ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದಾಯಿ ಯೋಜನೆಗೆ ವನ್ಯಜೀವಿ ಮಂಡಳಿ ನಕಾರ: ರಾಜ್ಯಕ್ಕೆ ಕಹಿ–ಗೋವಾಕ್ಕೆ ಸಿಹಿ!

Published 3 ಸೆಪ್ಟೆಂಬರ್ 2024, 0:25 IST
Last Updated 3 ಸೆಪ್ಟೆಂಬರ್ 2024, 0:25 IST
ಅಕ್ಷರ ಗಾತ್ರ

ನವದೆಹಲಿ: ಮಹದಾಯಿ ಯೋಜನೆಗೆ ತಕರಾರು ಎತ್ತಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿರುವ ಕಾರಣ ಮುಂದಿಟ್ಟುಕೊಂಡು ಕಳಸಾ ನಾಲಾ ತಿರುವು ಯೋಜನೆಗೆ ವನ್ಯಜೀವಿ ಅನುಮೋದನೆ ನೀಡಲು ರಾಷ್ಟ್ರೀಯ ವನ್ಯಜೀವಿ ಮಂಡಳಿ ನಿರಾಕರಿಸಿದೆ. ಕರ್ನಾಟಕದ 435 ಎಕರೆ ಅರಣ್ಯ ಬಳಕೆಯಾಗುವ ಗೋವಾ– ತಮ್ನಾರ್ 400 ಕೆ.ವಿ. ವಿದ್ಯುತ್ ಮಾರ್ಗಕ್ಕೆ ಮಂಡಳಿಯು ಷರತ್ತುಬದ್ಧ ಒಪ್ಪಿಗೆ ನೀಡಿದೆ. ಗೋವಾದ ಹೆಚ್ಚುವರಿ ವಿದ್ಯುತ್‌ ಮಾರ್ಗ ಯೋಜನೆಗೆ ರಾಜ್ಯದ ಕಾಡು ಒದಗಿಸುವ ಯೋಜನೆಗೆ ವಿರೋಧ ಇದೆ. ವನ್ಯಜೀವಿ ಮಂಡಳಿಯ ತೀರ್ಮಾನವು ರಾಜ್ಯಕ್ಕೆ ಕಹಿಯಾಗಿದ್ದರೆ, ಗೋವಾಕ್ಕೆ ಸಿಹಿ. 

ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವ ಭೂಪೇಂದರ್‌ ಯಾದವ್‌ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿಯ ಸ್ಥಾಯಿ ಸಮಿತಿಯ 79ನೇ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಕಳಸಾ ತಿರುವು ಯೋಜನೆಗೆ ಮತ್ತೆ ಅಡ್ಡಿ 

ಈ ಯೋಜನೆಯ ಪರಿಷ್ಕೃತ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗ 2022ರ ಡಿಸೆಂಬರ್‌ 29ರಂದು ಒಪ್ಪಿಗೆ ನೀಡಿತ್ತು. ಇದರಲ್ಲಿ ಕಳಸಾ ನಾಲಾ ತಿರುವು ಯೋಜನೆಗೆ 1.78 ಟಿಎಂಸಿ ಅಡಿ ಮೀಸಲಿಡಲಾಗಿದೆ.

ಈ ಯೋಜನೆಗೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಏಳು ಗ್ರಾಮಗಳ ಅರಣ್ಯ ಬಳಕೆಗೆ (ಜಾಕ್‌ವೆಲ್‌ ನಿರ್ಮಾಣ, ಪಂಪ್‌ ಹೌಸ್‌, ಎಲೆಕ್ಟ್ರಿಕಲ್‌ ಸಬ್‌ ಸ್ಟೇಷನ್‌, ಪೈಪ್‌ಲೈನ್‌) ಒಪ್ಪಿಗೆ ನೀಡುವಂತೆ ರಾಜ್ಯ ಸರ್ಕಾರವು ಮಂಡಳಿಗೆ ಪ್ರಸ್ತಾವ ಸಲ್ಲಿಸಿತ್ತು. ಈ ಯೋಜನೆಗೆ ಕಾಳಿ ಹಾಗೂ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶದ 10.68 ಹೆಕ್ಟೇರ್ ಅರಣ್ಯ ಬಳಸಿಕೊಳ್ಳಲಾಗುತ್ತದೆ ಎಂದು ಪ್ರಸ್ತಾವದಲ್ಲಿ ತಿಳಿಸಿತ್ತು. ಇದಕ್ಕೆ ರಾಜ್ಯ ವನ್ಯಜೀವಿ ಮಂಡಳಿ ಅನುಮೋದನೆ ನೀಡಿ ಕೇಂದ್ರಕ್ಕೆ ಕಳುಹಿಸಿತ್ತು. ವನ್ಯಜೀವಿ ಮಂಡಳಿಯ ಹಿಂದಿನ ಸಭೆಯಲ್ಲಿ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿರಲಿಲ್ಲ. 

‘ಮಹದಾಯಿ ಯೋಜನಾ ಪ್ರದೇಶದ ವಾಸ್ತವಾಂಶದ ಅಧ್ಯಯನಕ್ಕೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ತಜ್ಞರ ತಂಡವನ್ನು ಕಳುಹಿಸಿತ್ತು. ಈ ಸಮಿತಿಯು ಹಲವು ಶಿಫಾರಸುಗಳನ್ನು ಮಾಡಿದೆ. ಈ ಬಗ್ಗೆ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಪ್ರತಿಕ್ರಿಯೆ ಕೇಳಲಾಗಿತ್ತು. ಸಬ್‌ಜುಡೀಸ್‌ ಆಗುತ್ತದೆ ಎಂಬ ಕಾರಣ ಮುಂದಿಟ್ಟು ಈವರೆಗೆ ಪ್ರತಿಕ್ರಿಯೆ ನೀಡಿಲ್ಲ’ ಎಂದು ವನ್ಯಜೀವಿ ಮಂಡಳಿಯು ತಿಳಿಸಿತು. 

ಇದು ಕರ್ನಾಟಕ ಸರ್ಕಾರದ ಯೋಜನೆ. ಗೋವಾ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದೆ ಎಂದು ಕರ್ನಾಟಕ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತಿಳಿಸಿದರು. ಚರ್ಚೆಯ ನಂತರ, ಈ ವಿಷಯವನ್ನು ಮುಂದಿನ ಸಭೆಗೆ ಮುಂದೂಡಲು ಮಂಡಳಿಯು ತೀರ್ಮಾನಿಸಿತು. 

ರಾಜ್ಯದ ಒಪ್ಪಿಗೆ ಮೊದಲೇ ಕೇಂದ್ರದ ಅನುಮೋದನೆ 

ಧಾರವಾಡದ ನರೇಂದ್ರದಿಂದ ಗೋವಾಕ್ಕೆ 400 ಕೆ.ವಿ. ಸಾಮರ್ಥ್ಯದ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ–ತಮ್ನಾರ್ ವಿದ್ಯುತ್‌ ಯೋಜನೆಗೆ ಮಂಡಳಿಯು ಷರತ್ತುಬದ್ಧ ವನ್ಯಜೀವಿ ಅನುಮೋದನೆ ನೀಡಿದೆ. 

ಈ ಯೋಜನೆಗೆ ಭಗವಾನ್‌ ಮಹಾವೀರ ವನ್ಯಜೀವಿ ಧಾಮದ 27 ಹೆಕ್ಟೇರ್ ಅರಣ್ಯ ಬಳಕೆಗೆ ಗೋವಾ ಸರ್ಕಾರ ಒಪ್ಪಿಗೆ ಕೇಳಿದೆ. ಈ ಅರಣ್ಯ ಬಳಕೆಗೆ ಈಗ ಒಪ್ಪಿಗೆ ಸಿಕ್ಕಿದೆ. ಜತೆಗೆ, ಈ ಯೋಜನೆಗೆ ರಾಜ್ಯದ 435 ಎಕರೆ ಅರಣ್ಯ ಬಳಕೆಗೆ ಪ್ರಸ್ತಾಪಿಸಲಾಗಿದೆ. ಉದ್ದೇಶಿತ ವಿದ್ಯುತ್ ಮಾರ್ಗವು ದಾಂಡೇಲಿ ಆನೆ ಕಾರಿಡಾರ್‌, ಭೀಮಗಡ ಅಭಯಾರಣ್ಯದ ಪರಿಸರ ಸೂಕ್ಷ್ಮವಲಯ, ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯ ಗಳ ಮೂಲಕ ಹಾದುಹೋಗಲಿದೆ. ದೊಡ್ಡ ಪ್ರಮಾಣದಲ್ಲಿ ಕಾಡು ನಾಶವಾಗಲಿದೆ. 

ಕರ್ನಾಟಕ ಭಾಗದಲ್ಲಿ ಯೋಜನೆಯ ಪ್ರಸ್ತಾವನೆಯನ್ನು ಮಂಡಳಿಯ ಸ್ಥಾಯಿ ಸಮಿತಿ ಶಿಫಾರಸು ಮಾಡುವವರೆಗೆ ಕಾಮಗಾರಿಗಳನ್ನು ಪ್ರಾರಂಭಿಸಬಾರದು ಎಂದು ಮಂಡಳಿಯು ಯೋಜನಾ ಸಂಸ್ಥೆಗೆ ಷರತ್ತು ವಿಧಿಸಿದೆ. 

ವಿದ್ಯುತ್‌ ಮಾರ್ಗಕ್ಕೆ ಅರಣ್ಯ ಬಳಸಲು ಅನುಮತಿ ನೀಡುವಂತೆ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಕರ್ನಾಟಕ ಸರ್ಕಾರಕ್ಕೆ 2019ರಲ್ಲಿ ಪ್ರಸ್ತಾವನೆ ಸಲ್ಲಿಸಿತ್ತು. 2020ರಲ್ಲಿ ಕೆನರಾ ವೃತ್ತದ ಸಿಸಿಎಫ್‌ ಸ್ಥಳ ಪರಿಶೀಲನೆ ನಡೆಸಿ, ‘ಪಶ್ಚಿಮಘಟ್ಟದ ದಟ್ಟ ಅರಣ್ಯದಲ್ಲಿ ಈ ಯೋಜನೆ ಹಾದು ಹೋಗಲಿದೆ. ಈ ಯೋಜನೆಯಿಂದ ಹುಲಿ ಆವಾಸಸ್ಥಾನದ ಮೇಲೂ ಪರಿಣಾಮ ಬೀರಲಿದೆ. ಈ ಪ್ರಸ್ತಾವವನ್ನು ತಿರಸ್ಕರಿಸಬೇಕು’ ಎಂದು ಶಿಫಾರಸು ಮಾಡಿದ್ದರು. ಯೋಜನೆಯ ಪ್ರಸ್ತಾವವನ್ನು ತಿರಸ್ಕರಿಸುವುದು ಉತ್ತಮ ಎಂದೂ ಪಿಸಿಸಿಎಫ್ 2021ರಲ್ಲಿ ವರದಿ ಸಲ್ಲಿಸಿದ್ದರು. 

ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ‘ಗೋವಾ ಫೌಂಡೇಷನ್‌’ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಈ ಕುರಿತು ವರದಿ ನೀಡುವಂತೆ ಸಿಇಸಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ‘ಈ ಮಾರ್ಗದಲ್ಲಿ ಈಗಾಗಲೇ 220 ಕೆ.ವಿ.ಮಾರ್ಗ ಇದೆ. ಹೊಸಮಾರ್ಗ ನಿರ್ಮಾಣಕ್ಕೆ ಸಾವಿರಾರು ಮರಗಳನ್ನು ಕಡಿಯಬೇಕಾಗು ತ್ತದೆ. ಅದರ ಬದಲು ಈಗಿರುವ ಮಾರ್ಗ ಬಳಸುವುದು ಉತ್ತಮ. ಅಲ್ಲದೆ, ಕರ್ನಾಟಕ ಸರ್ಕಾರದ ಅನುಮತಿ ಪಡೆದೇ ಮುಂದುವರಿಯಬೇಕು’ ಎಂದು ಸಿಇಸಿ ಶಿಫಾರಸು ಮಾಡಿತ್ತು. ಬಳಿಕ ಸಂಸ್ಥೆಯು ಹೊಸದಾಗಿ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಒಪ್ಪಿಗೆ ನೀಡದಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಮಾರ್ಚ್‌ನಲ್ಲಿ ಸೂಚನೆ ನೀಡಿದ್ದರು. 

‘ಮಂಡಳಿ ತರಾತುರಿ ಏಕೆ’

ಗೋವಾ–ತಮ್ನಾರ್ ಯೋಜನೆ ಬಗ್ಗೆ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿಯು ಇನ್ನೂ ನಿರ್ಧಾರವನ್ನೇ ಕೈಗೊಂಡಿಲ್ಲ. ಹೀಗಿರುವಾಗ ರಾಷ್ಟ್ರೀಯ ವನ್ಯಜೀವಿ ಮಂಡಳಿಯು ತರಾತುರಿಯಲ್ಲಿ ನಿರ್ಧಾರವನ್ನು ಕೈಗೊಂಡಿದ್ದೇಕೆ? ಗೋವಾ ವ್ಯಾಪ್ತಿಯಲ್ಲಿ ಅನುಮತಿ ನೀಡಿ ಕರ್ನಾಟಕದ ಅನುಮತಿ ಪಡೆದ ನಂತರ ಕಾಮಗಾರಿ ಆರಂಭಿಸಬೇಕೆಂಬ ಮಂಡಳಿಯ ಈ ನಿರ್ಧಾರ ಒತ್ತಡದ ತಂತ್ರ ಎನಿಸುತ್ತಿದೆ ಹಾಗೂ ಲಫಾರ್ಜ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಸ್ಪಷ್ಟ ಉಲ್ಲಂಘನೆ. ಗೋವಾ ರಾಜ್ಯದ ಈ ಯೋಜನೆಯನ್ನು ನಮ್ಮ ರಾಜ್ಯದ ನಾಯಕರು ಪಕ್ಷಭೇದ ಮರೆತು ವಿರೋಧಿಸಬೇಕು. ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿಈ ಪ್ರಸ್ತಾವನೆ ಯನ್ನು ತಿರಸ್ಕರಿಸಬೇಕು – ಗಿರಿಧರ್ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT