ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ದೀವ್ಸ್‌: ಭಾರತದ ಪ್ರವಾಸಿಗರ ಸಂಖ್ಯೆ ಇಳಿಮುಖ

Published 30 ಜನವರಿ 2024, 15:14 IST
Last Updated 30 ಜನವರಿ 2024, 15:14 IST
ಅಕ್ಷರ ಗಾತ್ರ

ನವದೆಹಲಿ: ಮಾಲ್ದೀವ್ಸ್‌ ಮತ್ತು ಭಾರತದ ನಡುವಣ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದ ಬಳಿಕ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ.

ಮಾಲ್ದೀವ್ಸ್‌ಗೆ ಭೇಟಿ ಕೊಡುವ ವಿದೇಶಿಯರಲ್ಲಿ ಭಾರತದ ಪ್ರವಾಸಿಗರು ಅಗ್ರಸ್ಥಾನದಲ್ಲಿದ್ದರು. ಆದರೆ ಕಳೆದ ಮೂರು ವಾರಗಳಲ್ಲಿ ಭಾರತದ ಪ್ರವಾಸಿಗರ ಸಂಖ್ಯೆ ಐದನೇ ಸ್ಥಾನಕ್ಕೆ ಕುಸಿತ ಕಂಡಿರುವುದು ಅಧಿಕೃತ ಅಂಕಿ–ಅಂಶದಿಂದ ತಿಳಿದುಬಂದಿದೆ. 

ಈ ವರ್ಷದ ಜನವರಿ 1 ರಿಂದ 28ರವರೆಗೆ ಒಟ್ಟು 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಭೇಟಿ ಕೊಟ್ಟಿದ್ದಾರೆ. ಇದರಲ್ಲಿ ಭಾರತೀಯರ ಸಂಖ್ಯೆ 13,989 ಮಾತ್ರ. ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ರಷ್ಯನ್ನರು (18,561) ಅಗ್ರಸ್ಥಾನದಲ್ಲಿದ್ದಾರೆ. ಇಟಲಿ (18,111), ಚೀನಾ (16,529) ಮತ್ತು ಬ್ರಿಟನ್‌ನ (14,588) ಪ್ರವಾಸಿಗರು ಬಳಿಕದ ಸ್ಥಾನಗಳಲ್ಲಿದ್ದಾರೆ. 

2023ರಲ್ಲಿ 17 ಲಕ್ಷಕ್ಕೂ ಅಧಿಕ ಪ್ರವಾಸಿಗರು ದ್ವೀಪರಾಷ್ಟ್ರಕ್ಕೆ ಭೇಟಿ ಕೊಟ್ಟಿದ್ದರು. ಅದರಲ್ಲಿ ಹೆಚ್ಚಿನವರು ಭಾರತದ (2,09,198) ಪ್ರವಾಸಿಗರು ಆಗಿದ್ದರು. ರಷ್ಯಾ (2,09,146) ಮತ್ತು ಚೀನಾದ (1,87,118) ಪ್ರವಾಸಿಗರು ಬಳಿಕದ ಸ್ಥಾನಗಳಲ್ಲಿದ್ದರು. 

2021 ಮತ್ತು 2022ರಲ್ಲಿ ಕ್ರಮವಾಗಿ ಭಾರತದ 2.11 ಲಕ್ಷ ಹಾಗೂ 2.40 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು.

ಈ ತಿಂಗಳ ಆರಂಭದಲ್ಲಿ ಮಾಲ್ದೀವ್ಸ್‌ನ ಮೂವರು ಉಪ ಸಚಿವರು, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು. ಅದಕ್ಕೆ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಭಾರತೀಯರು ಮಾಲ್ದೀವ್ಸ್‌ನ ಬದಲು ದೇಶಿ ಪ್ರವಾಸಿ ತಾಣಗಳ ಕಡೆ ಗಮನ ಹರಿಸಬೇಕು ಎಂದು ಸೆಲೆಬ್ರಿಟಿಗಳು ಸೇರಿದಂತೆ ಹಲವರು ಕರೆ ನೀಡಿದ್ದರು.

ಕ್ಷಮೆಯಾಚಿಸಲು ಮುಯಿಜು ಮೇಲೆ ಒತ್ತಡ

ಮಾಲೆ: ಮಾಲ್ದೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ಭಾರತದ ಜನರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷಮೆಯಾಚಿಸಬೇಕು ಎಂಬ ಒತ್ತಡ ಹೆಚ್ಚಿದೆ. ಚೀನಾ ಪರ ಧೋರಣೆ ಹೊಂದಿರುವ ಮುಯಿಜು ಈಚೆಗೆ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿದ್ದರು. ಇದರಿಂದ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಧಕ್ಕೆ ಉಂಟಾಗಿದೆ. ‘ಮುಯಿಜು ಅವರು ಭಾರತದ ಕ್ಷಮೆಯಾಚಿಸಿ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಉತ್ತಮಪಡಿಸಲು ಮುಂದಾಗಬೇಕು’ ಎಂದು ಜಂಹೂರಿ ಪಕ್ಷದ ನಾಯಕ ಗಸೂಮ್ ಇಬ್ರಾಹಿಂ ಮಂಗಳವಾರ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT