ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೌಚಾಲಯದ ಗೋಡೆ ಮೇಲೆ ಮಹಿಳೆ ಫೋನ್ ನಂಬರ್: ಕ್ರಮಕ್ಕೆ ಹೈಕೋರ್ಟ್ ಆದೇಶ

Published 15 ಜೂನ್ 2024, 19:50 IST
Last Updated 15 ಜೂನ್ 2024, 19:50 IST
ಅಕ್ಷರ ಗಾತ್ರ

ಬೆಂಗಳೂರು: ‘ಮಹಿಳೆಯರ ಘನತೆ ಹಾಗೂ ವ್ಯಕ್ತಿತ್ವಕ್ಕೆ ಭಂಗ ಉಂಟು ಮಾಡುವ ಪ್ರಕರಣಗಳನ್ನು ವಿಚಾರಣಾ ನ್ಯಾಯಾಲಯಗಳು ಗಂಭೀರವಾಗಿ ಪರಿಗಣಿಸುವ ಮೂಲಕ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.

‘ಸರ್ಕಾರಿ ನೌಕರಿ ಮಾಡುವ ಮಹಿಳೆಯೊಬ್ಬರ ಫೋನ್ ನಂಬರ್ ಅನ್ನು ನಗರದ ಮೆಜೆಸ್ಟಿಕ್ ಶೌಚಾಲಯದ ಗೋಡೆಯ ಮೇಲೆ ಬರೆದು ಅದರ ಕೆಳಗೆ, ಈಕೆ ಕಾಲ್ ಗರ್ಲ್’ ಎಂದು ಹೆಸರಿಸಿದ್ದ ಆರೋಪದಡಿಯ ಪ್ರಕರಣ ರದ್ದುಪಡಿಸುವಂತೆ ಆರೋಪಿ ಕೋರಿದ್ದ ಪ್ರಕರಣದಲ್ಲಿ ಈ ಕುರಿತಂತೆ ಆದೇಶಿಸಲಾಗಿದೆ.

‘ನನ್ನ ವಿರುದ್ಧ ನಗರದ 5ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಬೇಕು’ ಎಂದು ಕೋರಿ ಚಿತ್ರದುರ್ಗದ ಅಲ್ಲಾ ಬಕ್ಷ ಅಲಿಯಾಸ್ ಎ.ಬಿ.ಪಟೇಲ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಲೈಂಗಿಕ ಹಿಂಸೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಖಾಸಗಿ ಹಕ್ಕಿನ ರಕ್ಷಣೆ ಇಂದಿನ ಅತ್ಯಂತ ಜರೂರಾಗಿದೆ’ ಎಂದು ಹೇಳಿದೆ.

‘ಮಹಿಳೆಯರ ವಿರುದ್ಧ ಬಳಸಲಾಗುವ ಅಶ್ಲೀಲ ಪದಗಳು ಹಾಗೂ ಮಾನಹಾನಿ ಮಾಡುವ ಕೃತ್ಯಗಳು ಸಂತ್ರಸ್ತರಿಗೆ ಆತ್ಮಾಘಾತ ಉಂಟು ಮಾಡುತ್ತವೆ. ಅವರ ವೈಯಕ್ತಿಕ ಬದುಕನ್ನು ಛಿದ್ರಗೊಳಿಸಿ ಭರಿಸಲಾಗದ ಮಾನಸಿಕ ಜರ್ಜರತೆಗೆ ಕಾರಣವಾಗುತ್ತವೆ. ಹೀಗಾಗಿ, ಇಂತಹ ಅಪರಾಧಗಳ ದುಷ್ಟರನ್ನು ಎಡೆಮುರಿ ಕಟ್ಟುವ ಅಗತ್ಯವಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಇವತ್ತಿನ ಡಿಜಿಟಲ್ ಯುಗದಲ್ಲಿ ಯಾರೂ ಮತ್ತೊಬ್ಬರಿಗೆ ನೇರವಾಗಿ ದೈಹಿಕ ಘಾಸಿ ಉಂಟು ಮಾಡುವ ಅಗತ್ಯವಿಲ್ಲ. ಬದಲಿಗೆ ಅಶ್ಲೀಲ ಸಾಹಿತ್ಯ, ಕಾಮಾತುರ ಬಯಕೆಗಳ ವಿಕೃತ ಅಭಿವ್ಯಕ್ತಿ, ದೃಶ್ಯಗಳು ಅಥವಾ ವಿಡಿಯೊಗಳನ್ನು ಸಾಮಾಜಿಕ‌ ಜಾಲತಾಣದಲ್ಲಿ ಹರಿಯಬಿಟ್ಟರೆ ಸಾಕು. ಅದರಲ್ಲೂ ಇಂತಹವುಗಳು ಮಹಿಳೆಯರನ್ನು ಗುರಿಯಾಗಿಸಿಕೊಂಡಾಗ ಇನ್ನಿಲ್ಲದ ಹಾನಿ ಉಂಟು ಮಾಡುತ್ತವೆ. ಇಂತಹ ದುಷ್ಕೃತ್ಯ ಎಸಗುವ ಪಾತಕಿಗಳಿಗೆ ಕಡಿವಾಣ ಹಾಕಬೇಕಾದ ತುರ್ತು ಎಂದಿಗಿಂತಲೂ ಇಂದು ಹೆಚ್ಚಿದೆ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ರಾಜ್ಯದ ಗ್ರಾಮೀಣ ಭಾಗವೊಂದರಲ್ಲಿ ದ್ವಿತೀಯ ದರ್ಜೆಯ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯೊಬ್ಬರು ಅಲ್ಲಾ ಬಕ್ಷ ವಿರುದ್ಧ ದೂರು‌ ನೀಡಿದ್ದರು.

ದೂರಿನಲ್ಲಿ ಏನಿತ್ತು?: ‘ಇಲಾಖೆ ವತಿಯಿಂದ ನೀಡಲಾದ ಸಿಮ್ ಕಾರ್ಡ್ ಉಪಯೋಗಿಸುವ ನನ್ನ ಮೊಬೈಲ್ ನಂಬರ್ ಗೆ ಅಪರಿಚಿತರಿಂದ ದೂರವಾಣಿ ಕರೆಗಳು ಬರುತ್ತಿವೆ. ಫೋನ್ ಮಾಡಿದವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುತ್ತಾರೆ. ನೀನು ನನಗೆ ಗೊತ್ತು. ನೀನು ಬರದಿದ್ದರೆ ಸಿಕ್ಕಾಗ ಪ್ರಾಣ ತೆಗೆಯುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ. ಈ ರೀತಿಯ ಕಾಲ್ ಮಾಡುತ್ತಿರುವವರು ಯಾರು ಎಂದು ಫೋನ್ ಮಾಡಿದವರಿಗೆ ವಿಚಾರಿಸಿದಾಗ ಮೆಜೆಸ್ಟಿಕ್ ಬಸ್ ನಿಲ್ದಾಣದ ಟರ್ಮಿನಲ್-1ರ ಬಳಿಯ ಶೌಚಾಲಯದಲ್ಲಿ ನನ್ನ ಫೋನ್ ನಂಬರ್ ಹಾಗೂ ಅದರ ಪಕ್ಕದಲ್ಲಿ ಕಾಲ್ ಗರ್ಲ್ ಎಂದು ಬರೆದಿರುವುದು ಗೊತ್ತಾಗಿರುತ್ತದೆ. ಆದ್ದರಿಂದ, ಈ ಕುರಿತು ಸೂಕ್ತ ಕ್ರಮ ಕೈಗೊಂಡು ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು 32 ವರ್ಷದ ಮಹಿಳೆ ದೂರಿನಲ್ಲಿ ವಿವರಿಸಿದ್ದರು.

ಈ ದೂರನ್ನು ಆಧರಿಸಿ ಉಪ್ಪಾರಪೇಟೆ ಠಾಣೆಯ ಪೊಲೀಸರು ಭಾರತೀಯ ದಂಡ ಸಂಹಿತೆ-1860ರ ಕಲಂ 501 (ಮಾನಹಾನಿಕವೆಂದು ತಿಳಿದಿರುವ ವಿಷಯವನ್ನು ಮುದ್ರಿಸುವ ಅಥವಾ ಕೆತ್ತನೆಯ ಮೂಲಕ ಪ್ರಕಟ ಪಡಿಸುವುದು), 504 (ಶಾಂತಿಭಂಗ- ಉದ್ದೇಶ ಪೂರ್ವಕ ಅಪಮಾನ) ಹಾಗೂ 506 (ಅಪರಾಧಿಕ ಭಯೋತ್ಪಾದನೆ) ಅಡಿಯಲ್ಲಿ 2020ರಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT