ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಅಧಿಕಾರಿಗಳ ಸಂವಹನ ಆಧರಿಸಿ ಕೆನಡಾ ಆರೋಪ: ವರದಿ

'ಫೈವ್ ಐಸ್‌ ಇಂಟೆಲಿಜೆನ್ಸ್ ನೆಟ್ ವರ್ಕ್ 'ನ ಸಂಯೋಜಿತ ಸಂಸ್ಥೆಯಿಂದ ಕೂಡ ಪೂರಕ ಮಾಹಿತಿ
Published 23 ಸೆಪ್ಟೆಂಬರ್ 2023, 0:30 IST
Last Updated 23 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಟೊರಾಂಟೊ: ಸರ್‍ರೆಯಲ್ಲಿ  ಸಿಖ್ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವು ಮಾನವ ಮತ್ತು ಸಿಗ್ನಲ್ ಗಳ ಬೇಹುಗಾರಿಕೆಗಳನ್ನು ಹಾಗೂ  'ಫೈವ್ ಐಸ್‌ ಇಂಟೆಲಿಜೆನ್ಸ್ ನೆಟ್ ವರ್ಕ್ ' ನ ಸಂಯೋಜಿತ ಸಂಸ್ಥೆ ನೀಡಿದ ಮಾಹಿತಿಯನ್ನು ಆಧರಿಸಿದೆ– ಕೆನಡಾ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮ ವರದಿಯೊಂದು ಹೀಗೆ ಹೇಳಿದೆ.

ಖಾಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಹರದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ಆರೋಪಿಸಿದ್ದು ಎರಡೂ ರಾಷ್ಟ್ರಗಳ ನಡುವೆ ತೀವ್ರತರವಾದ  ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿದೆ.

ಈ ದೇಶದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳು ಸೇರಿದಂತೆ ಭಾರತದ ಅಧಿಕಾರಿಗಳು ನಡೆಸಿದ ಸಂವಹನವನ್ನು ಬೇಹುಗಾರಿಕೆ ಒಳಗೊಂಡಿದೆ ಎಂದು ಕೆನಡಾದ ಸರ್ಕಾರದ ಮೂಲಗಳು ತಿಳಿಸಿವೆ. ಕೆನಡಾದಿಂದಷ್ಟೇ ಗುಪ್ತಚರ ಮಾಹಿತಿ ಬಂದಿಲ್ಲ. ‘ಫೈವ್‌ ಐಸ್‌ ಇಂಟೆಲಿಜೆನ್ಸ್‌ನಲ್ಲಿ ಸಂಯೋಜಿತವಾಗಿರುವ ಹೆಸರು ಬಹಿರಂಗ ಪಡಿಸದ ಸಂಸ್ಥೆಗಳಿಂದಲೂ ಕೆಲವು ಮಾಹಿತಿಗಳು ಬಂದಿವೆ ಎಂದು ಕೆನಡಾದ ಪ್ರಸಾರ ನಿಗಮದ ವಿಭಾಗವಾಗಿರುವ ಸಿಬಿಸಿ ನ್ಯೂಸ್‌ ತಿಳಿಸಿದೆ.

ಬೇಹುಗಾರಿಕೆಯ ಕೂಟವಾಗಿರುವ ’ಫೈವ್‌ ಐಸ್‌’ ನೆಟ್‌ವರ್ಕ್‌ ಕೆನಡಾ ಅಲ್ಲದೆ  ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ರಾಷ್ಟ್ರಗಳನ್ನು ಒಳಗೊಂಡಿದೆ. ನಿಜ್ಜರ್‌ ಹತ್ಯೆಯ ತನಿಖೆಗೆ ಸಹಕಾರ ಕೋರಿ ಕೆನಡಾದ ಅಧಿಕಾರಿಗಳು ಹಲವು ಬಾರಿ ಭಾರತಕ್ಕೆ ತೆರಳಿದ್ದರು ಎಂದು ವರದಿ ಹೇಳಿದೆ. 

ದೇಶದ ರಾಷ್ಟ್ರೀಯ ಭದ್ರತೆ ಮತ್ತು ಬೇಹುಗಾರಿಕೆ ಸಲಹೆಗಾರ ಜೊಡಿ ಥಾಮಸ್‌ ಅವರು ಆಗಸ್ಟ್‌ ಮಧ್ಯಭಾಗದಲ್ಲಿ ನಾಲ್ಕು ದಿನಗಳು ಭಾರತದಲ್ಲಿದ್ದರು. ಮತ್ತೆ ಸೆಪ್ಟೆಂಬರ್‌ನಲ್ಲಿ ಐದು ದಿನಗಳು ಇದ್ದರು. ಪ್ರಧಾನಿ ಟುಡ್ರೊ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆದ ವೇಳೆಯೂ ಭೇಟಿ ನೀಡಿದ್ದರು ಎಂದು ತಿಳಿಸಿದೆ.

‘ರಹಸ್ಯವಾಗಿ ವಿಚಾರಣೆ ನಡೆಸಿದಾಗ ಭಾರತದ ಯಾವ ಅಧಿಕಾರಿಗಳೂ ಈ ಗಂಭೀರ ಆರೋಪವನ್ನು ಅಲ್ಲಗಳೆಯಲಿಲ್ಲ– ಈ ನೆಲದಲ್ಲಿ ನಡೆದ ಇಲ್ಲಿನ ಪ್ರಜೆಯ ಹತ್ಯೆಗೆ ಇದು ಭಾರತ ಸರ್ಕಾರದ ಒಳಗೊಳ್ಳುವಿಕೆ ಬಿಂಬಿಸುವ ಸಾಕ್ಷ್ಯವಾಗಬಹುದು’ ಎಂದು ಕೂಡ ಅದು ಹೇಳಿದೆ.

ಪ್ರತೀಕಾರ ಕೈಗೊಳ್ಳಲು ಕೆನಡಾ ಆಲೋಚಿಸುತ್ತಿದೆ. ಆದರೆ ನಿರ್ಧಾರ ಇನ್ನೂ ಕೈಗೊಂಡಿಲ್ಲ ಎಂದು ಕೆನಡಾ ಸರ್ಕಾರದ ಮೂಲಗಳು ತಿಳಿಸಿವೆ.

‘ದ್ವೇಷ ಹರಡಲು ಕೆನಡಾದಲ್ಲಿ ಅವಕಾಶ ಇಲ್ಲ’:

ಕೆನಡಾದಲ್ಲಿರುವ ಹಿಂದೂಗಳು  ದೇಶವನ್ನು ತೊರೆಯುವಂತೆ ಹೇಳುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದು ಆಕ್ರಮಣಕಾರಿ ಮತ್ತು ದ್ವೇಷಪೂರಿತ ಕ್ರಮ ಎಂದು ಕೆನಡಾ ಸರ್ಕಾರ ಹೇಳಿದೆ.

ಅಪ್ರಚೋದಿತ ಆಕ್ರಮಣ, ದ್ವೇಷ ಹರಡುವ ಮತ್ತು ಭೀತಿ ಹುಟ್ಟಿಸುವ ವಾತಾವರಣಕ್ಕೆ ಈ ದೇಶದಲ್ಲಿ ಅವಕಾಶ ನೀಡುವುದಿಲ್ಲ. ಇಂಥವು ನಮ್ಮನ್ನು ವಿಭಜಿಸುತ್ತವೆ ಅಷ್ಟೆ. ಕೆನಡಿಯನ್ನರೆಲ್ಲರೂ ಪರಸ್ಪರ ಗೌರವಿಸಬೇಕು ಮತ್ತು ಇಲ್ಲಿನ ಕಾನೂನನ್ನು ಪಾಲಿಸಬೇಕು ಎಂದೂ ಕೆನಡಾದ ಸಾರ್ವಜನಿಕರ ಸುರಕ್ಷತೆ ವಿಭಾಗ ಗುರುವಾರ ರಾತ್ರಿ  ‘ಎಕ್ಸ್‌’ನಲ್ಲಿ ತಿಳಿಸಿದೆ.

ಕೆನಡಾದಲ್ಲಿರುವ ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಮತ್ತು ವೃತ್ತಿಪರರ ಸುರಕ್ಷತೆಯನ್ನು ಎಲ್ಲಾ ಸಮಯದಲ್ಲೂ ಖಾತ್ರಿಪಡಿಸಬೇಕು 

-ಜೈರಾಂ ರಮೇಶ್‌ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

ತನಿಖೆಗೆ ಬೆಂಬಲ:

ಅಮೆರಿಕ ಕೆನಡಾ ನಡೆಸುತ್ತಿರುವ ತನಿಖೆಯನ್ನು ಬೆಂಬಲಿಸುವುದಾಗಿ ಅಮೆರಿಕ ಹೇಳಿದ್ದು ಇಂತಹ ಕೃತ್ಯಗಳಿಗೆ ಯಾವುದೇ ರಾಷ್ಟ್ರಕ್ಕೂ ‘ವಿಶೇಷ ವಿನಾಯಿತಿ’ ಇರುವುದಿಲ್ಲ ಎಂದು ಅಮೆರಿಕ ಹೇಳಿದೆ. ಶ್ವೇತಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್‌ ಸುಲೈವನ್‌   ಅವರು ಈ ವಿಷಯ ಕುರಿತಂತೆ ಅಮೆರಿಕ ಕೆನಡಾ ಮತ್ತು ಭಾರತದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದೆ ಎಂದರು.

ಭಾರತದ ಸಹಕಾರ ಕೋರಿದ ಕೆನಡಾ

ವಿಶ್ವಸಂಸ್ಥೆ: ಸಿಖ್‌ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತದ ಕೈವಾಡವಿರುವ ಕುರಿತ ತನಿಖೆಗೆ ಭಾರತ ಸರ್ಕಾರ ಸಹಕರಿಸಬೇಕು ಎಂದು ಆ ದೇಶದ ಪ್ರಧಾನಿ ಜಸ್ಟಿನ್‌ ಟ್ರುಡೊ ಕರೆ ನೀಡಿದ್ದಾರೆ. ‘ಈ ಪ್ರಕರಣ ಕುರಿತಂತೆ ಸತ್ಯವನ್ನು ಬಹಿರಂಗಪಡಿಸುವ ಪ್ರಕ್ರಿಯೆಯಲ್ಲಿ ಭಾರತ ನಮ್ಮೊಂದಿಗೆ ಕಾರ್ಯ ನಿರ್ವಹಿಸಬೇಕು’ ಎಂದು ಅವರು ನ್ಯೂಯಾರ್ಕ್‌ನಲ್ಲಿ ಗುರುವಾರ ವಿಶ್ವಸಂಸ್ಥೆಯ ಸಾಮಾನ್ಯಸಭೆಯ ಕಾರ್ಯಕ್ರಮದ ವೇಳೆ ಹೇಳಿದ್ದಾರೆ. ಆದರೆ ಭಾರತದ ವಿರುದ್ಧ ಆರೋಪ ಮಾಡಲು ಕಾರಣವಾದ ಸಾಕ್ಷ್ಯಗಳನ್ನು ಒದಗಿಸಲು ಅವರು ನಿರಾಕರಿಸಿದ್ದಾರೆ.  ಕೆನಡಾದ ಪ್ರಜೆ ಹರದೀಪ್‌ ಸಿಂಗ್ ನಿಜ್ಜರ್‌ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು  ಸೋಮವಾರ ಅವರು ಆರೋಪಿಸಿದ್ದು ಇದು ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ.

ರಾಜತಾಂತ್ರಿಕ ಪರಿಹಾರಕ್ಕೆ ಕಾಂಗ್ರೆಸ್‌ ಒತ್ತಾಯ

ನವದೆಹಲಿ:ಭಯೋತ್ಪಾದನೆ ವಿರುದ್ಧದ ಹೋರಾಟ ಯಾವುದೇ ರಾಜಿಗೆ ಒಳಪಡಬಾರದು. ಭಾರತ - ಕೆನಡಾ ದೇಶಗಳ ಮಧ್ಯೆ ಉಂಟಾಗಿರುವ ಗಂಭೀರ ಬಿಕ್ಕಟ್ಟು ಪರಿಹಾರಕ್ಕೆ ತೀವ್ರತರವಾದ ರಾಜತಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳಬೇಕು ಎಂದು ಕಾಂಗ್ರೆಸ್‌ ಪುನರುಚ್ಚರಿಸಿದೆ. ಇದರ ಜತೆಗೇ ಕೆನಡಾದಲ್ಲಿ ಭಾರತೀಯರ ಸುರಕ್ಷತೆ ಬಗ್ಗೆಯೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಉಭಯ  ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಕುರಿತು ಕೇಳಿದ ಪ್ರಶ್ನೆಗೆ  ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್‌ ಅವರು ‘ಭಾರತದ ಸಾರ್ವಭೌಮತೆ ಏಕತೆ ಮತ್ತ ಸಮಗ್ರತೆಗೆ ಭಯೋತ್ಪಾದನೆಯು ಬೆದರಿಕೆಯೊಡ್ಡಿದಾಗ ಅದರ ವಿರುದ್ಧದ ನಮ್ಮ ಹೋರಾಟ ಯಾವುದೇ ರಾಜಿಯನ್ನು ಮಾಡಿಕೊಳ್ಳಬಾರದು’ ಎಂದು ಪ್ರತಿಕ್ರಿಯಿಸಿದರು. ಕೆನಡಾದಲ್ಲಿ ಭಾರತದ ಮೂಲದ ವಿದ್ಯಾರ್ಥಿಗಳು 3 ಲಕ್ಷದಷ್ಟು ಸಂಖ್ಯೆಯಲ್ಲಿದ್ದಾರೆ ಮತ್ತು ಅಲ್ಲದೆ  ಸಾವಿರಾರು ವೃತ್ತಿಪರರಿದ್ದಾರೆ. ಇವರು ಕೆನಡಾದ ಆರ್ಥಿಕ ಬೆಳವಣಿಗೆಗೆ ಮತ್ತು ಭಾರತ– ಕೆನಡಾ ಬಾಂಧವ್ಯಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದು ವಿವರಿಸಿದರು.

‘ ಶಾಸ್ತ್ರಿ ಇಂಡೊ– ಕೆನಡಾ ಇನ್‌ಸ್ಟಿಟ್ಯೂಟ್‌ ಹೆಸರಿನ ಸಂಸ್ಥೆ ಕೂಡ ಅಲ್ಲಿದೆ. ದೀರ್ಘಕಾಲದಿಂದ ಎರಡೂ ದೇಶಗಳು ಆರ್ಥಿಕ ಮತ್ತು ತಾಂತ್ರಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ‘ ಎಂದರು. ತನ್ನ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಭಾರತ ವಿರೋಧಿ ಶಕ್ತಿಗಳು ಮತ್ತು ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳೂವಂತೆ ಭಾರತ ಗುರುವಾರ ಕೆನಡಾಕ್ಕೆ ನೀಡಿದ ಸ್ಪಷ್ಟ ಸಂದೇಶದಲ್ಲಿ ಒತ್ತಾಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT