ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
Bangla Unrest: ಹಸೀನಾ ವಿರುದ್ಧ ಸಾವನ್ನೂ ಲೆಕ್ಕಿಸದ ವಿದ್ಯಾರ್ಥಿಗಳ ಆಕ್ರೋಶ ಏಕೆ?
Bangla Unrest: ಹಸೀನಾ ವಿರುದ್ಧ ಸಾವನ್ನೂ ಲೆಕ್ಕಿಸದ ವಿದ್ಯಾರ್ಥಿಗಳ ಆಕ್ರೋಶ ಏಕೆ?
Published 5 ಆಗಸ್ಟ್ 2024, 11:31 IST
Last Updated 5 ಆಗಸ್ಟ್ 2024, 11:31 IST
ಅಕ್ಷರ ಗಾತ್ರ
ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಲ್ಲಿ 106 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಢಾಕಾದಲ್ಲಿರುವ ಪ್ರಧಾನಿ ತಂಗುವ ಅರಮನೆಗೆ ನುಗ್ಗಿದ್ದಾರೆ. ಈ ಆಕ್ರೋಶ ಎದುರಿಸಲಾಗದೆ ಪ್ರಧಾನಿ ಶೇಖ್ ಹಸೀನಾ  ರಾಜೀನಾಮೆ ಸಲ್ಲಿಸಿದ್ದು, ಸೇನಾ ಹೆಲಿಕಾಪ್ಟರ್‌ನಲ್ಲಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಹಾಗಿದ್ದರೆ ಬಾಂಗ್ಲಾದಲ್ಲಿ ನಡೆದದ್ದು ಏನು...?

ಪ್ರಮುಖ ವಿರೋಧ ಪಕ್ಷವಾದ ಬಿಎನ್‌ಪಿ ಮತ್ತು ಅದರ ಮಿತ್ರ ಪಕ್ಷಗಳ ಚುನಾವಣಾ ಬಹಿಷ್ಕಾರದ ನಡುವೆಯೂ ಬಾಂಗ್ಲಾದೇಶದಲ್ಲಿ ಕಳೆದ ಜನವರಿಯಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವಾಮಿ ಲೀಗ್ ಪಕ್ಷವು ಅಭೂತಪೂರ್ವ ಬಹುಮತವನ್ನು ಗಳಿಸಿತು. ಇದರೊಂದಿಗೆ ಶೇಖ್‌ ಹಸೀನಾ ಅವರು ಸತತ ನಾಲ್ಕನೇ ಬಾರಿಗೆ ಪ್ರಧಾನಿ ಪಟ್ಟಕ್ಕೇರಿದ್ದರು.

ಸಂಸತ್‌ನ ಒಟ್ಟು 300 ಸ್ಥಾನಗಳ ಪೈಕಿ 299 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಪೈಕಿ ಹಸೀನಾ ನೇತೃತ್ವದ ಪಕ್ಷವು 223 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಾಂಗ್ಲಾದೇಶ್ ನ್ಯಾಷನಲಿಸ್ಟ್‌ ಪಕ್ಷವು (ಬಿಎನ್‌ಪಿ) ಕೇವಲ 11 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೀವ್ರ ಹಿನ್ನಡೆ ಕಂಡಿತ್ತು. ಬಾಂಗ್ಲಾದೇಶ ಕಲ್ಯಾಣ್‌ ಪಕ್ಷ, ಜಾತಿಯಾ ಸಮಾಜತಾಂತ್ರಿಕ್‌ ದಳ ಮತ್ತು ದಿ ವರ್ಕರ್ಸ್‌ ಪಕ್ಷಗಳು ತಲಾ ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದರೆ, ಪಕ್ಷೇತರ ಅಭ್ಯರ್ಥಿಗಳು 62 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದರು.  

ಗೋಪಾಲ್‌ಗಂಜ್‌ –2 ಕ್ಷೇತ್ರದಿಂದ ಸ್ಪರ್ಧಿಸಿದ್ದ ಹಸೀನಾ ಅವರು ಪ್ರಚಂಡ ಗೆಲುವು ಸಾಧಿಸಿದ್ದರು. ಈ ಮೂಲಕ ಸತತ ಎಂಟನೇ ಬಾರಿಗೆ ಸಂಸದೆಯಾಗಿ ಅವರು ಆಯ್ಕೆಯಾದರು. ಈ ಚುನಾವಣೆಯನ್ನು ಮಾಜಿ ಪ್ರಧಾನಿ ಖಾಲೇದಾ ಜಿಯಾ ಅವರು ನಕಲಿ ಎಂದಿದ್ದರು. ಜತೆಗೆ ಸರ್ಕಾರಿ ವಿರೋಧಿ ಚಳವಳಿಯನ್ನು ಮುಂದುವರಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಬಾಂಗ್ಲಾದೇಶದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಧರಣಿ

ಬಾಂಗ್ಲಾದೇಶದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಧರಣಿ

ರಾಯಿಟರ್ಸ್ ಚಿತ್ರ

ನಾಗರಿಕ ಸೇವೆಯಲ್ಲಿ ಕೋಟಾ ರದ್ದತಿಗೆ ಬಿಗಿ ಪಟ್ಟು

ನಾಗರಿಕ ಸೇವೆಗಳಲ್ಲಿ ಸದ್ಯ ಇರುವ ಮೀಸಲಾತಿಯನ್ನು ಪರಿಷ್ಕರಿಸುವಂತೆ ಬಾಂಗ್ಲಾದೇಶದ ಯುವಕರು ಜುಲೈನಲ್ಲಿ ಬೀದಿಗಿಳಿದಿದ್ದರು. ಸದ್ಯ ಇರುವ ಮೀಸಲಾತಿ ಪದ್ಧತಿಯು ಪ್ರಧಾನಿ ಶೇಖ್ ಹಸೀನಾ ಅವರ ನೇತೃತ್ವದ ಅವಾಮಿ ಲೀಗ್ ಪಕ್ಷದ ಬೆಂಬಲಿಗರಿಗೆ ಹೆಚ್ಚು ಅನುಕೂಲವಾಗುವಂತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಈ ಒಂದು ಆರೋಪದಿಂದ ಆರಂಭವಾದ ವಿದ್ಯಾರ್ಥಿಗಳ ಚಳವಳಿಯಲ್ಲಿ ಶೇಖ್ ಹಸೀನಾ ಸರ್ಕಾರ ಅರಾಜಕತೆ ಸೃಷ್ಟಿಸುವ ಹಾಗೂ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದವು. ಪ್ರತಿಭಟನೆ ತೀವ್ರಗೊಳ್ಳುತ್ತಲೇ ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯಗಳನ್ನು ಮುಚ್ಚಲಾಯಿತು. ಪ್ರತಿಭಟನೆ ತಹಬದಿಗೆ ತರುವ ಎಲ್ಲಾ ಯತ್ನಗಳೂ ವಿಫಲಗೊಂಡವು.

ನೇಮಕಾತಿಯಲ್ಲಿನ ಕೋಟಾಗಳನ್ನು ಪರಿಷ್ಕರಿಸುವ ಸುಪ್ರೀಂ ಕೋರ್ಟ್‌ನ ತೀರ್ಪು ಕೂಡಾ ಪ್ರತಿಭಟನಾಕಾರರನ್ನು ತಣಿಸಲಿಲ್ಲ. ಬದಲಾಗಿ, ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟಗಾರ ಕುಟುಂಬಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನೂ ಒಳಗೊಂಡು ಎಲ್ಲಾ ರೀತಿಯ ಕೋಟಾಗಳನ್ನೂ ರದ್ದುಪಡಿಸುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಹೀಗಾಗಿ ಹೋರಾಟದ ಸ್ವರೂಪ ಇನ್ನಷ್ಟು ವಿಸ್ತಾರಗೊಂಡು, ದೇಶವನ್ನೇ ವ್ಯಾಪಿಸಿತು.

ಪ್ರತಿಭಟನೆಯನ್ನು ಹತ್ತಿಕ್ಕುವಲ್ಲಿ ಸರ್ಕಾರ ವಿಫಲಗೊಂಡಿದೆ ಎಂದು ಹಾಗೂ ಸೇನಾ ನಿಯೋಜನೆಯನ್ನು ಹಿಂಪಡೆಯುವಂತೆ ಬಾಂಗ್ಲಾ ಸೇನಾದ ಮಾಜಿ ಮುಖ್ಯಸ್ಥ ಇಕ್ಬಾಲ್ ಕರೀಂ ಭುಯ್ಯಾನ್ ಅವರು ಒತ್ತಾಯಿಸಿದ ಬೆನ್ನಲ್ಲೇ, ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು. ಇದಕ್ಕೆ ಪ್ರಸ್ತುತ ಸೇನಾ ಮುಖ್ಯಸ್ಥರ ಬೆಂಬಲ ಇತ್ತು ಎಂಬ ಕಾರಣಕ್ಕೂ ಅದು ಇನ್ನಷ್ಟು ತೀವ್ರವಾಗಿ ವ್ಯಾಪಿಸಿತು.

ಬಾಂಗ್ಲಾದೇಶದಲ್ಲಿನ ಅಶಾಂತಿ ಹಿಂದೆ ಪಾಕಿಸ್ತಾನದ ಐಎಸ್‌ಐ ಕೈವಾಡ?

ಬಾಂಗ್ಲಾದೇಶವು ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛತ್ರ ಶಿಬಿರವನ್ನು ಗುರುವಾರ ನಿಷೇಧಿಸಿತು. 

ಮೂಲಭೂತವಾದಿ ಪಕ್ಷವು ಸಾರ್ವಜನಿಕ ಭದ್ರತೆಗೆ ಒಡ್ಡಿರುವ ಬೆದರಿಕೆಯನ್ನು ಉಲ್ಲೇಖಿಸಿ, ಗೃಹ ಸಚಿವಾಲಯದ ಸಾರ್ವಜನಿಕ ಭದ್ರತಾ ವಿಭಾಗವು ಗುರುವಾರ ಇಸ್ಲಾಮಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ತನ್ನ ಅಧಿಸೂಚನೆಯಲ್ಲಿ ದೃಢಪಡಿಸಿತು.

ಪ್ರಧಾನಿ ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಿ, ವಿರೋಧಪಕ್ಷವಾದ ಬಿಎನ್‌ಪಿ ಅಧಿಕಾರಕ್ಕೆ ತರುವಲ್ಲಿ ಪಾಕಿಸ್ತಾನದ ಐಎಸ್‌ಐ ಹಾಗೂ ಸೇನೆ ನಿರಂತರ ಪ್ರಯತ್ನ ನಡೆಸಿದ್ದವು ಎಂಬುದೂ ವರದಿಯಾಗಿವೆ. ಇದಕ್ಕಾಗಿ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಪ್ರಚೋದಿಸಿದ್ದವು ಎಂದೂ ಹೇಳಲಾಗಿದೆ.

ಬಾಂಗ್ಲಾದೇಶದಲ್ಲಿ ಈವರೆಗಿನ ಪ್ರಮುಖ ಘಟನಾವಳಿಗಳು

ಜುಲೈ 1: ಕೋಟಾ ವ್ಯವಸ್ಥೆಯನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ರಸ್ತೆ, ರೈಲು ಮಾರ್ಗಗಳನ್ನು ತಡೆಯಲು ವಿದ್ಯಾರ್ಥಿಗಳು ಮುಂದಾದರು. ಜನವರಿಯಲ್ಲಿ ನಡೆದ ಚುನಾವಣೆಯಲ್ಲಿ ಐದನೇ ಬಾರಿಗೆ ಶೇಖ್ ಹಸೀನಾ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. ಆದರೆ ವಿದ್ಯಾರ್ಥಿಗಳ ಈ ಹೋರಾಟವನ್ನು ಅವರು, ‘ಸಮಯ ವ್ಯರ್ಥ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದರು.

ಜುಲೈ 16: ಹೀಗೆ ಅಲ್ಲಲ್ಲಿ ಶುರುವಾದ ಈ ಕೋಟಾ ವಿರೋಧಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಸರ್ಕಾರದ ಪರ ಬೆಂಬಲಿಗರು ಹಾಗೂ ವಿದ್ಯಾರ್ಥಿಗಳ ನಡುವೆ ನೇರ ಸಂಘರ್ಷಕ್ಕೆ ಕಾರಣವಾಯಿತು. ಇದರಿಂದಾಗಿ ಆರು ಜನ ಪ್ರಾಣ ಕಳೆದುಕೊಂಡರು. ನಂತರ ದೇಶವ್ಯಾಪಿ ವಿಶ್ವವಿದ್ಯಾಲಯಗಳು, ಶಾಲಾ ಕಾಲೇಜುಗಳನ್ನು ಮುಚ್ಚಲಾಯಿತು.

ಜುಲೈ 18: ಶಾಂತಿ ಕಾಪಾಡುವಂತೆ ಶೇಖ್ ಹಸೀನಾ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ ವಿದ್ಯಾರ್ಥಿ ಸಂಘಟನೆಗಳು, ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಒತ್ತಾಯಿಸಿ ಹೋರಾಟವನ್ನು ತೀವ್ರಗೊಳಿಸಿದವು. ‘ಸರ್ವಾಧಿಕಾರಿಯನ್ನು ಕೆಳಗಿಳಿಸಿ’ ಎಂಬ ಘೋಷಣೆಯೊಂದಿಗೆ ತೀವ್ರಗೊಂಡ ಚಳವಳಿಯಲ್ಲಿ, ಸರ್ಕಾರಿ ಕಚೇರಿಗಳು, ಬಾಂಗ್ಲಾದೇಶ ಟೆಲಿವಿಷನ್‌ ಕಚೇರಿಯನ್ನು ಪ್ರತಿಭಟನಾಕಾರರು ಸುಟ್ಟು ಹಾಕಿದರು. ಹೋರಾಟ ಹತ್ತಿಕ್ಕಲು ದೇಶದಲ್ಲಿ ಇಂಟರ್ನೆಟ್‌ಗೆ ನಿಷೇಧ ಹೇರಲಾಯಿತು. 32 ಜನ ಮೃತಪಟ್ಟು, ನೂರಕ್ಕೂ ಹೆಚ್ಚು ಜನ ಗಾಯಗೊಂಡರು. ದೇಶದಲ್ಲಿ ಕರ್ಫ್ಯೂ ಹೇರಲಾಯಿತು. ಸೇನೆಯನ್ನು ನಿಯೋಜಿಸಲಾಯಿತು.

ಜುಲೈ 21: ಬಾಂಗ್ಲಾದೇಶದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿ, ಕೋಟಾಗಳನ್ನು ಪರಿಷ್ಕರಿಸಲು ಆದೇಶಿಸಿತು. ಆದರೆ ಇದನ್ನು ತಿರಸ್ಕರಿಸಿದ ಹೋರಾಟಗಾರರು, ಶೇಖ್ ಹಸೀನಾ ಅವರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಆರೋಪಿಸಿದರು. 1971ರ ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧದಲ್ಲಿ ಮಡಿದವರ ಕುಟುಂಬದವರಿಗೆ ನೀಡುವ ಕೋಟಾವನ್ನೂ ರದ್ದುಪಡಿಸುವ ಬೇಡಿಕೆ ಮುಂದಿಟ್ಟು ಹೋರಾಟ ಮುಂದುವರಿಯಿತು.

ಆಗಸ್ಟ್ 4: ವಿದ್ಯಾರ್ಥಿಗಳು ಹಾಗೂ ಆಡಳಿತಾರೂಢ ಸರ್ಕಾರದ ಬೆಂಬಲಿಗರ ನಡುವೆ ಮತ್ತೊಮ್ಮೆ ಸಂಘರ್ಷ ನಡೆಯಿತು. 100 ಜನ ಪ್ರಾಣ ಕಳೆದುಕೊಂಡರು. ಇದರಲ್ಲಿ 16 ಪೊಲೀಸರೂ ಒಳಗೊಂಡಿದ್ದಾರೆ. ಸೇನೆಯ ಮಾಜಿ ಮುಖ್ಯಸ್ಥ ಇಕ್ಬಾಲ್ ಕರೀಂ ಭುಯಾನ್ ಅವರು ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಹಾಗೂ ಹತ್ಯೆಯನ್ನು ಖಂಡಿಸಿ ಹೇಳಿಕೆ ನೀಡಿದರು. ಸೇನೆಯ ಹಾಲಿ ಮುಖ್ಯಸ್ಥ ವಾಕರ್ ಉಜ್‌ ಝಮಾನ್ ಅವರು, ‘ಸೇನೆಯು ಸದಾ ಜನರ ಪರ ಇರಲಿದೆ’ ಎಂಬ ಹೇಳಿಕೆ ನೀಡಿದರು.

ಆಗಸ್ಟ್ 5: ಪ್ರತಿಭಟನೆ ತೀವ್ರಗೊಂಡು, ಪ್ರಧಾನಿ ಅವರ ಅಧಿಕೃತ ನಿವಾಸವಾದ ಢಾಕಾದಲ್ಲಿರುವ ಅರಮನೆಗೆ ಹೋರಾಟಗಾರರು ನುಗ್ಗಿದರು. ಇದನ್ನು ಅರಿತ ಶೇಖ್ ಹಸೀನಾ ಅವರು ರಾಜೀನಾಮೆ ಸಲ್ಲಿಸಿದರು. ವಿದಾಯ ಭಾಷಣದ ಧ್ವನಿ ಮುದ್ರಣಕ್ಕೂ ಅವಕಾಶ ಸಿಗದೆ ಅವರು ಢಾಕಾ ತೊರೆದರು ಎಂದು ಮೂಲಗಳು ತಿಳಿಸಿವೆ.

ಸದ್ಯ ಮಧ್ಯಂತರ ಸರ್ಕಾರ ರಚನೆಗೆ ರಾಷ್ಟ್ರಪತಿಗೆ ಸೇನೆ ಪ್ರಸ್ತಾವನೆ ಸಲ್ಲಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT