ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸೂದ್‌ಗೆ ನಿಷೇಧ: ಚೀನಾ ಮತ್ತೆ ವಿರೋಧ

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ: ಕಗ್ಗಂಟಾಗಿಯೇ ಉಳಿಯುವ ಸಾಧ್ಯತೆ
Last Updated 13 ಮಾರ್ಚ್ 2019, 19:58 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ/ಬೀಜಿಂಗ್‌: ಜೈಷ್‌–ಎ-ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿ ಶೀಘ್ರ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಆದರೆ, ಈ ವಿಷಯದಲ್ಲಿ ಚೀನಾ ಯಾವ ರೀತಿ ನಿರ್ಧಾರ ಕೈಗೊಳ್ಳಲಿದೆ ಎನ್ನುವುದು ಮಹತ್ವ ಪಡೆದಿದೆ. 2009ರಿಂದ ಚೀನಾ ಮೂರು ಬಾರಿ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಾರಿಯೂ ಇದೇ ನಿಲುವು ವ್ಯಕ್ತಪಡಿಸಿದೆ.

ವಿಶ್ವಸಂಸ್ಥೆಯಲ್ಲಿ ಕಾಯಂ ಸದಸ್ಯ ರಾಷ್ಟ್ರವಾಗಿರುವ ಚೀನಾ ತನ್ನ ಪರಮಾಧಿಕಾರ ಬಳಸಿ ಇದಕ್ಕೆ ತಡೆವೊಡ್ಡುವ ಇಂಗಿತ ವ್ಯಕ್ತಪಡಿಸಿದೆ.

'ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಅದರ ಅಂಗಸಂಸ್ಥೆಗಳು ಕಠಿಣವಾದ ನಿಯಮಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಭಯೋತ್ಪಾದನೆ ಸಂಸ್ಥೆಗಳು ಮತ್ತು ವ್ಯಕ್ತಿಗಳ ಕುರಿತು ಚೀನಾ ಈಗಾಗಲೇ ತನ್ನ ನಿಲವು ವ್ಯಕ್ತಪಡಿಸಿದೆ. ಚೀನಾ ಜವಾಬ್ದಾರಿಯಿಂದ ಚರ್ಚೆಯಲ್ಲಿ ಪಾಲ್ಗೊಳ್ಳಲಿದೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಲು ಕಾಂಗ್ಸ್‌ ಹೇಳಿದ್ದಾರೆ.

ಚೀನಾದ ವಿದೇಶಾಂಗ ಇಲಾಖೆಯ ಉಪಸಚಿವ ಕಾಂಗ್ ಝುವಾನ್ಯು ಅವರು ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರಲ್ಲದೇ, ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಮತ್ತು ಪಾಕಿಸ್ತಾನದ ಇತರ ಹಿರಿಯ ಅಧಿಕಾರಿಗಳನ್ನು ಸಹ ಭೇಟಿ ಮಾಡಿದ್ದರು.

ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಪ್ರಸ್ತಾವವನ್ನು ಫ್ರಾನ್ಸ್‌, ಬ್ರಿಟನ್‌ ಮತ್ತು ಅಮೆರಿಕ ಫೆಬ್ರುವರಿ 27ರಂದು ಮಂಡಿಸಿದ್ದವು.

ಮಂಡಳಿಯ ಅಲ್‌ಖೈದಾ ನಿರ್ಬಂಧ ಸಮಿತಿ ಅಡಿಯಲ್ಲಿ ಈ ಪ್ರಸ್ತಾವ ಮಂಡಿಸಲಾಗಿದೆ. ಸಮಿತಿಯು ಒಮ್ಮತದಿಂದ ನಿರ್ಧಾರ ಕೈಗೊಳ್ಳಲಿದೆ.

ಒಂದು ವೇಳೆ, ಸಮಿತಿಯು ಒಮ್ಮತದ ನಿರ್ಧಾರ ಕೈಗೊಂಡು ಅಜರ್‌ಗೆ ನಿಷೇಧವಿಸಿದರೆ ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಜತೆಗೆ, ಪ್ರಯಾಣಕ್ಕೆ ನಿಷೇಧ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಲು ನಿರ್ಬಂಧವಿದೆ. ಎಲ್ಲ ದೇಶಗಳಿಗೂ ಈ ನಿಷೇಧವನ್ನು ಪಾಲಿಸಬೇಕಾಗಬೇಕಾಗುತ್ತದೆ.

ಪುಲ್ವಾಮಾ ದಾಳಿ ಬಳಿಕ ಈ ವಿಷಯದ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ರಾಷ್ಟ್ರಗಳು ಸೇರಿದಂತೆ ಒಟ್ಟು 25 ಸದಸ್ಯ ರಾಷ್ಟ್ರಗಳ ಜತೆ ಭಾರತ ಮಾತುಕತೆ ನಡೆಸಿದೆ. ಪಾಕಿಸ್ತಾನವು ಭಯೋತ್ಪಾದನೆಯು ತನ್ನ ನೀತಿಯನ್ನಾಗಿ ಮಾಡಿಕೊಂಡಿದೆ ಎಂದು ಆರೋಪಿಸಿ ಈ ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ. ಜತೆಗೆ, ಪುಲ್ವಾಮಾ ದಾಳಿಯಲ್ಲಿ ಜೈಷ್‌–ಎ–ಮೊಹಮ್ಮದ್‌ ಸಂಘಟನೆ ಕೈವಾಡ ಇರುವ ಬಗ್ಗೆ ದಾಖಲೆಗಳನ್ನು ಪಾಕಿಸ್ತಾನಕ್ಕೂ ನೀಡಿತ್ತು.

ಅಮೆರಿಕ ಬೆಂಬಲ
ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ವಿಶ್ವಸಂಸ್ಥೆ ಘೋಷಿಸಲು ಎಲ್ಲ ಮಾನದಂಡಗಳಿವೆ ಎಂದು ಅಮೆರಿಕ ಹೇಳಿದೆ

ಚೀನಾ ವಿರೋಧ ಮಾಡುವುದು ಸಲ್ಲದು. ಒಂದು ವೇಳೆ, ವಿರೋಧ ಮಾಡಿದರೆ, ಪ್ರಾದೇಶಿಕ ಸ್ಥಿರತೆ ಮತ್ತು ಶಾಂತಿ ಕಾಪಾಡುವಲ್ಲಿ ಚೀನಾ ಮತ್ತು ಅಮೆರಿಕದ ಹಿತಾಸಕ್ತಿಗೂ ವಿರುದ್ಧವಾಗಲಿದೆ ಎಂದು ವಿದೇಶಾಂಗ ಸಚಿವಾಲಯದ ಉಪ ವಕ್ತಾರ ರಾಬರ್ಡ್‌ ಪಲ್ಲಾಡಿನೊ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT