ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬಾಹಿರ ಹುಕ್ಕಾಬಾರ್ ವಿರುದ್ಧ ಕ್ರಮ: ಡಿ. ರಂದೀಪ್

ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಮಾಹಿತಿ
Last Updated 1 ಮಾರ್ಚ್ 2023, 5:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವ ಹುಕ್ಕಾಬಾರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ಬಾಲಕ–ಬಾಲಕಿಯರು ಅನಧಿಕೃತವಾಗಿ ಹುಕ್ಕಾಬಾರ್‌ಗಳಿಗೆ ತೆರಳುತ್ತಿರುವುದು ಗಮನಕ್ಕೆ ಬಂದಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ತಿಳಿಸಿದರು.

ಆರೋಗ್ಯ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ ನಗರದಲ್ಲಿ ಮಂಗಳವಾರ ಹಮ್ಮಿಕೊಂಡ ‘ತಂಬಾಕುಮುಕ್ತ ತಲೆಮಾರು’ ಕಾರ್ಯಾಗಾರದಲ್ಲಿ ಮಾತನಾಡಿದರು. ‘ಹೊಸದಾಗಿ ತಲೆ ಎತ್ತುತ್ತಿರುವ ಹುಕ್ಕಾಬಾರ್‌ಗಳ ಕಾರ್ಯನಿರ್ವಹಣೆ ಬಗ್ಗೆ ದೂರುಗಳು ಬಂದಿವೆ. ಬಿಬಿಎಂಪಿ ಸಹಯೋಗದಲ್ಲಿ ಮೊದಲು ಬೆಂಗಳೂರು, ಬಳಿಕ ರಾಜ್ಯದಾದ್ಯಂತ ಹುಕ್ಕಾಬಾರ್ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ರಾಜ್ಯದಲ್ಲಿ ತಂಬಾಕು ಉತ್ಪನ್ನ ಸೇವನೆ ಹಾಗೂ ಮಾರಾಟಕ್ಕೆ ಕೆಲವೊಂದು ನಿಯಮಗಳಿವೆ. ಅವುಗಳು ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಕೆಲವು ಗ್ರಾಮಗಳು ತಂಬಾಕು ಮುಕ್ತವಾಗಿರುವುದು ಉತ್ತಮ ಬೆಳವಣಿಗೆ. ತಂಬಾಕು ಮುಕ್ತ ಪೀಳಿಗೆಯನ್ನು ನಿರ್ಮಿಸಲು ಅಡ್ಡಿಯಾಗಿರುವ ವಿತಂಡವಾದಿಗಳ ಸಂಖ್ಯೆ ದೊಡ್ಡದಿದೆ. ಇಂತಹವರನ್ನು ಮೀರಿ ಕಾರ್ಯ ಸಾಧಿಸಬೇಕು. ಯುವ ಜನರು ತಂಬಾಕು ನಿಯಂತ್ರಣದ ರಾಯಭಾರಿಗಳಾಗಬೇಕು’ ಎಂದರು.

ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣ್ ಕುಮಾರ್, ‘ಯುವಜನರು ಚಿಕ್ಕ ವಯಸ್ಸಿನಲ್ಲಿ ತಂಬಾಕು ವ್ಯಸನಿಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ತಂಬಾಕು ಚಟಕ್ಕೆ ಸಿಲುಕಿದ ನಂತರ ಶೇ 6ರಷ್ಟು ಜನ ಮಾತ್ರ ತಂಬಾಕು ಬಳಕೆಯಿಂದ ಹೊರಬರುತ್ತಿದ್ದಾರೆ. ಉಳಿದವರನ್ನು ಈ ಚಟದಿಂದ ಹೊರ ತರುವುದು ಕಷ್ಟವಾಗಿದೆ. ಇಲಾಖೆಯು ರಾಜ್ಯದಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ತಂಬಾಕು ಮುಕ್ತ ಗ್ರಾಮಗಳನ್ನು ನಿರ್ಮಿಸುತ್ತಿದ್ದು, ಈ ಗ್ರಾಮಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ’ ಎಂದು ಹೇಳಿದರು.

ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಡಾ.ಸೆಲ್ವರಾಜನ್, ರಾಜ್ಯ ತಂಬಾಕು ನಿಯಂತ್ರಣ ಘಟಕದ ಪ್ರಭಾಕರ ಪೂಜಾರಿ ಮತ್ತಿತರರು ಇದ್ದರು. ಕರ್ನಾಟಕ ಮಹಿಳಾ ಯಕ್ಷಗಾನದಿಂದ ‘ಮಾಯಾ ಮಾದಕ’ ಯಕ್ಷಗಾನ ಪ್ರದರ್ಶನ ಕಂಡಿತು.

‘ಸ್ಟಾಪ್ ಟೊಬ್ಯಾಕೊ’ ಆ್ಯಪ್ ಲೋಕಾರ್ಪಣೆ

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ತಡೆಗೆ ಆರೋಗ್ಯ ಇಲಾಖೆ ಅಭಿವೃದ್ಧಿಪಡಿಸಿರುವ ‘ಸ್ಟಾಪ್ ಟೊಬ್ಯಾಕೊ’ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಲಾಯಿತು. ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಛಾಯಾಚಿತ್ರಗಳನ್ನು ತೆಗೆದು, ಅಪ್ಲೋಡ್ ಮಾಡುವ ಅವಕಾಶ ಇದರಲ್ಲಿ ಇದೆ. ಈ ಛಾಯಾಚಿತ್ರದ ಆಧಾರದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತಂಡ ಸ್ಥಳಕ್ಕೆ ಭೇಟಿ ನೀಡಿ, ಕ್ರಮವಹಿಸಲಿದೆ. ಈ ಆ್ಯಪ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT