ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೆರಿಕ ಪ್ರಜೆಗಳಿಗೆ ಹಾಂಗ್‌ಕಾಂಗ್‌ ವೀಸಾ ನಿರ್ಬಂಧ

Last Updated 29 ಜೂನ್ 2020, 10:34 IST
ಅಕ್ಷರ ಗಾತ್ರ

ಬೀಜಿಂಗ್‌: ‘ಹಾಂಗ್‌ಕಾಂಗ್‌ ವಿಚಾರವಾಗಿ ಅತಿಯಾದ ನಡವಳಿಕೆ ಪ್ರದರ್ಶಿಸಿರುವ ಕಾರಣಕ್ಕೆ ಅಮೆರಿಕದ ನಾಗರಿಕರಿಗೆ ಹಾಂಗ್‌ಕಾಂಗ್‌ ವೀಸಾ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗುವುದು’ ಎಂದು ಚೀನಾ ಸೋಮವಾರ ಹೇಳಿದೆ.

‘ಹಾಂಗ್‌ಕಾಂಗ್‌ನ ನಾಗರಿಕರ ಸ್ವಾತಂತ್ರ್ಯ ನಿಗ್ರಹಿಸಲು ಕಾರಣರಾಗಿದ್ದಾರೆ ಎಂಬ ಆರೋಪದಡಿ ಹೆಸರು ಉಲ್ಲೇಖಿಸದೆಯೇ ಚೀನಾದ ಕೆಲವು ಅಧಿಕಾರಿಗಳ ಮೇಲೆ ನಿಷೇಧ ಹೇರಿರುವ ಅಮೆರಿಕದ ಕ್ರಮಕ್ಕೆ ಉತ್ತರವಾಗಿ ಚೀನಾ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ. ಚೀನಾ ಹೇರಿರುವ ಈ ನಿರ್ಬಂಧವು ಅಮೆರಿಕದ ಯಾವ ನಾಗರಿಕರನ್ನು ಗುರಿಯಾಗಿಸಿದ್ದು ಎಂದು ಸ್ಪಷ್ಟವಾಗಿಲ್ಲ.

‘ಹಾಂಗ್‌ಕಾಂಗ್ ಕುರಿತ ಚೀನಾ‍ದ ಇತ್ತೀಚಿನ ಕಾನೂನು ಜಾರಿಗೆ ತಡೆಯೊಡ್ಡಲು ಅಮೆರಿಕ ಯತ್ನಿಸುತ್ತಿದೆ. ಇದರಲ್ಲಿ ಅಮೆರಿಕಕ್ಕೆ ಯಶಸ್ಸು ಲಭಿಸದು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝವೊ ಲಿಜಿಯಾನ್‌ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಹಾಂಗ್‌ಕಾಂಗ್‌ನ ಸ್ವಾಯತ್ತೆ ಹತ್ತಿಕ್ಕಲು ಕಾರಣರಾದ ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಹಾಲಿ ಮತ್ತು ಮಾಜಿ ಅಧಿಕಾರಿಗಳಿಗೆ ಅಮೆರಿಕದ ವಿಸಾ ನಿರ್ಬಂಧಿಸಲಾಗುವುದು’ ಎಂದು ಕಳೆದ ವಾರ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ಹೇಳಿದ್ದರು.

ಹಾಂಗ್‌ಕಾಂಗ್‌ ಸ್ವಾಯತ್ತತೆಗೆ ಧಕ್ಕೆ ತರುವುದನ್ನು ಬೆಂಬಲಿಸುವ ವ್ಯಕ್ತಿ, ಕಂಪನಿಗಳು, ಇಂಥವರ ಜತೆಗೆ ವ್ಯವಹರಿಸುವ ಬ್ಯಾಂಕ್‌ಗಳಿಗೂ ನಿರ್ಬಂಧ ವಿಧಿಸಲು ಅವಕಾಶವಿರುವ ಮಸೂದೆಯನ್ನು ಅಮೆರಿಕ ಸಂಸತ್ತು ಕಳೆದ ವಾರ ಅನುಮೋದಿಸಿತ್ತು.

‘ಈ ಮಸೂದೆಗೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಅಮೆರಿಕದ ಈ ನಡೆಗೆ ಚೀನಾ ಅಷ್ಟೇ ದಿಟ್ಟ ಪ್ರತ್ಯುತ್ತರ ನೀಡಲಿದೆ ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ’ ಎಂದು ಲಿಜಿಯಾನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT