ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯದಲ್ಲಿ ಮಹಿಳೆಯರ ವಿಡಿಯೊ: ಸುಮಂತ್‌ ಪೂಜಾರಿ ನಮ್ಮವನಲ್ಲ ಎಂದ ಬಜರಂಗದಳ

ಮನೆಯ ಶೌಚಾಲಯದಲ್ಲಿ ವಿಡಿಯೊ ಚಿತ್ರೀಕರಣ- ಆರೋಪಿ ಬಂಧನ
Published 5 ಆಗಸ್ಟ್ 2023, 13:02 IST
Last Updated 5 ಆಗಸ್ಟ್ 2023, 13:02 IST
ಅಕ್ಷರ ಗಾತ್ರ

ಮೂಲ್ಕಿ: ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನೆರಮನೆಯೊಂದರ ಶೌಚಾಲಯದ ಕಿಟಿಕಿ ಬಳಿ ಮೊಬೈಲ್‌ ಇಟ್ಟು ವಿಡಿಯೊ ಚಿತ್ರೀಕರಣ ಮಾಡಿದ ಆರೋಪದ ಮೇರೆಗೆ ಸುಮಂತ್‌ ಪೂಜಾರಿ (21) ಎಂಬ ಯುವಕನನ್ನು ಬಂಧಿಸಲಾಗಿದೆ.

'ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಸಿ) (ಮಹಿಳೆಯರ ಮಾನಭಂಗ ಯತ್ನ) ಅಡಿ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಇ (ವ್ಯಕ್ತಿಯ ಅನುಮತಿ ಇಲ್ಲದೇ, ಅವರ ಖಾಸಗಿತನಕ್ಕೆ ಧಕ್ಕೆ ತರುವಂತಹ ದೃಶ್ಯದ ಚಿತ್ರೀಕರಣ) ಅಡಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ' ಎಂದು ನಗರ ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಜೈನ್ ತಿಳಿಸಿದ್ದಾರೆ.

‘ಮನೆಯ ಶೌಚಾಲಯದ ಕಿಟಕಿ ಬಳಿ ಆ.2ರ ರಾತ್ರಿಯಿಂದ ಆ. 3ರ ಬೆಳಿಗ್ಗೆಯ ಅವಧಿಯಲ್ಲಿ ಮೊಬೈಲ್‌ ಇಟ್ಟು ಪಕ್ಕದ ಮನೆಯ ಯುವಕನೊಬ್ಬ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದ. ಆರೋಪಿಯು ನನ್ನ, ನನ್ನ ತಾಯಿ ಹಾಗೂ ನನ್ನ ಸಹೋದರಿಯ ವಿಡಿಯೊ ಚಿತ್ರೀಕರಣ ನಡೆಸುವ ಉದ್ದೇಶ ಹೊಂದಿದ್ದಂತೆ ತೋರುತ್ತದೆ. ಆತ ಅಲ್ಲಿಟ್ಟಿದ್ದ ಫೋನ್‌ ಅನ್ನು ನೋಡಿದಾಗ ಅದರಲ್ಲಿ 18 ಸೆಕೆಂಡ್‌ ಅವಧಿಯ ಒಂದು ವಿಡಿಯೊ ಪತ್ತೆಯಾಗಿದೆ. ಆದರೆ, ಅದರಲ್ಲಿ ನಾನು ಶೌಚಾಲಯವನ್ನು ಪ್ರವೇಶಿಸಿದ ದೃಶ್ಯ ಮಾತ್ರ ಕಾಣಿಸಿತ್ತು. ಸಂಶಯ ಬಂದು ಆರೋಪಿಯ ಚಲನವಲನದ ಮೇಲೆ ನಿಗಾ ಇಟ್ಟಿದ್ದೆ. ಆತ ನಮ್ಮ ಮನೆಯ ಶೌಚಾಲಯದ ವಿಡಿಯೊ ಚಿತ್ರೀಕರಣ ನಡೆಸುತ್ತಿದ್ದಾಗಲೇ ಆತನನ್ನು ಹಿಡಿದು ಆತನ ಮೊಬೈಲ್‌ ಕಿತ್ತುಕೊಂಡಿದ್ದೆ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಯ ಫೋನ್‌ ಅನ್ನು ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

‘ಆರೋಪಿಯು ಕೇವಲ 10ನೇ ತರಗತಿವರೆಗೆ ಓದಿದ್ದು, ನಿರುದ್ಯೊಗಿಯಾಗಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯು ಬಜರಂಗ ದಳದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಎಂದು ಗೊತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಆತ ಕೇಸರಿ ಶಾಲು ಧರಿಸಿದ ಚಿತ್ರಗಳನ್ನು ಹಂಚಿಕೊಂಡಿದ್ದ.

ನಮ್ಮವನಲ್ಲ

ಬಜರಂಗದಳದ ಮೂಲ್ಕಿ ಪ್ರಖಂಡ ಈ ಕುರಿತು ಸ್ಪಷ್ಟೀಕರಣ ನೀಡಿದೆ. ‘ಆರೋಪಿ ಸುಮಂತ್‌ ಪೂಜಾರಿ ಬಜರಂಗ ದಳದ ಕಾರ್ಯಕರ್ತನಲ್ಲ. ವಿಡಿಯೊ ಮಾಡುತ್ತಿದ್ದ ಆರೋಪಿಯನ್ನು ಬಜರಂಗದಳದವರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದನ್ನು ಸಹಿಸಲಾಗದ ಕಿಡಿಗೇಡಿಗಳು ಆರೋಪಿಯು ಬಜರಂಗ ದಳದ ಕಾರ್ಯಕರ್ತ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಬಜರಂಗ ದಳದ ಮೂಲ್ಕಿ ಪ್ರಖಂಡದ ಅಮಿತ್‌ ಶೆಟ್ಟಿ ಎಸ್‌ ಕೋಡಿ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಆರೋಪಿಯು ಕೇಸರಿ ಶಾಲು ಹಾಕಿರುವ ಚಿತ್ರವನ್ನು ಕಾಂಗ್ರೆಸ್‌ನ ಕರ್ನಾಟಕ ಘಟಕವು ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಬಿಜೆಪಿ ರಕ್ಷಣಾ ಪಡೆ’ಯವನೊಬ್ಬ ಹಿಂದೂ ಹೆಣ್ಣುಮಕ್ಕಳ ವಿಡಿಯೊ ಮಾಡಿ ಸಿಕ್ಕಿಬಿದ್ದಿದ್ದಾನೆ. ಈತ ವಿಡಿಯೊ ಮಾಡಿ ಬಿಜೆಪಿ ಕಚೇರಿಗೆ ಕಳುಹಿಸುತ್ತಿದ್ದನೇ? ಅಥವಾ ಸಿ.ಟಿ.ರವಿ, ಪ್ರತಾಪಸಿಂಹ ಅವರಿಗೆ ಕಳಿಸುತ್ತಿದ್ದನೇ? ಇವನಿಂದ ಸಂತ್ರಸ್ತಳಾದ ಯುವತಿ ಹಿಂದೂವಲ್ಲವೇ? ಈತನ ಕೃತ್ಯದ ಹಿಂದೆ ಯಾವ ಷಡ್ಯಂತ್ರವಿದೆ? ಶೋಭಾ ಕರಂದ್ಲಾಜೆ ಸೇರಿದಂತೆ ರಾಜ್ಯ ಬಿಜೆಪಿಯ ಎಲ್ಲಾ ಖಾಸಗಿ ತನಿಖಾಧಿಕಾರಿಗಳು ಏಕೆ ಮೌನವಾಗಿದ್ದಾರೆ’ ಎಂದು ಪ್ರಶ್ನೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT