ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿದವರ ಪರದಾಟ...

Last Updated 9 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಅಖಿಲ ಭಾರತ 79 ನೇ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ ಸಹಸ್ರಾರು ಜನರು ಮಧ್ಯಾಹ್ನದ ಊಟಕ್ಕಾಗಿ ಪರದಾಡಿದರಲ್ಲದೇ, ಅಲ್ಲಿ ಜನಸಂದಣಿ ಹೆಚ್ಚಾಗಿ ನೂಕುನುಗ್ಗಲು ಉಂಟಾಯಿತು.

ಸಮ್ಮೇಳನದ ಸ್ಥಳದಲ್ಲಿ ಹರಡಿಕೊಂಡಿದ್ದ ದೂಳಿನಲ್ಲಿಯೇ ಊಟಕ್ಕೆ ಬಂದ ಸಹಸ್ರಾರು ಜನರು ಊಟ ಸಿಗದೇ ಪರದಾಡಿದರು. ಊಟಕ್ಕಾಗಿ ಸಾಹಿತ್ಯಾಭಿಮಾನಿಗಳು ಸಂಘಟಕರ ವಿರುದ್ಧ ಪ್ರಧಾನ ವೇದಿಕೆಯ ಎಡಬಲದಲ್ಲಿ ಧಿಕ್ಕಾರ ಕೂಗಿ ಪ್ರತಿಭಟಿಸಿದ ಘಟನೆ ಕೂಡ ನಡೆಯಿತು. ಉದ್ಘಾಟನಾ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದ ಸ್ವಾಗತ ಸಮಿತಿ ಅಧ್ಯಕ್ಷ, ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರನ್ನು ಆಕ್ರೋಶಗೊಂಡಿದ್ದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು.

ಪ್ರಧಾನ ವೇದಿಕೆಯ ಹಿಂಭಾಗ ಗಣ್ಯರಿಗಾಗಿ ತೆರೆದಿದ್ದ ಊಟದ ಕೌಂಟರ್‌ನಲ್ಲೂ ಗದ್ದಲ ತುಂಬಿತ್ತು. ಎಷ್ಟೋ ಮಂದಿ ಅತಿಥಿಗಳಿಗೆ ಊಟ ಸಿಗದ ಕಾರಣ ಅವರು ಹಾಗೆಯೇ ಹಿಂತಿರುಗಿದರು. ಕೈತೊಳೆಯಲೂ ನೀರು ಸಿಗದಂತಹ ಪರಿಸ್ಥಿತಿ ಇತ್ತು. ಪುರಷರ ಊಟದ ವಿಭಾಗದಲ್ಲಿ ಸುಮಾರು 50ಕ್ಕೂ ಹೆಚ್ಚು ಕೌಂಟರ್‌ಗಳನ್ನು ತೆರೆಯಲಾಗಿದ್ದರೂ, ಊಟಕ್ಕಾಗಿ ರೊಟ್ಟಿ, ಅನ್ನ, ಬೇಳೆಕಾಳು ಸೇರಿ ಎಲ್ಲಾ ಸಾಮಗ್ರಿಗಳು ಸಾಕಷ್ಟಿದ್ದರೂ ನೀಡುವ ಹಾಗೂ ಪೂರೈಕೆಯಲ್ಲಿ ವ್ಯತ್ಯಯ ಉಂಟಾದ್ದರಿಂದ ಎಲ್ಲೆಡೆ ಊಟಕ್ಕಾಗಿ ಜನರು ಪರದಾಡುವಂತಾಯಿತು.

ಸಿಗದ ತಟ್ಟೆಗಳು: ಊಟದ ತಟ್ಟೆ ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವುಗಳನ್ನು ತೊಳೆದು ಪೂರೈಸುವರೂ ಯಾರೂ ಇಲ್ಲದ್ದರಿಂದ, ಊಟಕ್ಕೆ ಬಂದ ಸಾಹಿತ್ಯಾಭಿಮಾನಿಗಳೇ ಉಂಡು ಎಸೆದಿದ್ದ ಹಾಗೂ ದೂಳಿನಿಂದ ಆವೃತವಾಗಿದ್ದ ತಟ್ಟೆಗಳನ್ನು ತಾವೇ ಎತ್ತಿ ತೊಳೆದುಕೊಂಡು ಊಟ ಮಾಡಬೇಕಾದ ಪರಿಸ್ಥಿತಿ ಉಂಟಾಯಿತು. ಜನರ ನುಗ್ಗಾಟ ಹೆಚ್ಚಾದ ಪರಿಣಾಮ ತಡೆಗೋಡೆಗಳು ಮುರಿದು ಬಿದ್ದ ದೃಶ್ಯ ಊಟ ನಡೆಯುತ್ತಿದ್ದ ಸ್ಥಳದಲ್ಲಿ ಕಂಡು ಬಂತು.

ಕೆಲವರಂತೂ ತಟ್ಟೆಗಳನ್ನು ಹಿಡಿದು ಸುಮ್ಮನೆ ಅತ್ತಿತ್ತ ಓಡಾಡುತ್ತಿದ್ದರು. ಕೆಲವೆಡೆ ಊಟದ ತಟ್ಟೆಗಳು ಹಾರಾಡಿದ ದೃಶ್ಯಗಳು ಕಂಡು ಬಂದವು. ಜನರು ಅದೇ ತಟ್ಟೆಗಳನ್ನು, ಊಟದ ಪಾತ್ರೆಗಳನ್ನು ತುಳಿದುಕೊಂಡೇ ಓಡಾಡುತ್ತಿದ್ದರು. ಸುತ್ತಲೆಲ್ಲೂ ಹೋಟೆಲ್‌ಗಳು ಇಲ್ಲದ ಕಾರಣ ವಯಸ್ಸಾದವರು, ಮಕ್ಕಳು ಮತ್ತು ಮಹಿಳೆಯರು ಊಟವಿಲ್ಲದೇ ಹಿಂತಿರುಗಿದರು.ಊಟ ಬಡಿಸಲು ನೇಮಿಸಲಾಗಿದ್ದ ಸೇವಾದಳದ ಕಾರ್ಯಕರ್ತರು, ಸ್ಕೌಟ್ಸ್ ಮತ್ತು ಗೈಡ್ಸ್‌ನ ಕಾರ್ಯಕರ್ತರು, ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ಪ್ರಶಿಕ್ಷಣಾರ್ಥಿಗಳು ಊಟಕ್ಕಾಗಿ ಜನತೆ ಪರದಾಡುತ್ತಿರುವುದನ್ನು ಕಂಡು ಸುಮ್ಮನೇ ನಿಲ್ಲಬೇಕಾಯಿತು.

ಧಿಕ್ಕಾರ: `ನಾವು ದೂರದಿಂದ ಬಂದಿದ್ದೇವೆ, ಬೆಳಗ್ಗಿನಿಂದ ತಿನ್ನಲು ತಿಂಡಿ ಕೂಡಾ ಸಿಕ್ಕಿಲ್ಲ. ಈಗ ಊಟಕ್ಕಾಗಿ ಬಂದರೆ ಈಗಲೂ ತಿನ್ನಲು ಏನೂ ಸಿಗುತ್ತಿಲ್ಲ. ರೂಪಾಯಿಗೆ ಒಂದು ಲೋಟದಂತೆ ಖರೀದಿಸಿ ನೀರು ಕುಡಿಯಬೇಕಾಗಿದೆ. ಈ ಸಮ್ಮೇಳನ ಅವ್ಯವಸ್ಥೆಯ ಆಗರ' ಎಂದು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದಿಂದ ಬಂದಿದ್ದ ಜಿ.ಆರ್. ಓಂಕಾರಯ್ಯ ಸಂಘಟಕರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಕೊಪ್ಪಳದಿಂದ ಬಂದಿದ್ದ ಅಂದಾನಪ್ಪ `ಈ ಸಮ್ಮೇಳನಕ್ಕಿಂತ ಗಂಗಾವತಿಯಲ್ಲಿ ನಡೆದ ಸಮ್ಮೇಳನ ಎಷ್ಟೋ ಪಾಲು ಚೆನ್ನಾಗಿತ್ತು. ನಾವಿಲ್ಲಿ ಊಟ ಸಿಗದೇ ನೀರು ಕುಡಿದು ಹೊಟ್ಟೆ ತುಂಬಿಸಬೇಕಾಗಿದೆ. ಈ ಸಮ್ಮೇಳನದಲ್ಲಿ ಕುಡಿಯುವ ನೀರಿನ ಕೊರತೆ ಇದೆ' ಎಂದರು.

ಕೆಲವೆಡೆ ಇದೇ ಗದ್ದಲವನ್ನೇ ಸದುಪಯೋಗಪಡಿಸಿಕೊಂಡು ಕಿಸೆಗಳ್ಳರು ಹಲವು ಜನರ ಪಿಕ್ ಪಾಕೆಟ್ ಮಾಡಿದ್ದಾರೆಂದು ಅಲ್ಲಿದ್ದ ನಾನಾ ಜನತೆ ಆಕ್ರೋಶ ವ್ಯಕ್ತಪಡಿಸಿದರು.  ನಾನಾ ಕಡೆ ಹತ್ತಾರು ಜನ ಸೇರಿಕೊಂಡು ಸಂಘಟಕರ ವಿರುದ್ಧ ಘೋಷಣೆ ಕೂಗುತ್ತಿದ್ದು ಹಲವೆಡೆ ಕಂಡು ಬಂತು. ಇಷ್ಟಾದರೂ ಊಟದ ಕಡೆ ಯಾವುದೇ ಸಂಘಟಕರು ಸುಳಿಯದೇ ಊಟದ ವ್ಯವಸ್ಥೆಯನ್ನು ಸರಿಪಡಿಸಲು ಪ್ರಯತ್ನಿಸಲಿಲ್ಲ. ಒಟ್ಟಿನಲ್ಲಿ ಊಟದ ವಿಚಾರದಲ್ಲಿ ತೀವ್ರ ಗೊಂದಲ ಮೂಡಿ, ಸಿಕ್ಕಿದ್ದೇ, ಸಿಕ್ಕಷ್ಟೇ ಶಿವ ಎಂದುಕೊಂಡು ಕೆಲವರು ತಿಂದು ನಡೆದರೆ, ಹಲವರು ಊಟ ಮಾಡಲಾಗದೇ ವಾಪಸಾಗಿ ನೀರು ಕುಡಿದು ಪುಸ್ತಕ ಮಳಿಗೆಗಳತ್ತ ಹೆಜ್ಜೆ ಹಾಕಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT