ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೇಖ್‌ ಹಸೀನಾ ಹಸ್ತಾಂತರಕ್ಕೆ ಬಿಎನ್‌ಪಿ ನಾಯಕ ಆಗ್ರಹ

Published 31 ಆಗಸ್ಟ್ 2024, 13:08 IST
Last Updated 31 ಆಗಸ್ಟ್ 2024, 13:08 IST
ಅಕ್ಷರ ಗಾತ್ರ

ಢಾಕಾ: ‘ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರನ್ನು ಭಾರತವು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವ ಮೂಲಕ ಉಭಯ ದೇಶಗಳ ಬಾಂಧವ್ಯದಲ್ಲಿ ಹೊಸ ಅಧ್ಯಾಯ ಆರಂಭಿಸಬೇಕು’ ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ (ಬಿಎನ್‌ಪಿ) ಪ್ರಧಾನ ಕಾರ್ಯದರ್ಶಿ ಮಿರ್ಜಾ ಫಕ್ರುಲ್‌ ಇಸ್ಲಾಂ ಆಲಂಗೀರ್‌ ಆಗ್ರಹಿಸಿದರು.

‘ಹಸೀನಾ ಅವರು ಭಾರತದಲ್ಲಿ ಹೆಚ್ಚು ಕಾಲ ನೆಲಸಿದ್ದರೆ, ಅದರಿಂದ ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹಾಳಾಗುವ ಸಾಧ್ಯತೆಯಿದೆ’ ಎಂದು ಅವರು ಎಚ್ಚರಿಸಿದರು.

‘ಹಿಂದಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಭಾರತದೊಂದಿಗೆ ಬಲವಾದ ಸಂಬಂಧ ಹೊಂದಲು ನಮ್ಮ ಪಕ್ಷ ಬಯಸುತ್ತದೆ’ ಎಂದಿರುವ ಅವರು, ‘ಬಾಂಗ್ಲಾದೇಶದ ನೆಲದಲ್ಲಿ ಭಾರತದ ಭದ್ರತೆಗೆ ಧಕ್ಕೆ ಆಗುವಂತಹ ಯಾವುದೇ ಚಟುವಟಿಕೆಗಳಿಗೆ ಅನುಮತಿಸುವುದಿಲ್ಲ’ ಎಂದು ಭರವಸೆ ನೀಡಿದರು.

‘ಬಿಎನ್‌ಪಿ ಅಧಿಕಾರಕ್ಕೆ ಬಂದರೆ, ಅವಾಮಿ ಲೀಗ್‌ ಆಡಳಿತಾವಧಿಯಲ್ಲಿ ಸಹಿ ಮಾಡಲಾದ ಅದಾನಿ ವಿದ್ಯುತ್‌ ಒಪ್ಪಂದದ ಪರಿಶೀಲನೆ ಮತ್ತು ಮರು ಮೌಲ್ಯಮಾಪನ ಮಾಡಲಾಗುವುದು’ ಎಂದು ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

‘ಬಾಂಗ್ಲಾದೇಶದ ಜನರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ದೆಹಲಿಯ ರಾಜತಾಂತ್ರಿಕರು ವಿಫಲರಾಗಿದ್ದಾರೆ. ಜನರ ದಂಗೆಯ ಬಳಿಕ ಹಸೀನಾ ಅವರ ಸರ್ಕಾರ ಪತನವಾಯಿತು. ಆ ಬಳಿಕ ಚೀನಾ, ಅಮೆರಿಕ, ಬ್ರಿಟನ್‌ ಮತ್ತು ಪಾಕಿಸ್ತಾನ ರಾಷ್ಟ್ರಗಳು ಬಿಎನ್‌ಪಿ ಜತೆಗೆ ಸಂಪರ್ಕ ಬೆಳೆಸಿವೆ. ಆದರೆ, ಇಲ್ಲಿಯವರೆಗೂ ಭಾರತ ಸಂಪರ್ಕ ಸಾಧಿಸಿಲ್ಲ’ ಎಂದು ಅವರು ಹೇಳಿದರು. 

‘ಅಲ್ಪಸಂಖ್ಯಾತರ ಸುರಕ್ಷೆಯು ಬಾಂಗ್ಲಾದೇಶದ ಆಂತರಿಕ ವಿಷಯವಾಗಿದೆ’ ಎಂದು ಪ್ರತಿಪಾದಿಸಿ ಅವರು, ‘ಹಿಂದೂಗಳ ಮೇಲಿನ ದಾಳಿಯ ವರದಿಗಳು ನಿಖರವಾಗಿಲ್ಲ. ಏಕೆಂದರೆ, ಹೆಚ್ಚಿನ ಘಟನೆಗಳು ಕೋಮುವಾದಕ್ಕಿಂತ ರಾಜಕೀಯ ಪ್ರೇರಿತವಾಗಿವೆ’ ಎಂದು ತಿಳಿಸಿದರು.

ಮಾಜಿ ಪ್ರಧಾನಿ ಶೇಖ್‌ ಹಸೀನಾ ಅವರು ಅಪರಾಧ ಮತ್ತು ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದಲ್ಲಿ ಕಾನೂನು ಕ್ರಮಗಳನ್ನು ಎದುರಿಸಬೇಕಿದೆ. ಇದಕ್ಕಾಗಿ ಮತ್ತು ದೇಶದ ಜನರ ಭಾವನೆಗಳನ್ನು ಗೌರವಿಸಿ, ಭಾರತವು ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.

ಹಸೀನಾ ವಿರುದ್ಧ ಮತ್ತೆರಡು ಪ್ರಕರಣ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್‌ ಹಸೀನಾ ಮತ್ತು ಅವರ ಮಾಜಿ ಸಂಪುಟ ಸಚಿವರ ವಿರುದ್ಧ ಎರಡು ಹೊಸ ಕೊಲೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬಿಎನ್‌ಪಿಯ ಇಬ್ಬರು ಕಾರ್ಯಕರ್ತರು ಸೇರಿದಂತೆ ಮೂವರ ಕೊಲೆ ಪ್ರಕರಣ ಹಸೀನಾ ಅವರ ವಿರುದ್ಧ ದಾಖಲಿಸಲಾಗಿದೆ. ಮೀಸಲು ಕೋಟಾ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಅವರುಗಳ ಹತ್ಯೆಯಾಗಿತ್ತು ಎಂದು ಮಾಧ್ಯಮಗಳು ತಿಳಿಸಿವೆ.

ಇದರೊಂದಿಗೆ ಹಸೀನಾ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 84ಕ್ಕೆ ಏರಿದಂತಾಗಿದೆ. ಇದರಲ್ಲಿ 70 ಕೊಲೆ ಆರೋಪಗಳು ನರಮೇಧಕ್ಕೆ ಸಂಬಂಧಿಸಿದ ಎಂಟು ಅಪಹರಣಕ್ಕೆ ಸಂಬಂಧಿಸಿದ ಮೂರು ಹಾಗೂ ಇತರ ಮೂರು ಪ್ರಕರಣಗಳು ದಾಖಲಾಗಿವೆ ಎಂದು ‘ದಿ ಡೈಲಿ ಸ್ಟಾರ್‌’ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT