ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರೂಣಲಿಂಗ ಪತ್ತೆ: ಸಿಕ್ಕಿಬಿದ್ದ ವೈದ್ಯೆ

ಭ್ರೂಣದ ಲಿಂಗ ಪತ್ತೆ ಮಾಡಿ ವೈದ್ಯೆಯೊಬ್ಬರು ಸಿಕ್ಕಿಬಿದ್ದಿರುವುದು ರಾಜ್ಯದಲ್ಲಿ ಇದೇ ಮೊದಲು
Last Updated 31 ಜನವರಿ 2019, 20:15 IST
ಅಕ್ಷರ ಗಾತ್ರ

ಚಿತ್ರದುರ್ಗ: ಆರು ತಿಂಗಳ ಗರ್ಭಿಣಿಯ ಭ್ರೂಣಲಿಂಗ ಪತ್ತೆ ಮಾಡಿದ ಡಾ.ಬಿ. ಶಂಕರ ಲಕ್ಷ್ಮಿ ಎಂಬ ವೈದ್ಯೆ ಸಿಕ್ಕಿಬಿದ್ದಿದ್ದಾರೆ. ಭ್ರೂಣಹತ್ಯೆಗೆ ನೀಡಿದ ಔಷಧ ಸೇವಿಸಿ ಅಸ್ವಸ್ಥಗೊಂಡ ಗರ್ಭಿಣಿ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಭ್ರೂಣಲಿಂಗ ಪತ್ತೆ ಮಾಡಿದ ಚಳ್ಳಕೆರೆಯ ಲಕ್ಷ್ಮಿ ಶ್ರೀನಿವಾಸ ನರ್ಸಿಂಗ್‌ ಹೋಮ್‌ಗೆ ಗರ್ಭಧಾರಣೆಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ತಂತ್ರಜ್ಞಾನ ನಿಯಂತ್ರಣ ಹಾಗೂ ದುರ್ಬಳಕೆ ತಡೆ (ಪಿಸಿಪಿಎನ್‌ಡಿಟಿ) ಕೋಶದ ಉಪ ನಿರ್ದೇಶಕ ಡಾ.ಪ್ರಭುಗೌಡ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಲಿಂಗ ಪತ್ತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ವೈದ್ಯೆ ಹಾಗೂ ಗರ್ಭಿಣಿಯ ಕುಟುಂಬದ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ನಿರ್ಧರಿಸಲಾಗಿದೆ. ಲಿಂಗ ಪತ್ತೆ ಮಾಡಿ ವೈದ್ಯೆಯೊಬ್ಬರು ಬಹಿರಂಗವಾಗಿ ಸಿಕ್ಕಿಬಿದ್ದಿರುವುದು ರಾಜ್ಯದಲ್ಲಿ ಇದೇ ಮೊದಲು ಎಂದು ಕೋಶ ಮಾಹಿತಿ ನೀಡಿದೆ.

‘ಚಳ್ಳಕೆರೆ ತಾಲ್ಲೂಕಿನ ಹೊಸೂರು ಗ್ರಾಮದ ಗರ್ಭಿಣಿಯ ಲಿಂಗ ಪತ್ತೆ ಜ.29ರಂದು ನಡೆದಿತ್ತು. ಇಬ್ಬರು ಪುತ್ರಿಯರ ತಾಯಿಯಾಗಿದ್ದ ಮಹಿಳೆಯ ಗರ್ಭದಲ್ಲಿ ಮೊತ್ತೊಂದು ಹೆಣ್ಣುಮಗು ಇರುವುದು ಗೊತ್ತಾಗಿತ್ತು. ಇದರಿಂದ ಆಘಾತಗೊಂಡ ದಂ‍ಪತಿ ಭ್ರೂಣಹತ್ಯೆಗೆ ಮನವಿ ಮಾಡಿದ್ದರು. ಗರ್ಭಿಣಿಯ ಕೋರಿಕೆಯ ಮೇರೆಗೆ ವೈದ್ಯೆ ಔಷಧ ನೀಡಿದ್ದರು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಬಿ.ವಿ.ನೀರಜ್‌ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಗರ್ಭಿಣಿ ಮರುದಿನ ಮತ್ತೆ ಆಸ್ಪತ್ರೆಗೆ ಬಂದಿದ್ದರು. ಗರ್ಭದಲ್ಲಿರುವ ಮಗುವನ್ನು ಉಳಿಸುವಂತೆ ಪಟ್ಟು ಹಿಡಿದಿದ್ದರು. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ ಹಾಗೂ ಗರ್ಭಿಣಿಯ ಕುಟುಂಬದ ನಡುವೆ ಗಲಾಟೆ ನಡೆದಿದ್ದರಿಂದ ವಿಷಯ ಬಹಿರಂಗವಾಯಿತು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT