ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿವೇಕಾನಂದರ ಫೋಟೊ: ಕಾಂಗ್ರೆಸ್–ಬಿಜೆಪಿ ಜಟಾಪಟಿ

Published 4 ಜುಲೈ 2024, 16:25 IST
Last Updated 4 ಜುಲೈ 2024, 16:25 IST
ಅಕ್ಷರ ಗಾತ್ರ

ಬೆಂಗಳೂರು: ಅರಮನೆ ಮೈದಾನದಲ್ಲಿ ಬಿಜೆಪಿ ಗುರುವಾರ ಆಯೋಜಿಸಿದ್ದ ರಾಜ್ಯ ವಿಶೇಷ ಕಾರ್ಯಕಾರಿಣಿ ವೇದಿಕೆಯಲ್ಲಿ ಸ್ವಾಮಿ ವಿವೇಕಾನಂದರ ಫೋಟೊ ಇಟ್ಟಿದ್ದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌–ಬಿಜೆಪಿ ಮಧ್ಯೆ ವಾಕ್ಸಮರಕ್ಕೆ ನಾಂದಿ ಹಾಡಿದೆ.

ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಪಕ್ಷದ ಸಂಸ್ಥಾಪಕ ‌‌ನೇತಾರರಾದ ಶ್ಯಾಮ್‌ ಪ್ರಸಾದ್ ಮುಖರ್ಜಿ, ದೀನದಯಾಳ್‌ ಉಪಾಧ್ಯಾಯ ಅವರ ಭಾವಚಿತ್ರಗಳನ್ನು ಇಟ್ಟು ಪುಷ್ಪನಮನ ಸಲ್ಲಿಸಲಾಗುತ್ತದೆ. ಆದರೆ, ವಿಶೇಷ ಕಾರ್ಯಕಾರಿಣಿಯಲ್ಲಿ ಈ ಇಬ್ಬರ ಚಿತ್ರಗಳ ಜೊತೆಗೆ ಸ್ವಾಮಿ ವಿವೇಕಾನಂದರ ಭಾವಚಿತ್ರ ಇಡಲಾಗಿತ್ತು. ವೇದಿಕೆಗೆ ಬಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‍ದಾಸ್‌ ಅಗರ್‌ವಾಲ್‌ ಅವರು ವಿವೇಕಾನಂದರ ಫೋಟೊ ಏಕೆ ಇಟ್ಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ‘ಇಂದು ಅವರ ಪುಣ್ಯಸ್ಮರಣೆಯ ದಿನ’ ಎಂದು ರಾಜ್ಯದ ಬಿಜೆಪಿ ನಾಯಕರು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ವಿಡಿಯೊ ತುಣಕನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಬಿಜೆಪಿ ಮತ್ತು ಸಂಘ ಪರಿವಾರದವರು ತೋರ್ಪಡಿಕೆಗಾಗಿ ವಿವೇಕಾನಂದರನ್ನು ಆರಾಧಿಸಿದರೂ, ಮುದ್ದಾಡಿದರೂ ಅವರ ಆಂತರ್ಯದೊಳಗೆ ವಿವೇಕಾನಂದರ ಬಗ್ಗೆ ಎಷ್ಟು ಅಸಹನೆ ಇದೆ ಎನ್ನುವುದಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿ’ ಎಂದು ದೂರಿದ್ದಾರೆ.

‘ವೇದಿಕೆಯಲ್ಲಿ ವಿವೇಕಾನಂದರ ಭಾವಚಿತ್ರ ಏಕಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್‍ದಾಸ್‌ ಅಗರ್‌ವಾಲ್‌ ಅವರು ಪ್ರಶ್ನಿಸಿ, ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ವಿವೇಕಾನಂದರ ಪುಣ್ಯಸ್ಮರಣೆಯ ದಿನದಂದೇ ಅವರನ್ನು ಅವಮಾನಿಸುವ ಮೂಲಕ ಬಿಜೆಪಿ ಇಡೀ ಹಿಂದೂ ಸಮಾಜಕ್ಕೆ ಅವಮಾನ ಮಾಡಿದೆ’ ಎಂದು ಆರೋಪಿಸಿದ್ದಾರೆ.

ಸಂಘಪರಿವಾರ ವಿವೇಕಾನಂದರನ್ನು ಎಷ್ಟೇ ಹೊತ್ತು ಮುದ್ದಾಡಿದರೂ ಅವರು ಇಂದಿಗೂ ಬಿಜೆಪಿಗೆ ಪೂರ್ಣವಾಗಿ ದಕ್ಕಿಲ್ಲ, ಮುಂದೆ ದಕ್ಕುವುದೂ ಇಲ್ಲ. ವಿವೇಕಾನಂದರಿಗೆ ಅವಮಾನ ಮಾಡಿರುವ ಬಿಜೆಪಿ ಅದೇ ವೇದಿಕೆಯಲ್ಲೇ ಬಹಿರಂಗ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಧಾಮೋಹನ್‍ದಾಸ್‌ ಅಗರ್‌ವಾಲ್‌, ‘ಕಾಂಗ್ರೆಸ್‌ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ ಬಿಜೆಪಿಯ ಪಟ್ಟಿಗೆ ಸಿದ್ದರಾಮಯ್ಯ ಭಯಗೊಂಡಿದ್ದಾರೆ. ರಾಜಕೀಯ ಮತ್ತು ನೈತಿಕ ಆಧಾರದ ಮೇಲೆ ಮುಖ್ಯಮಂತ್ರಿ ರಾಜೀನಾಮೆ ಕೇಳಿದ್ದೇವೆ. ಇದರಿಂದ ಬಿಜೆಪಿ ಮೇಲೆ ಬೇರೆ ರೀತಿ ಆರೋಪ ಮಾಡುತ್ತಿದ್ದಾರೆ. ಇದೆಲ್ಲ ಬಿಟ್ಟು ನೀವು ರಾಜೀನಾಮೆ ನೀಡುತ್ತೀರಾ ಅಥವಾ ಇಲ್ಲವೇ ಎಂಬುದನ್ನು ಹೇಳಿ ಸಿದ್ದರಾಮಯ್ಯ’ ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT