ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಂದ್ರದ ಜತೆ ಸಂಘರ್ಷ ಇಲ್ಲ, ನ್ಯಾಯ ಕೇಳಿದ್ದೇವೆ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 20 ಫೆಬ್ರುವರಿ 2024, 23:30 IST
Last Updated 20 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರದ ಜತೆ ಸಂಘರ್ಷಕ್ಕೆ ಇಳಿದಿಲ್ಲ. ಆದರೆ, ನಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿ ಎಂದು ಕೇಳಿದ್ದೇವೆ. ಇದು ತಪ್ಪೇ? ಇದನ್ನೂ ಮಾಡದಿದ್ದರೆ, ಕರ್ನಾಟಕಕ್ಕೆ ದ್ರೋಹ ಮಾಡಿದಂತೆ ಆಗುವುದಿಲ್ಲವೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುಡುಗಿದರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮೇಲಿನ ಚರ್ಚೆಗೆ ವಿಧಾನಸಭೆಯಲ್ಲಿ ಮಂಗಳವಾರ ಸುದೀರ್ಘ ಉತ್ತರ ನೀಡಿದ ಅವರು, ‘ನಮ್ಮ ಆಕ್ಷೇಪ ಇರುವುದು ನಮ್ಮ ಪಾಲಿನ ಹಣಕೊಟ್ಟಿಲ್ಲ ಎನ್ನುವುದು. ಇದನ್ನು ನೀವು ಸಂಘರ್ಷ ಎನ್ನುತ್ತೀರಿ. ನಾವು ಸಂಘರ್ಷ ಮಾಡುವುದಿಲ್ಲ. 7 ಕೋಟಿ ಕನ್ನಡಿಗರಿಗೆ ಅನ್ಯಾಯ ಆದಾಗ ಕೇಳಲೇಬೇಕಾಗುತ್ತದೆ’ ಎಂದು ಪ್ರತಿಪಾದಿಸಿದರು. ‘ಮುಖ್ಯಮಂತ್ರಿ ಅವರ ಉತ್ತರ ಸುಳ್ಳುಗಳಿಂದ ಕೂಡಿದೆ’ ಎಂದು ಆರೋಪಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

‘ನಾವು ರಾಜ್ಯಪಾಲರ ಮೂಲಕ ಸುಳ್ಳು ಹೇಳಿಸಿಲ್ಲ. ನಮ್ಮ ರಾಜ್ಯಪಾಲರು ಕೇರಳ ಮತ್ತು ತಮಿಳುನಾಡಿನ ರಾಜ್ಯಪಾಲರಂತೆ ವರ್ತಿಸಲಿಲ್ಲ. ಸರ್ಕಾರದ ಕಾರ್ಯಕ್ರಮ ಮತ್ತು ಮುನ್ನೋಟವನ್ನು ಮುಂದಿಟ್ಟಿದ್ದಾರೆ. ಸತ್ಯವನ್ನೇ ಹೇಳಿದ್ದಾರೆ. ಸಜ್ಜನಿಕೆಯಿಂದ ನಡೆದುಕೊಂಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದಾಗ, ‘ನೀವು ಅವರ ಒಳ್ಳೆಯತನವನ್ನು ದುರುಪಯೋಗ ಮಾಡಿಕೊಂಡಿದ್ದೀರಿ’ ಎಂದು ಬಿಜೆಪಿಯ ಬಸವರಾಜ ಬೊಮ್ಮಾಯಿ ಛೇಡಿಸಿದರು.

‘ನಾವು ಸಂಘರ್ಷಕ್ಕೆ ಇಳಿದಿದ್ದೇವೆ, ನಮ್ಮ ಧೋರಣೆ ಸರಿ ಇಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ನಮ್ಮ ಪಾಲಿನ ಹಣ ಬಂದಿಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಪ್ರಧಾನ ಮಂತ್ರಿ ಮತ್ತು ಇತರ ಸಚಿವರನ್ನೂ ಭೇಟಿ ಮಾಡಿದ್ದೇವೆ. ಆದರೂ ಹಣ ಬಂದಿಲ್ಲ. ಗೃಹಸಚಿವರಿಗೆ 17 ಪತ್ರಗಳನ್ನು ಬರೆದಿದ್ದು, ಒಂದಕ್ಕೆ ಮಾತ್ರ ಪ್ರತಿಕ್ರಿಯಿಸಿದ್ದು, ಉಳಿದವುಗಳಿಗೆ ಪ್ರತಿಕ್ರಿಯಿಸಿಲ್ಲ’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

‘ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ. ಆ ರೀತಿ ಮಾಡಿದರೆ ರಾಜ್ಯ ದಿವಾಳಿ ಆಗಿ ಹೋಗುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಕಳೆದ ಬಜೆಟ್‌ನಲ್ಲಿ  ಗ್ಯಾರಂಟಿಗಾಗಿ ₹32 ಸಾವಿರ ಕೋಟಿ ಇಟ್ಟಿದ್ದೆವು. ಈ ಬಜೆಟ್‌ನಲ್ಲಿ ₹52 ಸಾವಿರ ಕೋಟಿ ಇಟ್ಟಿದ್ದೇವೆ. ನಮ್ಮ ಗ್ಯಾರಂಟಿ  ಯೋಜನೆಗಳು ಮತ್ತು ಬಜೆಟ್‌ ಕುರಿತು ಪತ್ರಿಕೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದು ‘ಪ್ರಜಾವಾಣಿ’ ಮತ್ತು ಇತರ ಪತ್ರಿಕೆಗಳ ಸಂಪಾದಕೀಯಗಳನ್ನು ಉಲ್ಲೇಖಿಸಿದರು.

ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಬಜೆಟ್‌ ವರದಿಯ ಕುರಿತ ಪತ್ರಿಕಾ ವರದಿಗಳ ತಲೆ ಬರಹಗಳನ್ನೂ ಓದಿ, ‘ನೋಡಿ ಪತ್ರಿಕೆಗಳೇ ನಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ’ ಎಂದಾಗ, ‘ನಿಮ್ಮ ಬಜೆಟ್‌ ಕುರಿತ ವರದಿಗಳನ್ನೇ ಮೆಚ್ಚುಗೆ ಎಂದರೆ ಹೇಗೆ? ಸಿದ್ದರಾಮಯ್ಯ ಹಿಂದೆ ಎಂದೂ ತಮ್ಮನ್ನು ಸಮರ್ಥಿಸಿಕೊಳ್ಳಲು ಪತ್ರಿಕಾ ವರದಿಗಳ ನೆರವಿಗೆ ಹೋಗಿದ್ದು ನೋಡಿಲ್ಲ. ಈಗ ಯಾವ ಸ್ಥಿತಿಗೆ ತಲುಪಿದ್ದೀರಿ ಎನ್ನುವುದು ಅರ್ಥವಾಗುತ್ತದೆ’ ಎಂದು ಬೊಮ್ಮಾಯಿ ಕಾಲೆಳೆದರು.

ಆರೋಗ್ಯ ಸರಿ ಇಲ್ಲದ ಕಾರಣ ಬರಲಿಲ್ಲ:

‘ಕಳೆದ ಕೆಲವು ದಿನಗಳಿಂದ ಆರೋಗ್ಯ ಸರಿ ಇಲ್ಲದ ಕಾರಣ ವಿಧಾನಸಭೆಗೆ ಬರಲಿಲ್ಲ. ವಿಧಾನ ಪರಿಷತ್ತಿಗೂ ಹೋಗಿದ್ದು ಕಡಿಮೆ‘ ಎಂದು ಸಿದ್ದರಾಮಯ್ಯ ಹೇಳಿದಾಗ, ‘ನೀವು ಈ ಬಾರಿ ವಿಧಾನಸಭೆ ಕಲಾಪಕ್ಕೆ ಬರಲಿಲ್ಲ. ನಮ್ಮ ಯಾರ ಭಾಷಣಗಳನ್ನೂ ಕೇಳಲಿಲ್ಲ’ ಎಂದು ಬೊಮ್ಮಾಯಿ ತಿಳಿಸಿದರು.

‘ರಾಜ್ಯಪಾಲರ ಭಾಷಣ ಮತ್ತು ಬಜೆಟ್‌ ಮಂಡನೆಗಾಗಿ ಬಂದಿದ್ದೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಇಲ್ಲ’ ಎಂದ ಸಿಎಂ:

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯವನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಮತಕ್ಕೆ ಹಾಕುವಾಗ ‘ಹೌದು’ ಎನ್ನುವವರು ‘ಹೌದು’ ಎನ್ನಿ, ‘ಇಲ್ಲ’ ಎನ್ನುವವರು ‘ಇಲ್ಲ’ ಎನ್ನಿ ಎಂದು ಹೇಳಿದಾಗ, ಕಾಂಗ್ರೆಸ್‌ ಸದಸ್ಯರೆಲ್ಲಾ ‘ಹೌದು’ ಎಂದು ಹೇಳಿದರೆ, ಸಿದ್ದರಾಮಯ್ಯ ಮಾತ್ರ ‘ಇಲ್ಲ’ ಎಂದು ಬಿಟ್ಟರು. ಸದನದಲ್ಲಿದ್ದ ಸಚಿವರು, ಆಡಳಿತ ಪಕ್ಷದ ಸದಸ್ಯರು ಒಂದು ಕ್ಷಣ ಆವಾಕ್ಕಾದರು.

ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ವಿಧಾನಸಭೆ ಕಲಾಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಬಿಜೆಪಿಯದು ದ್ವೇಷ ತುಂಬಿದ ತುಕ್ಕು ಹಿಡಿದ ಬಸ್ಸು ವಿಷದ ಹೊಗೆಯನ್ನು ಉಗುಳುತ್ತದೆ. ಕಳೆದ ಚುನಾವಣೆಯಲ್ಲಿ ಆ ಬಸ್ಸು ಮುಂದೆ ಹೋಗಲೇ ಇಲ್ಲ. ಜನ ಆ ಬಸ್ಸನ್ನು ಪಕ್ಕಕ್ಕೆ ತಳ್ಳಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ
‘ನನ್ನದು ಸಿದ್ದನಾಮಿಕ್ಸ್‌ ಅಲ್ಲ ಗುಡ್‌ ಎಕನಾಮಿಕ್ಸ್‌’
ಎಚ್‌.ಡಿ.ಕುಮಾರಸ್ವಾಮಿ ಅದೇನೋ ‘ಸಿದ್ದನಾಮಿಕ್ಸ್‌’ ಅಂತ ಹೇಳಿದ್ದಾರೆ. ಯಾರಾದರೂ ಆ ಪದವನ್ನು ಕೇಳಿದ್ದೀರಾ? ಪುಸ್ತಕದಲ್ಲಿ ಎಲ್ಲಿಯಾದರೂ ಇದೆಯಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ ಪ್ರಶ್ನಿಸಿದರು. ‘ನಾವು ಏನಿದ್ದರೂ ಗುಡ್‌ ಎಕನಾಮಿಕ್ಸ್‌ನಲ್ಲಿ ನಂಬಿಕೆ ಇಟ್ಟವರು’ ಎಂದು ಹೇಳಿದರು. ‘ನೀವು ಸದಾ ಸುಳ್ಳುಗಳನ್ನು ಹೇಳುತ್ತೀರಲ್ಲ. ಅದಕ್ಕೆ ಹೊಸ ಪದ ಸಿದ್ದನಾಮಿಕ್ಸ್‌ ಎಂಬ ಹೊಸ ಪದ ಹುಟ್ಟಿಕೊಂಡಿದೆ’ ಎಂದು ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು. ‘ಸಿದ್ದನಾಮಿಕ್ಸ್‌ ಎನ್ನುವುದನ್ನು ಟ್ರೇಡ್‌ ಮಾರ್ಕ್‌ ಅಥವಾ ಬ್ರ್ಯಾಂಡ್‌ ನೇಮ್‌ ಮಾಡಿಕೊಳ್ಳಿ’ ಎಂದು ಬಸವರಾಜ ಬೊಮ್ಮಾಯಿ ಹೇಳಿದಾಗ ನನ್ನದೇನಿದ್ದರೂ ಗುಡ್‌ ಎಕಾನಮಿಕ್ಸ್‌. ಅದರಲ್ಲೇ ನಂಬಿಕೆ ಇಟ್ಟಿದ್ದೇನೆ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು. ‘ಶ್ರೀಮಂತರಿಂದ ಹೆಚ್ಚು ತೆರಿಗೆ ವಸೂಲಿ ಮಾಡಿ ಬಡವರಿಗೆ ಹಂಚುವುದೇ ನಮ್ಮ ಉದ್ದೇಶ. ಇದಕ್ಕಾಗಿ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಇದು ಗುಡ್‌ ಎಕನಾಮಿಕ್ಸ್‌. ಸ್ವಾಭಿಮಾನದ ಎಕನಾಮಿಕ್ಸ್‌ ವಿನಾ  ಸ್ವಾಹಾ ಎಕನಾಮಿಕ್ಸ್‌ ಅಲ್ಲ’ ಎಂದು ಅವರು ಹೇಳಿದರು.
‘ಸಿ.ಎಂ ಅವರಿಂದ ಕಾಗಕ್ಕ ಗುಬ್ಬಕ್ಕನ ಕಥೆ’
ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರ ಸರ್ಕಾರವನ್ನು ಬಯ್ಯುವುದು ಬಿಟ್ಟರೆ ತಾವು ಮಾಡಿದ ಅಭಿವೃದ್ಧಿ ಕಾರ್ಯ ಏನೆಂದು ತಿಳಿಸಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಸುಳ್ಳಿನ ಆರ್ಥಿಕತೆ ಎಂದು ವಿರೋಧಪಕ್ಷದ ನಾಯಕ ಆರ್.ಅಶೋಕ ಟೀಕಿಸಿದರು. ‘ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ ರೈತ ವಿದ್ಯಾನಿಧಿ ಕಿಸಾನ್‌ ಸಮ್ಮಾನ್‌ ರದ್ದು ಮಾಡಿದ ಬಗ್ಗೆ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ₹5000 ದಿಂದ ₹50000 ವರೆಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ₹1200 ಕ್ಕೆ ಇಳಿಸಲಾಗಿದೆ. ಪರಿಶಿಷ್ಟರಿಗೆ ಮೀಸಲಾದ ಹಣದಲ್ಲಿ ₹11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಬೇರೆ ಉದ್ದೇಶಕ್ಕೆ ಬಳಸಲಾಗಿದೆ. ರೈತರಿಗೆ ನೀಡುವ ಸಹಾಯಧನದ ಬಗ್ಗೆಯೂ ಪ್ರತಿಕ್ರಿಯೆ ನೀಡದೇ ಕಾಗಕ್ಕ ಗುಬ್ಬಕ್ಕನ ಕಥೆ ಹೇಳಲಾಗುತ್ತಿದೆ. ಇದೇ ‘ಸಿದ್ಧನಾಮಿಕ್ಸ್‌’ ಎಂದರು.
ಯತ್ನಾಳ್‌ ಮೇಲೆ ಸಿ.ಎಂ ಪರೋಕ್ಷ ಗರಂ
ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ಅವರು ಪದೇ ಪದೇ ಎದ್ದು ನಿಂತು ಅಡ್ಡಿಪಡಿಸುತ್ತಿದ್ದ ಕಾರಣ ಸಿದ್ದರಾಮಯ್ಯ ಅವರು ತಮ್ಮ ಹಿಂದೆ ಕುಳಿತಿದ್ದ ಸಚಿವ ದಿನೇಶ್‌ ಗುಂಡೂರಾವ್ ಅವರನ್ನು ಉದ್ದೇಶಿಸಿ ‘ಯತ್ನಾಳ್ ಪದೇ ಪದೇ ಅಡ್ಡಿ ಮಾಡಿದರೆ ಕ್ರಮ ತಗೋ ಬೇಕಾಗುತ್ತದೆ ಎಂದು ಸಭಾಧ್ಯಕ್ಷರಿಗೆ ಹೇಳಿ’ ಎಂದು ಮೆಲು ಧ್ವನಿಯಲ್ಲಿ ಉಸುರಿದರು. ಆಗ ದಿನೇಶ್‌ ಗುಂಡೂರಾವ್‌ ಅವರು ‘ಯತ್ನಾಳ ಅವರು ಪದೇ ಪದೇ ಅಡ್ಡಿ ಮಾಡುತ್ತಿರುವುದರಿಂದ ಅವರ ಮೇಲೆ ಕ್ರಮ ತಗೆದುಕೊಳ್ಳಬೇಕಾಗುತ್ತದೆ’ ಎಂದರು. ‘ಅದೇನು ಕ್ರಮ ತೆಗೆದುಕೊಳ್ಳುತ್ತೀರೋ ತೆಗೆದುಕೊಳ್ಳಿ’ ಎಂದು ಯತ್ನಾಳ್ ತಿರುಗೇಟು ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT