ಸೋಮವಾರ, 3 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾದಲ್ಲಿ ಚುನಾವಣೆ: ಶೇ 40ರಷ್ಟು ಮತದಾನ; ಎಣಿಕೆ ಶುರು, ಅವಾಮಿ ಲೀಗ್ ಮುನ್ನಡೆ

Published 7 ಜನವರಿ 2024, 16:21 IST
Last Updated 7 ಜನವರಿ 2024, 16:21 IST
ಅಕ್ಷರ ಗಾತ್ರ

ಢಾಕಾ: ಚುನಾವಣಾ ಬಹಿಷ್ಕಾರ ಹಾಗೂ ಹಿಂಸಾಚಾರದ ನಡುವೆ ಬಾಂಗ್ಲಾದೇಶದಲ್ಲಿ ಭಾನುವಾರ ಸಾರ್ವತ್ರಿಕ ಚುನಾವಣೆ ನಡೆಯಿತು. ಸಂಜೆಯಿಂದಲೇ ಮತ ಎಣಿಕೆ ಆರಂಭವಾಗಿದೆ. ಸೋಮವಾರ ನಸುಕಿನ ವೇಳೆಗೆ ಫಲಿತಾಂಶ ಘೋಷಣೆಯಾಗುವ ನಿರೀಕ್ಷೆ ಇದೆ. ಪ್ರಧಾನಿ ಶೇಖ್ ಹಸೀನಾ ಅವರು ದಾಖಲೆಯ ನಾಲ್ಕನೇ ಬಾರಿಗೆ ಅಧಿಕಾರಕ್ಕೇರುವ ಸಾಧ್ಯತೆ ಹೆಚ್ಚಿವೆ.

ಪ್ರಮುಖ ವಿರೋಧ ಪಕ್ಷ ಬಿಎನ್‌ಪಿ ಮತ್ತು ಅದರ ಮಿತ್ರಪಕ್ಷಗಳು ಕರೆ ನೀಡಿದ್ದ 48 ತಾಸುಗಳ ರಾಷ್ಟ್ರವ್ಯಾಪಿ ಮುಷ್ಕರದ ನಡುವೆ  ಅಂದಾಜು ಶೇ 40ರಷ್ಟು ಮತದಾನ ಆಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಕಾಝಿ ಹಬೀಬುಲ್‌ ಅವಾಲ್‌ ತಿಳಿಸಿದ್ದಾರೆ.

ಹಿಂಸಾಚಾರದ ಕೆಲವು ಘಟನೆಗಳನ್ನು ಹೊರತುಪಡಿಸಿ, 300 ಕ್ಷೇತ್ರಗಳ ಪೈಕಿ 299 ಕ್ಷೇತ್ರಗಳಲ್ಲಿ ಮತದಾನವು ಶಾಂತಿಯುತ ನಡೆದಿದೆ. ಅಭ್ಯರ್ಥಿಯೊಬ್ಬರು ಮೃತಪಟ್ಟ ಕಾರಣ ಒಂದು ಕ್ಷೇತ್ರದಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.

ಚುನಾವಣೆಯ ಸಂಭ್ರಮ ಎಲ್ಲೂ ಕಾಣಲಿಲ್ಲ. ಮತಗಟ್ಟೆಗಳ ಮುಂದೆಯೂ ಆಡಳಿತ ಪಕ್ಷದ ಬೆಂಬಲಿಗರು ಮತ್ತು ಚುನಾವಣಾ ಏಜೆಂಟರನ್ನು ಹೊರತುಪಡಿಸಿ ಮತದಾರರು ಹೆಚ್ಚಾಗಿ ಕಾಣಿಸಲಿಲ್ಲ.

ಆಡಳಿತ ರೂಢ ಅವಾಮಿ ಲೀಗ್ ಪಕ್ಷವು ಮುನ್ನಡೆಯಲ್ಲಿರುವುದನ್ನು ಆರಂಭಿಕ ಫಲಿತಾಂಶಗಳು ತೋರಿಸುತ್ತಿವೆ. ಅವಾಮಿ ಲೀಗ್ 10 ಕ್ಷೇತ್ರಗಳಲ್ಲಿ ಜಯಗಳಿಸಿದೆ ಎಂದು ‘ಢಾಕಾ ಟ್ರಿಬ್ಯೂನ್ ಪತ್ರಿಕೆ’ ಅನಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

ಎರಡು ಕಚ್ಚಾ ಬಾಂಬ್‌ ಸ್ಫೋಟ: ಢಾಕಾದ ಹಜಾರಿಬಾಗ್‌ನಲ್ಲಿರುವ ಮತದಾನ ಕೇಂದ್ರದ ಬಳಿ ಎರಡು ಕಚ್ಚಾ ಬಾಂಬ್‌ಗಳು ಸ್ಫೋಟಗೊಂಡಿದ್ದು, ಒಂದು ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ.

ಚಟ್ಟೋಗ್ರಾಮ್-10 ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ಗುಂಡಿನ ದಾಳಿ ನಡೆದಿದೆ. ಇಬ್ಬರು ವ್ಯಕ್ತಿಗಳಿಗೆ ಗುಂಡು ತಗುಲಿದ್ದು, ಇವರನ್ನು ಚಟ್ಟೋಗ್ರಾಮ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮಾಲ್‌ಪುರದ ಶರೀಶಬರಿಯಲ್ಲಿರುವ ಮತಗಟ್ಟೆ ಕೇಂದ್ರದಲ್ಲಿ ಅವಾಮಿ ಲೀಗ್ ಅಭ್ಯರ್ಥಿ ಬೆಂಬಲಿಗರು ಮತ್ತು ಸ್ವತಂತ್ರ ಅಭ್ಯರ್ಥಿಯ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಅವಾಮಿ ಲೀಗ್ ಅಭ್ಯರ್ಥಿ ಅಮೇದುವಾರಿಕೆ ರದ್ದು: ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ ಕಾರಣಕ್ಕೆ ಈಶಾನ್ಯ ಚಟ್ಟೋಗ್ರಾಮ್‌ನಲ್ಲಿ ಆಡಳಿತಾರೂಢ ಅವಾಮಿ ಲೀಗ್ ಅಭ್ಯರ್ಥಿಯ ಉಮೇದುವಾರಿಕೆಯನ್ನು ಮತದಾನದ ಅವಧಿಯ ಕೊನೆಯಲ್ಲಿ ಚುನಾವಣಾ ಆಯೋಗವು ರದ್ದುಗೊಳಿಸಿತು. ಈ ಬೆಳವಣಿಗೆಯಿಂದಾಗಿ ಕ್ಷೇತ್ರದಲ್ಲಿ ಆಡಳಿತ ಪಕ್ಷಕ್ಕೆ ಸೇರಿದ ಇಬ್ಬರು ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದರು. 

ನಾರ್ಸಿಂಗ್ಡಿಯ ಒಂದು ಮತ್ತು ನಾರಾಯಣಗಂಜ್‌ನಲ್ಲಿ ಎರಡು ಕೇಂದ್ರಗಳಲ್ಲಿ ಚುನಾವಣಾ ಅಕ್ರಮದಿಂದಾಗಿ ಮತದಾನ ರದ್ದುಗೊಳಿಸಲಾಗಿದೆ. ನಾರ್ಸಿಂಗ್ಡಿಯಲ್ಲಿ ಚುನಾವಣಾ ಅಕ್ರಮದ ಆರೋಪದ ಮೇಲೆ ಕೈಗಾರಿಕಾ ಸಚಿವ ನೂರುಲ್ ಮಜಿದ್ ಮಹ್ಮದ್ ಹುಮಾಯೂನ್ ಅವರ ಪುತ್ರನನ್ನು ಬಂಧಿಸುವಂತೆ ಚುನಾವಣಾ ಆಯೋಗ ಆದೇಶಿಸಿದೆ ಎಂದು ವರದಿಗಳು ತಿಳಿಸಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT