ಇಸ್ಲಾಮಾಬಾದ್(ಪಿಟಿಐ): ಅಧಿಕೃತ ರಹಸ್ಯ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ, ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 13ರ ವರೆಗೆ ವಿಸ್ತರಿಸಿ ಇಲ್ಲಿನ ವಿಶೇಷ ನ್ಯಾಯಾಲಯ ಬುಧವಾರ ಆದೇಶಿಸಿದೆ.
ಇಮ್ರಾನ್ ಖಾನ್ ಅವರನ್ನು ಇರಿಸಲಾಗಿರುವ ಅಟಾಕ್‌ನ ಜೈಲಿಗೆ ಬಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಅಬುವಲ್ ಹಸನತ್ ಜುಲ್ಕರ್‌ನೈನ್ ಅವರು ಈ ಕುರಿತ ಆದೇಶ ಹೊರಡಿಸಿದರು.
ಅಮೆರಿಕದ ರಾಯಭಾರ ಕಚೇರಿಯ ಗೋಪ್ಯ ರಾಜತಾಂತ್ರಿಕ ಕೇಬಲ್ ವಿಷಯ ಬಹಿರಂಗಪಡಿಸಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರನ್ನು ಸದ್ಯ ಅಟಾಕ್ ಜೈಲಿನಲ್ಲಿರಿಸಲಾಗಿದೆ. ಭದ್ರತೆ ಕಾರಣದಿಂದಾಗಿ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಗೃಹ ಇಲಾಖೆ ಅಧಿಕಾರಿಗಳು ಮಂಗಳವಾರ ನಿರ್ಧರಿಸಿದ್ದರು. ಇದಕ್ಕೆ ಕಾನೂನು ಸಚಿವಾಲಯ ಅನುಮೋದನೆ ನೀಡಿತ್ತು.
ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ವಿಧಿಸಿ ನೀಡಿರುವ ತೀರ್ಪನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಇಬ್ಬರು ಸದಸ್ಯರ ನ್ಯಾಯಪೀಠ ಅಮಾನತುಗೊಳಿಸಿ ಆದೇಶಿಸಿದ್ದರೂ, ಅಧಿಕೃತ ರಹಸ್ಯ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದಲ್ಲಿ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ. ಹೀಗಾಗಿ, ಇಮ್ರಾನ್ ಖಾನ್ ಅವರು ಸೆರೆವಾಸ ಅನುಭವಿಸಬೇಕಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.