ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂಜಿಲೆಂಡ್‌ ದಾಳಿ: ಕೋರ್ಟ್‌ನಲ್ಲಿ ಮಾಧ್ಯಮಗಳ ಕಡೆಗೆ ಹುಸಿ ನಗೆ ಬೀರಿದ ಹಂತಕ

ದಾಳಿಯಲ್ಲಿ 5 ಬಂದೂಕು ಬಳಕೆ
Last Updated 16 ಮಾರ್ಚ್ 2019, 6:04 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್‌ನ ಮಸೀದಿಗಳಲ್ಲಿ ಶುಕ್ರವಾರ ಗುಂಡಿನ ದಾಳಿ ನಡೆಸಿದ 28 ವರ್ಷ ವಯಸ್ಸಿನ ಬಂದೂಕುಧಾರಿಗೆಏಪ್ರಿಲ್‌ 5ರ ವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಗುಂಡಿನ ದಾಳಿಯಲ್ಲಿ 49 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆಯ ಪ್ರಮುಖ ಶಂಕಿತ ಆಸ್ಟ್ರೇಲಿಯಾ ಪ್ರಜೆ ಬ್ರೆಂಟನ್‌ ಹಾರಿಸನ್‌ ಟರ‍್ರಂಟ್‌ನನ್ನು ಶನಿವಾರ ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಕೋರ್ಟ್‌ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ. ಏಪ್ರಿಲ್‌ 5ರಂದು ಸೌತ್‌ ಐಲ್ಯಾಂಡ್‌ ಸಿಟಿಯ ಹೈಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ನಡೆಯಲಿದೆ.ಸದ್ಯ ಒಂದು ಕೊಲೆಯದೋಷಾರೋಪ ಮಾತ್ರ ವರಿಸಲಾಗಿದ್ದು, ದಾಳಿಯಲ್ಲಿನಡೆದಿರುವ ಸಾಮೂಹಿಕಹತ್ಯೆಯ ಕುರಿತು ಆರೋಪ ಪಟ್ಟಿಯನ್ನು ಎದುರು ನೋಡಲಾಗುತ್ತಿದೆ.

ವೈಟ್‌ ಪವರ್‌ ಗೆಸ್ಚರ್‌ ತೋರುತ್ತಿರುವ ದಾಳಿಕೋರ
ವೈಟ್‌ ಪವರ್‌ ಗೆಸ್ಚರ್‌ ತೋರುತ್ತಿರುವ ದಾಳಿಕೋರ

ಕೈಯಿಗೆ ಕೋಳ, ಬರಿಗಾಲು ಹಾಗೂ ಕೈದಿಗಳು ತೊಡುವ ಬಿಳಿಯ ಸಮವಸ್ತ್ರ ಧರಿಸಿದ್ದ ದಾಳಿಕೋರ ತುಟಿ ಬಿಚ್ಚಲಿಲ್ಲ. ವಿಚಾರಣೆಗೆ ಕರೆತಂದಿದ್ದ ವೇಳೆ ಮಾಧ್ಯಮಗಳು ಆತನ ಫೋಟೊ ಕ್ಲಿಕ್ಕಿಸಲು ಮುಂದಾದಾಗ ಹುಸಿ ನಗೆಯನ್ನು ಬೀರುತ್ತ ಕ್ಯಾಮೆರಾಗಳಿಗೆ ಪೋಸ್‌ ನೀಡಿದ ಹಾಗೂ ಸೂಪರ್‌ ಎನ್ನುವಂತೆ ವೈಟ್‌ ಪವರ್‌ ಗೆಸ್ಚರ್‌ ತೋರಿರುವುದಾಗಿ ವರದಿಯಾಗಿದೆ.

ಕೋರ್ಟ್‌ನ ವಿಚಾರಣೆ ಸಂದರ್ಭದಲ್ಲಿ ದಾಳಿಕೋರನ ಪೂರ್ಣ ಗಮನ ಪಬ್ಲಿಕ್ ಗ್ಯಾಲರಿಯಲ್ಲಿ ಸೇರಿದ್ದ ಮಾಧ್ಯಮಗಳ ಕಡೆಗಿತ್ತು. ಆತ ಒಂದು ಮಾತನ್ನೂ ಆಡಳಿಲ್ಲ ಹಾಗೂ ಅವನ ಪರವಾಗಿ ಕೋರ್ಟ್‌ ನೇಮಿಸಿದ್ದ ವಕೀಲ ಜಾಮೀನು ಅರ್ಜಿ ಸಲ್ಲಿಸಲಿಲ್ಲ.

ದಾಳಿಯಲ್ಲಿ ಭಾರತೀಯ ಮೂಲದ ಒಂಬತ್ತು ಮಂದಿ ಕಾಣೆಯಾಗಿರುವುದಾಗಿ ನ್ಯೂಜಿಲೆಂಡ್‌ನಲ್ಲಿರುವ ಭಾರತದ ರಾಯಭಾರಿ ಹೇಳಿದ್ದಾರೆ. ಇಬ್ಬರು ಭಾರತೀಯರು ಗುಂಡಿನ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದು, ಮತ್ತೊಬ್ಬರು ಜೀವನ್ಮರಣ ಹೋರಾಟ ನಡೆಸುತ್ತಿರುವುದಾಗಿ ಎಐಎಂಐಎಂ ಮುಖಂಡ ಅಸಾದುದ್ದೀನ್‌ ಓವೈಸಿ ಹೇಳಿದ್ದಾಗಿಎನ್‌ಡಿಟಿವಿ ವರದಿ ಮಾಡಿದೆ.

ದಾಳಿಯನ್ನು 17 ನಿಮಿಷ ನೇರ ಪ್ರಸಾರ ಮಾಡಿದ ಹಂತಕ
ದಾಳಿಯನ್ನು 17 ನಿಮಿಷ ನೇರ ಪ್ರಸಾರ ಮಾಡಿದ ಹಂತಕ

ಪ್ರಧಾನಿ ಜಸಿಂದಾ ಆರ್ಡರ್ನ್, ದಾಳಿಯನ್ನು ಭಯೋತ್ಪಾದನೆ ಎಂದು ಕರೆದಿದ್ದಾರೆ. ಸಾಮೂಹಿಕ ಹತ್ಯೆಯಿಂದ ಬೆಚ್ಚಿರುವ ದೇಶದ ಭದ್ರತಾ ಮಟ್ಟವನ್ನು ಕಠಿಣಗೊಳಿಸಲಾಗಿದೆ.

ದಾಳಿಯ ನಂತರದಲ್ಲಿ ಎಚ್ಚೆತ್ತುಕೊಂಡಿರುವ ಸರ್ಕಾರ, ದೇಶದಲ್ಲಿ ಬಂದೂಕು ಪಡೆಯಲು ಇರುವ ಕಾನೂನು ಬಿಗಿಗೊಳಿಸಿ ಬದಲಾವಣೆ ತರಲು ನಿರ್ಧರಿಸಿದೆ.

ದಾಳಿಕೋರ ಟರ್ರಂಟ್‌ 2017ರ ನವೆಂಬರ್‌ನಲ್ಲಿ ಕ್ಯಾಟಗರಿ ಎಬಂದೂಕು ಪರವಾನಗಿ ಪಡೆದುಕೊಂಡಿದ್ದ ಮತ್ತು ಬಂದೂಕು, ಗುಂಡುಗಳನ್ನು ಖರೀದಿಸಿ ಸಂಗ್ರಹಿಸಿಕೊಂಡಿದ್ದ. ಶುಕ್ರವಾರ ನಡೆಸಿದ ದಾಳಿಯಲ್ಲಿ ಆತ ಐದು ಶಸ್ತ್ರಾಸ್ತ್ರಗಳನ್ನು ಬಳಸಿದ್ದ. ಎರಡು ಸೆಮಿ ಆಟೋಮೆಟಿಕ್‌ ರೈಫಲ್‌ಗಳು, ಎರಡು ಶಾಟ್‌ಗನ್‌ಗಳು ಹಾಗೂ ಲಿವರ್‌ ಆ್ಯಕ್ಷನ್ ಬಂದೂಕಿನೊಂದಿಗೆ ದಾಳಿ ಮಾಡಿರುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT