ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನದಲ್ಲಿ ರೂ 300ರ ಗಡಿ ದಾಟಿದ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆ

Published 1 ಸೆಪ್ಟೆಂಬರ್ 2023, 13:42 IST
Last Updated 1 ಸೆಪ್ಟೆಂಬರ್ 2023, 13:42 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇದೇ ಮೊದಲ ಬಾರಿಗೆ 300 ರೂಪಾಯಿ ಗಡಿ ದಾಟಿದೆ.

ಆರ್ಥಿಕ ಸುಸ್ಥಿತಿಗೆ ಮರಳಲು ತೀವ್ರ ಪ್ರಯತ್ನ ನಡೆಸುತ್ತಿರುವ ಪಾಕಿಸ್ತಾನದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆಯನ್ನು 14.91 ರೂಪಾಯಿಯಷ್ಟು ಹಾಗೂ ಹೈ ಸ್ಪೀಡ್ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 18.44ರಷ್ಟು ಹೆಚ್ಚಳ ಮಾಡಿ ಹಣಕಾಸು ಸಚಿವಾಲಯ ಗುರುವಾರ ಸಂಜೆ ಘೋಷಿಸಿದೆ. 

ಇದರಿಂದಾಗಿ ಪೆಟ್ರೋಲ್ ಬೆಲೆ 305.36 ರೂಪಾಯಿ ಮತ್ತು ಡೀಸೆಲ್ ಬೆಲೆ 311.84 ರೂಪಾಯಿಗೆ ಏರಿಕೆಯಾಗಿದೆ. ದಶಕದಲ್ಲೇ ಪಾಕಿಸ್ತಾನ ಅತಿ ದೊಡ್ಡ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹಣ ದುಬ್ಬರ ಹಾಗೂ ಅಧಿಕ ಬಡ್ಡಿ ದರದಿಂದಾಗಿ ಸಾಮಾನ್ಯ ಜನ ಹಾಗೂ ವ್ಯಾಪಾರಿಗಳ ಮೇಲೆ ತೀವ್ರ ಒತ್ತಡ ಸೃಷ್ಟಿಯಾಗಿದೆ.

ಪಾಕಿಸ್ತಾನದ ಕರೆನ್ಸಿ ರುಪೀ ಮೌಲ್ಯ ನಿರಂತರವಾಗಿ ಕುಸಿಯುತ್ತಿರುವುದರಿಂದ ಅಲ್ಲಿನ ಕೇಂದ್ರೀಯ ಬ್ಯಾಂಕ್‌ ಬಡ್ಡಿದರವನ್ನು ಏರಿಸಿದೆ. ಅಮೆರಿಕದ ಡಾಲರ್ ಎದುರು ಪಾಕಿಸ್ತಾನದ ಕರೆನ್ಸಿ 305.6ಕ್ಕೆ ಸರ್ವಕಾಲಿಕ ಕುಸಿತ ದಾಖಲಿಸಿದೆ. ಕಳೆದ ಮಂಗಳವಾರ ಇದು 304.4 ಇತ್ತು.

ಪಾಕಿಸ್ತಾನದಲ್ಲಿ ಸದ್ಯ ಹಂಗಾಮಿ ಪ್ರಧಾನಿ ಅನ್ವರ್ ಉಲ್‌ ಹಕ್‌ ಕಕರ್‌ ಅವರ ಆಡಳಿತದಲ್ಲಿ ಸರ್ಕಾರ ನಡೆಯುತ್ತಿದೆ. ದೇಶದಲ್ಲಿ ಹೊಸದಾಗಿ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾಗಬೇಕಿದೆ. ಇದು ನವೆಂಬರ್‌ವರೆಗೂ ವಿಳಂಬವಾಗುವ ಸಾಧ್ಯತೆ ಇದೆ.

ದೇಶದ ಆರ್ಥಿಕತೆಯನ್ನು ಮರಳಿ ಹಳಿಗೆ ತರುವ ನಿಟ್ಟಿನಲ್ಲಿ ಕೊನೆಯ ಕ್ಷಣದಲ್ಲಿ 3 ಶತಕೋಟಿ ಡಾಲರ್‌ನಷ್ಟು ಬೇಲೌಟ್‌ ಪಡೆದಿದ್ದರಿಂದ ಪಾಕಿಸ್ತಾನದ ಆರ್ಥಿಕ ವಹಿವಾಟು 350 ಶತಕೋಟಿ ಡಾಲರ್‌ ಗಡಿಯಲ್ಲಿ ಸಣ್ಣ ಚೇತರಿಕೆಯೊಂದಿಗೆ ಸಾಗಿದೆ ಎಂದೆನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT