ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥುನ್‌ ರೈ ತಲೆ ತೆಗೆಯುತ್ತೇವೆ: ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ

ವಿಜಯೋತ್ಸವ ಆಚರಣೆ ವೇಳೆ ಬಜರಂಗದಳ ಕಾರ್ಯಕರ್ತರಿಂದ ಬೆದರಿಕೆ
Last Updated 27 ಮೇ 2019, 7:14 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಮಿಥುನ್‌ ರೈ ಅವರ ತಲೆ ತೆಗೆಯುವುದಾಗಿ ಬಜರಂಗದಳದ ಕಾರ್ಯಕರ್ತರು ಮೇ 23ರಂದು ಬಂಟ್ವಾಳ ತಾಲ್ಲೂಕಿನ ಬಡಕಬೈಲ್‌ನಲ್ಲಿ ನಡೆದ ವಿಜಯೋತ್ಸವದ ವೇಳೆ ಘೋಷಣೆ ಕೂಗುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಮಿಥುನ್‌ ರೈ ವಿರುದ್ಧ ಬಿಜೆಪಿಯ ನಳಿನ್‌ ಕುಮಾರ್‌ ಕಟೀಲ್‌ ಗೆಲುವು ಸಾಧಿಸಿದ್ದಾರೆ. ಮತ ಎಣಿಕೆಯ ದಿನ ರಾತ್ರಿ ಬಡಕಬೈಲ್‌ ಜಂಕ್ಷನ್‌ನಲ್ಲಿ ಬಜರಂಗದಳ ಕಾರ್ಯಕರ್ತರು ಸಂಘಟನೆಯ ಬಾವುಟಗಳನ್ನು ಹಿಡಿದು ವಿಜಯೋತ್ಸವ ಆಚರಿಸಿದ್ದಾರೆ.

ಈ ಸಂದರ್ಭದಲ್ಲಿ ಬಜರಂಗದಳದ ಬಾವುಟ ಹಿಡಿದು ತಲೆಗೆ ಕೇಸರಿ ಪಟ್ಟಿ ಕಟ್ಟಿಕೊಂಡಿದ್ದ ಯುವಕನೊಬ್ಬ ಮಿಥುನ್‌ ರೈ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ‘ಮಿಥುನ್‌ ರೈ ಬಜರಂಗದಳದ ತಂಟೆಗೆ ಬಂದರೆ ಕೈ ತೆಗೆಯುತ್ತೇವೆ, ಕಾಲು ತೆಗೆಯುತ್ತೇವೆ. ಅಗತ್ಯ ಬಿದ್ದರೆ ತಲೆಯನ್ನೂ ತೆಗೆಯುತ್ತೇವೆ’ ಎಂದು ತುಳು ಭಾಷೆಯಲ್ಲಿ ಏರು ದನಿಯಲ್ಲಿ ಕೂಗಿದ್ದಾನೆ. ಆತನ ಜೊತೆಗಿದ್ದವರು ಅದನ್ನು ಪುನರುಚ್ಛರಿಸಿರುವುದು ವಿಡಿಯೊದಲ್ಲಿದೆ.

ಕೊಲೆ ಬೆದರಿಕೆ ಕುರಿತು ಪೊಲೀಸರಿಗೆ ದೂರು ನೀಡಲು ಕಾಂಗ್ರೆಸ್‌ ಮುಖಂಡರು ಮುಂದಾಗಿದ್ದಾರೆ. ಈ ನಡುವೆ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 108ರ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಪ್ರಕರಣವೊಂದನ್ನು ದಾಖಲಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಎಸ್‌ಪಿ ಬಿ.ಎಂ.ಲಕ್ಷ್ಮೀಪ್ರಸಾದ್‌ ಬಾಬು, ‘ಮಿಥುನ್‌ ರೈ ಅವರಿಗೆ ಬೆದರಿಕೆ ಒಡ್ಡಿರುವ ಕುರಿತು ದೂರು ಸಲ್ಲಿಸುವುದಾಗಿ ಸಂಬಂಧಿಸಿದವರು ತಿಳಿಸಿದ್ದಾರೆ. ದೂರಿಗಾಗಿ ನಾವು ಕಾಯುತ್ತಿದ್ದೇವೆ. ಅದಕ್ಕೂ ಮೊದಲು ಸಿಆರ್‌ಪಿಸಿ ಸೆಕ್ಷನ್‌ 108ರ ಅಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ’ ಎಂದರು.

ಕಾಂಗ್ರೆಸ್‌ ಕಚೇರಿಯಲ್ಲೇ ಇರುತ್ತೇನೆ:ಬೆದರಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಮಿಥುನ್ ರೈ, ‘ನನ್ನ ತಲೆ ತೆಗೆಯುವುದಾದರೆ ಕಾಂಗ್ರೆಸ್‌ ಕಚೇರಿ ಎದುರು ಇರುತ್ತೇನೆ ಬನ್ನಿ. ನನ್ನ ವಿಳಾಸ ಕಾಂಗ್ರೆಸ್‌ ಕಚೇರಿ, ಕೋಮು ದ್ವೇಷ ಉಂಟು ಮಾಡುವ ಸಂಘಟನೆ ವಿರುದ್ಧ ನನ್ನ ಹೋರಾಟ ನಿರಂತರ’ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ ಸಮಿತಿ ಕಚೇರಿಯಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಕೋಮು ಸಂಘರ್ಷ ಉಂಟು ಮಾಡುವ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದೆ. ಮಿಥುನ್‌ ರೈ ತಲೆ ತೆಗೆಯುವುದರಿಂದ ಜಿಲ್ಲೆಯಲ್ಲಿ ಶಾಂತಿ, ಕೋಮು ಸಂಘರ್ಷ ನಿಲ್ಲುತ್ತದೆ ಎಂದಾದರೆ ನನ್ನ ತಲೆ ತೆಗೆಯಲಿ. ನನ್ನ ದೇಹ ತ್ಯಾಗ ಮಾಡುವುದಕ್ಕೂ ನಾನು ಸಿದ್ಧನಿದ್ದೇನೆ. ನಾನು ಎಲ್ಲಿಯೂ ಹೆದರಿ ಓಡಿ ಹೋಗಲ್ಲ. ನಾನು ಕಾಂಗ್ರೆಸ್‌ ಕಚೇರಿ ಎದುರಿನಲ್ಲಿಯೇ ಇರುತ್ತೇನೆ, ಬನ್ನಿ’ ಎಂದು ಸವಾಲು ಹಾಕಿದರು.

’ಈ ಘಟನೆಗೆ ಸಂಬಂಧಿಸಿ ಎಲ್ಲ ತಾಲ್ಲೂಕುಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ದೂರು ದಾಖಲು ಮಾಡಲಿದ್ದಾರೆ. ಈ ಬಗ್ಗೆ ನಾನು ಕೂಡಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರಿಗೆ ದೂರು ಸಲ್ಲಿಸಲಿದ್ದೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT