ಪರಿಸರ ಸೂಕ್ಷ್ಮಪ್ರದೇಶದ ಕುರಿತಂತೆ ಕೇಂದ್ರ ಸರ್ಕಾರ ಆಗಸ್ಟ್ 2ರಂದು ಹೊರಡಿಸಿರುವ ಅಧಿಸೂಚನೆಯನ್ನು (ಕಸ್ತೂರಿ ರಂಗನ್ ಸಮಿತಿ ವರದಿ) ಯಥಾವತ್ ಒಪ್ಪಿಕೊಂಡರೆ ಪಶ್ಚಿಮಘಟ್ಟದಲ್ಲಿ ನೆಲೆ ಕಂಡುಕೊಂಡಿರುವ ಜನರ ಮೇಲೆ ಆಗಬಹುದಾದ ಪರಿಣಾಮ, ಸಾಧಕ –ಬಾಧಕಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
‘ರಾಜ್ಯದ ಪಶ್ಚಿಮ ಘಟ್ಟದಲ್ಲಿ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವಂತೆ ಕಸ್ತೂರಿ ರಂಗನ್ ಸಮಿತಿ ವರದಿ ಹೇಳಿದೆ. ಆದರೆ, ರಾಜ್ಯ ಸರ್ಕಾರ ವನ್ಯಜೀವಿಧಾಮ, ಅಭಯಾರಣ್ಯ, ಹುಲಿ ಸಂರಕ್ಷಿತ ಮೀಸಲು ಸೇರಿದಂತೆ ವಿವಿಧ ಅರಣ್ಯ ಪ್ರದೇಶಗಳಲ್ಲಿ 16,632 ಚದರ ಕಿ.ಮೀ. ಪ್ರದೇಶವು ಘೋಷಿತ ಅರಣ್ಯ, ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶಗಳಿಗೆ ಹೊಂದಿಕೊಂಡಿರುವ ಪರಿಸರ ಸೂಕ್ಷ್ಮ ವಲಯ (ಇಎಸ್‌ಝೆಡ್) ಎಂದು ಈಗಾಗಲೇ ಘೋಷಿಸಲಾಗಿದೆ. ಅಲ್ಲದೆ, ಈ ಎಲ್ಲ ಪ್ರದೇಶಗಳು ಸಂರಕ್ಷಿತವಾಗಿವೆ. ಹೀಗಾಗಿ, ಆ ಪ್ರದೇಶಕ್ಕೆ ಸೀಮಿತಗೊಳಿಸಿ ಕಸ್ತೂರಿ ರಂಗನ್ ಸಮಿತಿಯ ಶಿಫಾರಸಿನಂತೆ ಸರ್ಕಾರದ ನಿಲುವು ವ್ಯಕ್ತಪಡಿಸಲು ಸಚಿವ ಸಂಪುಟಕ್ಕೆ ಶಿಫಾರಸು ಮಾಡಬಹುದು’ ಎಂಬ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.