ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಬಾಂಗ್ಲಾದೇಶ ತೊರೆದ ಬಳಿಕವೂ ಢಾಕಾ, ಇತರ ನಗರಗಳಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ.
ಶೇಖ್ ಹಸೀನಾ ನೇತೃತ್ವದ ಪಕ್ಷ ಅವಾಮಿ ಲೀಗ್‌ನ ಮುಖಂಡರೊಬ್ಬರ ಒಡೆತನದ ಐಷಾರಾಮಿ ಹೋಟೆಲ್‌ಗೆ ನುಗ್ಗಿದ ಉದ್ರಿಕ್ತರ ಗುಂಪೊಂದು, ಇಂಡೊನೇಷ್ಯಾ ಪ್ರಜೆ ಸೇರಿದಂತೆ ಕನಿಷ್ಠ 24 ಜನರನ್ನು ಸಜೀವ ದಹನ ಮಾಡಿದೆ ಎಂದು ಮೂಲಗಳು ಮಂಗಳವಾರ ಹೇಳಿವೆ. ಅವಾಮಿ ಲೀಗ್ ಪಕ್ಷದ ಜೋಷರ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಾಹಿನ್ ಚಕ್ಲಾದರ್ ಮಾಲೀಕತ್ವದ ‘ಜಬೀರ್ ಇಂಟರ್
ನ್ಯಾಷನಲ್ ಹೋಟೆಲ್’ಗೆ ಸೋಮವಾರ ತಡರಾತ್ರಿ ನುಗ್ಗಿದ್ದ ಗುಂಪು, ಹೋಟೆಲ್‌ಗೆ ಬೆಂಕಿ ಹಚ್ಚಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಸರ್ಕಾರದ ವಿರುದ್ಧದ ಪ್ರತಿಭಟನೆ ತೀವ್ರಗೊಂಡಿದ್ದರಿಂದ ಶೇಖ್ ಹಸೀನಾ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ದೇಶ ತೊರೆದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಸೋಮವಾರ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.
ರಾಜಧಾನಿ ಢಾಕಾದಲ್ಲಿ ಹಿಂಸಾಚಾರ ಮತ್ತು ದಾಳಿಯಿಂದಾಗಿ 119 ಮಂದಿ ಮೃತಪಟ್ಟಿದ್ದರೆ, ದೇಶದ ಇತರ ಭಾಗಗಳಲ್ಲಿ ಸಂಭವಿಸಿದ ಘರ್ಷಣೆಗಳಲ್ಲಿ 109 ಮಂದಿ ಮೃತಪಟ್ಟಿದ್ದಾರೆ.
ಉದ್ಯೋಗದಲ್ಲಿ ಮೀಸಲಾತಿ ನೀತಿ ವಿರೋಧಿಸಿ ಜುಲೈ ಮೊದಲ ವಾರ ಪ್ರತಿಭಟನೆ ಆರಂಭಗೊಂಡಿತು. ಅಂದಿನಿಂದ ಸೋಮವಾರದವರೆಗಿನ 21 ದಿನಗಳಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 440ಕ್ಕೆ ಏರಿದಂತಾಗಿದೆ’ ಎಂದು ಮಾಧ್ಯಮಗಳು ವರದಿ ಮಾಡಿವೆ.
ವಿವಿಧ ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಮಧ್ಯಂತರ ಸರ್ಕಾರದಲ್ಲಿ ಯಾರೆಲ್ಲ ಇರಬೇಕೆಂಬುದನ್ನು ಅಂತಿಮಗೊಳಿಸಲಾಗುವುದು ಎಂದು ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
ಯೂನಸ್ ಅವರು ಸದ್ಯ ದೇಶದಿಂದ ಹೊರಗಿದ್ದಾರೆ. ಆದರೆ, ಶೇಖ್ ಹಸೀನಾ ಅವರ ಆಡಳಿತದ ಪದಚ್ಯುತಿಯನ್ನು ಯೂನಸ್ ಸ್ವಾಗತಿಸಿದ್ದಾರೆ. ದೇಶದಲ್ಲಿ ಈಗ ಆಗಿರುವ ಬೆಳವಣಿಗೆಯನ್ನು ಅವರು ದೇಶದ ‘ಎರಡನೇ ವಿಮೋಚನೆ’ ಎಂದು ಬಣ್ಣಿಸಿದರು.
ಯೂನಸ್ ಅವರನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥರನ್ನಾಗಿ ಮಾಡಬೇಕು ಎಂದು ‘ತಾರತಮ್ಯ ವಿರೋಧಿ ವಿದ್ಯಾರ್ಥಿಗಳ ಚಳವಳಿ’ ಸಂಘಟನೆ ಒತ್ತಾಯಿಸಿದಾಗ, ಯೂನಸ್ ಅದಕ್ಕೆ ಸಮ್ಮತಿಸಿದರು.
‘ಪ್ರತಿಭಟನೆ ನಡೆಸುತ್ತಿರುವವರು ನನ್ನಲ್ಲಿ ಇಟ್ಟಿರುವ ನಂಬಿಕೆ ನನಗೆ ಗೌರವ ತರುವ ವಿಚಾರ. ಮಧ್ಯಂತರ ಸರ್ಕಾರ ಆರಂಭ ಮಾತ್ರ. ಮುಕ್ತ ಚುನಾವಣೆಗಳಿಂದ ಮಾತ್ರ ಶಾಶ್ವತ ಶಾಂತಿ ನೆಲೆಸಲು ಸಾಧ್ಯ. ಚುನಾವಣೆಗಳಿಲ್ಲದೇ ಬದಲಾವಣೆ ಸಾಧ್ಯವಿಲ್ಲ’ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.