ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ಆರಂಭಿಸಿದ್ದೇ ನಾವು: ಮುಖ್ಯಮಂತ್ರಿ ಸಿದ್ದರಾಮಯ್ಯ

ಸಂತ ಶ್ರೇಷ್ಠ ಕನಕದಾಸ ಜಯಂತಿ
Published 30 ನವೆಂಬರ್ 2023, 19:09 IST
Last Updated 30 ನವೆಂಬರ್ 2023, 19:09 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿಯೊಂದು ಜಾತಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಮತ್ತು ಸಂವಿಧಾನದ ಆಶಯಗಳನ್ನು ಕಾರ್ಯಕ್ರಮಗಳ ಮೂಲಕ ಎಲ್ಲಾ ಸಮುದಾಯಗಳಿಗೂ ತಲುಪಿಸಲು ನಾನೇ ಜಾತಿಗಣತಿ ಆರಂಭಿಸಿದ್ದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಶ್ರೇಷ್ಠ ಕನಕದಾಸ ಜಯಂತಿಯನ್ನು ಉದ್ಘಾಟಿಸಿ, ಸಮಾಜ ಸೇವಕ ದಿವಂಗತ ಲಿಂಗಪ್ಪ ಅವರಿಗೆ ಮರಣೋತ್ತರ ಕನಕಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಜಾತಿ ಗಣತಿಗೆ ಕಾಂಗ್ರೆಸ್ ಬದ್ಧವಾಗಿದೆ. ಇಡೀ ದೇಶದಲ್ಲಿ ಮುಂದೆ ಜಾತಿ ಗಣತಿಯನ್ನು ಕಾಂಗ್ರೆಸ್‌ ನಡೆಸಲಿದೆ ಎಂದು ಹೇಳಿದರು.

‘ಕನಕದಾಸರು ಕುರುಬರಾಗಿ ಹುಟ್ಟಿದ ವಿಶ್ವಶ್ರೇಷ್ಠ ಮಾನವೀಯ ಚೈತನ್ಯರಾಗಿದ್ದರು. ನಾನು ಕುರುಬನಾಗಿ ಜನಿಸಿದ್ದೇನೆ. ಕುರುಬ ಸಮುದಾಯದಲ್ಲಿ ನೀವೆಲ್ಲ ಜನಿಸಿರಬಹುದು. ಎಲ್ಲರೂ ಅಪ್ಪಟ ಮನುಷ್ಯರಾಗಬೇಕು ಎಂದು ಸಲಹೆ ನೀಡಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ‘ಕನಕದಾಸರು 300ಕ್ಕೂ ಹೆಚ್ಚು ಕೀರ್ತನೆಗಳನ್ನು ಹಾಡಿ ಜನರ ಹೃದಯ ಗೆದ್ದಿದ್ದಾರೆ. ಬಸವಣ್ಣನ ಜಯಂತಿ, ಅಂಬೇಡ್ಕರ್ ಜಯಂತಿ ಹಾಗೂ ಕನಕದಾಸರ ಜಯಂತಿಯನ್ನು ಆಯಾ ಸಮಾಜದವರು ಮಾತ್ರ ಆಚರಿಸುವುದಲ್ಲ. ಎಲ್ಲ ಧರ್ಮ, ಜನಾಂಗಗಳಿಗೆ ಸೇರಿದ ಆಚರಣೆ. ಸಮಾಜವನ್ನು ಪರಿವರ್ತನೆ ಮಾಡಿದ ಈ ಶ್ರೇಷ್ಠರನ್ನು ಎಲ್ಲರೂ ಸ್ಮರಿಸಬೇಕು’ ಎಂದರು.

‘ಯಾವ ರಾಜನೂ ಸದಾ ರಾಜನಾಗಿರಲು ಸಾಧ್ಯವಿಲ್ಲ. ಯಾವುದೇ ಶ್ರೀಮಂತ ಕೊನೆಯವರೆಗೂ ಶ್ರೀಮಂತನಾಗಿ ಇರುವುದಿಲ್ಲ. ಯಾವುದೇ ಬಡವ ಕೊನೆವರೆಗೂ ಬಡವವನಾಗಿರುವುದಿಲ್ಲ. ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ.  ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ವಚನಗಳು, ದಾಸರ ಪದಗಳು ಬದುಕಿನಲ್ಲಿ ಬದಲಾವಣೆ ತರಲಿವೆ’ ಎಂದರು.

‘ಬಿಜೆಪಿ ಸರ್ಕಾರವು ಕನಕಶ್ರೀ ಪ್ರಶಸ್ತಿ ನೀಡುವುದನ್ನು ಮೂರು ವರ್ಷಗಳಿಂದ ನಿಲ್ಲಿಸಿತ್ತು. ಸೇವೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವುದನ್ನು ನಿಲ್ಲಿಸುವಂತಹ ಕೀಳು ಮಟ್ಟಕ್ಕೆ ನಾವು ಇಳಿಯಬಾರದು’ ಎಂದು ತಿಳಿಸಿದರು.

ತಿಂಥಣಿಯ ಕನಕಗುರು ಪೀಠದ ಸಿದ್ದರಾಮಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಾಜಿ ಸಚಿವ ಎಚ್.ಎಂ. ರೇವಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT