ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಸ್ರೇಲ್–ಹಮಾಸ್ ಯುದ್ಧ:ಬೆಂಜಮಿನ್‌ ನೆತನ್ಯಾಹು ತಪ್ಪು ಮಾಡುತ್ತಿದ್ದಾರೆ ಎಂದ ಬೈಡನ್

ಅಮೆರಿಕ ಅಧ್ಯಕ್ಷ ಜೋ ಬೈಡನ್, ಗಾಜಾಕ್ಕೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.
Published 10 ಏಪ್ರಿಲ್ 2024, 11:24 IST
Last Updated 10 ಏಪ್ರಿಲ್ 2024, 11:24 IST
ಅಕ್ಷರ ಗಾತ್ರ

ಟೆಲ್‌ ಅವೀವ್(ಇಸ್ರೇಲ್): ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧವನ್ನು ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಗಾಜಾಕ್ಕೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಿದ್ದಾರೆ.

‘ಯುನಿವಿಷನ್’ ಎಂಬ ಸ್ಪ್ಯಾನಿಷ್‌ ಭಾಷೆಯ ಸುದ್ದಿವಾಹಿನಿವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬೈಡನ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ನೆತನ್ಯಾಹು ತಪ್ಪು ಮಾಡುತ್ತಿದ್ದಾರೆ. ಹಮಾಸ್‌ ಬಂಡುಕೋರರ ವಿರುದ್ಧದ ಈ ಯುದ್ಧದಲ್ಲಿ ಅವರು ಅನುಸರಿಸುತ್ತಿರುವ ಮಾರ್ಗದ ಬಗ್ಗೆ ನನ್ನ ಸಹಮತ ಇಲ್ಲ’ ಎಂದು ಹೇಳಿದ್ದಾರೆ.

ಗಾಜಾ ಪಟ್ಟಿಯ ರಫಾ ನಗರದಲ್ಲಿರುವ ವರ್ಲ್ಡ್ ಸೆಂಟ್ರಲ್‌ ಕಿಚನ್‌(ಡಬ್ಲ್ಯುಸಿಕೆ) ಎಂಬ ಸ್ವಯಂ ಸೇವಾ ಸಂಸ್ಥೆ ಮೇಲೆ ಇಸ್ರೇಲ್‌ ಇತ್ತೀಚೆಗೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹಲವರು ಮೃತಪಟ್ಟಿದ್ದರು. ಮೃತರ ಪೈಕಿ ಬಹುತೇಕರು ವಿದೇಶಿಯರಿದ್ದರು. ಈ ದಾಳಿ ನಡೆದ ಎರಡು ದಿನಗಳ ನಂತರ ಅವರು ಈ ಸಂದರ್ಶನ ನೀಡಿದ್ದಾರೆ.

ಬೈಡನ್‌ ಅವರ ಈ ಹೇಳಿಕೆ, ಅಮೆರಿಕ ಮತ್ತು ಇಸ್ರೇಲ್‌ ನಡುವಿನ ಸಂಬಂಧದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿರುವುದನ್ನು ತೋರಿಸುತ್ತದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಅಕ್ಟೋಬರ್‌ 7ರಂದು ಹಮಾಸ್‌ ಬಂಡುಕೋರರು ಇಸ್ರೇಲ್‌ ಮೇಲೆ ದಾಳಿ ನಡೆಸಿದ ನಂತರ ಯುದ್ಧ ಶುರುವಾದಾಗ, ಬೈಡನ್‌ ಅವರು ಇಸ್ರೇಲ್‌ಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಆದರೆ, ಈಗ ಅವರು ಇಸ್ರೇಲ್‌ ನಡೆ ಕುರಿತು ಅಪಸ್ವರ ಎತ್ತಿದ್ದಾರೆ. 

‘ಕದನ ವಿರಾಮಕ್ಕೆ ಇಸ್ರೇಲ್‌ ಒಪ್ಪಿಕೊಳ್ಳಬೇಕು. ಮುಂದಿನ 6–8 ವಾರಗಳಿಗೆ ಸಾಕಾಗುವಷ್ಟು ಪರಿಹಾರ ಸಾಮಗ್ರಿಗಳು ಗಾಜಾಕ್ಕೆ ತಲಪುವಂತೆ ನೋಡಿಕೊಳ್ಳಬೇಕು ಹಾಗೂ ನೆರೆಯ ರಾಷ್ಟ್ರಗಳು ಸಹ ನೆರವಿನ ಹಸ್ತ ಚಾಚಲು ಅವಕಾಶ ಮಾಡಿಕೊಡಬೇಕು’ ಎಂದೂ ಬೈಡನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT