಲೇ ಸಾಮಾನ್ಯ ನೋಂದಣಿ ಫಲಕ ಅಳವಡಿಸಿರುವ ವಾಹನಗಳಿಗೆ ಹೊಸ ನಮೂನೆಯ ಫಲಕ ಕಡ್ಡಾಯಗೊಳಿಸಿಲ್ಲ. ಕೆಲವರು ಅತಿಭದ್ರತೆಯ ನೋಂದಣಿ ಫಲಕ ಅಳವಡಿಸಿಕೊಂಡಿದ್ದಾರೆ. ಅದು ಮಾನ್ಯವೇ ಇಲ್ಲವೇ ಎಂಬ ವಿವಾದ ನ್ಯಾಯಾಲಯದಲ್ಲಿದೆ ಎಂದು ಅವರು ತಿಳಿಸಿದರು.

ಬೆಲೆ ಏನು?

ಕಾರುಗಳ ಎಚ್‌ಎಸ್‌ಆರ್‌ಪಿಗೆ ಸರ್ಕಾರವು ನವದೆಹಲಿಯಲ್ಲಿ ಸುಮಾರು ₹ 213 ದರ ನಿಗದಿಪಡಿಸಿದೆ. ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಸಿಗುವ ಇದೇ ಮಾದರಿಯ ನೋಂದಣಿ ಫಲಕಗಳ ಆರಂಭಿಕ ಬೆಲೆಯೇ ₹ 750ರಷ್ಟು ಇದೆ. ವಾಹನಗಳ ಮಾದರಿಗನುಗುಣವಾಗಿ ಬೆಲೆಗಳೂ ಭಿನ್ನವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT