ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜತಾಂತ್ರಿಕ ನಿಪುಣ ಹೆನ್ರಿ ಕಿಸ್ಸಿಂಜರ್ ಇನ್ನಿಲ್ಲ

Published 30 ನವೆಂಬರ್ 2023, 14:35 IST
Last Updated 30 ನವೆಂಬರ್ 2023, 14:35 IST
ಅಕ್ಷರ ಗಾತ್ರ

ವಾಷಿಂಗ್ಟನ್‌ : ಶೀತಲ ಸಮರದ ಕಾಲಘಟ್ಟದಲ್ಲಿ ಅಮೆರಿಕದ ವಿದೇಶಾಂಗ ನೀತಿ ರೂಪಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ನೊಬೆಲ್‌ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ (100) ಬುಧವಾರ ನಿಧನರಾಗಿದ್ದಾರೆ.

ಕನೆಕ್ಟಿಕಟ್‌ನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ ಎಂದು ರಾಜಕೀಯ ಸಲಹಾ ಸಂಸ್ಥೆ ಕಿಸ್ಸಿಂಜರ್‌ ಅಸೋಸಿಯೇಟ್ಸ್‌ ತಿಳಿಸಿದೆ. ಆದರೆ, ಸಾವಿಗೆ ನಿಖರ ಕಾರಣವನ್ನು ತಿಳಿಸಿಲ್ಲ. 

ಏಕಕಾಲಕ್ಕೆ ಶ್ವೇತಭವನದ ರಾಜ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಹುದ್ದೆ ನಿಭಾಯಿಸಿದ್ದು ಹೆನ್ರಿ ಅವರ ಹೆಗ್ಗಳಿಕೆ. ವಿಯೆಟ್ನಾಂ ಯುದ್ಧ, ಪ್ಯಾರಿಸ್‌ ಶಾಂತಿ ಒಪ್ಪಂದ, ಅಮೆರಿಕ ಮತ್ತು ರಷ್ಯಾ ನಡುವಣ ಶಸ್ತ್ರಾಸ್ತ್ರ ಮಾತುಕತೆ, 70ರ ದಶಕದಲ್ಲಿ ಚೀನಾದೊಂದಿಗೆ ಅಮೆರಿಕದ ರಾಜತಾಂತ್ರಿಕ ಸಂಬಂಧದ ಬೆಸುಗೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ.

ಅಧ್ಯಕ್ಷರಾಗಿದ್ದ ರಿಚರ್ಡ್‌ ನಿಕ್ಸನ್‌ ಹಾಗೂ ಜೆರಾಲ್ಡ್ ಫೋರ್ಡ್ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಅವರ ಹಿರಿಮೆ.

ಹೆನ್ರಿ ಅವರು 1923ರ ಮೇ 27ರಂದು ಜರ್ಮನಿಯ ಯಹೂದಿ ಕುಟುಂಬದಲ್ಲಿ ಜನಿಸಿದರು. 15ನೇ ವಯಸ್ಸಿಗೆ ನಿರಾಶ್ರಿತರಾಗಿ ಅಮೆರಿಕಕ್ಕೆ ಕಾಲಿಟ್ಟ ಅವರು ಅಲ್ಲಿಯೇ ಶಿಕ್ಷಣ ಪಡೆದ ಬಳಿಕ ಸೈನ್ಯದಲ್ಲಿ ಸೇವೆ ಸಲ್ಲಿಸಿದರು. 1943ರಲ್ಲಿ ಅವರಿಗೆ ಅಮೆರಿಕದ ಪೌರತ್ವ ಸಿಕ್ಕಿತು. 

ಹಂತ ಹಂತವಾಗಿ ಹಲವು ಹುದ್ದೆಗೇರಿದ ಹೆನ್ರಿ, ಅಮೆರಿಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನ್ಯೂಯಾರ್ಕ್‌ ಗವರ್ನರ್ ನೆಲ್ಸನ್ ರಾಕ್ಫೆಲ್ಲರ್‌ ಅವರಿಗೆ ಸಲಹೆಗಾರರಾಗಿದ್ದರು. ಆದರೆ, ರಾಕ್ಫೆಲ್ಲರ್‌ ಅವರ ರಾಜಕೀಯ ವಿರೋಧಿಯಾಗಿದ್ದ ರಿಚರ್ಡ್‌ ನಿಕ್ಸನ್‌ 1968ರಲ್ಲಿ ಮೇಲುಗೈ ಸಾಧಿಸಿದ ತಕ್ಷಣವೇ, ನಿಕ್ಸನ್‌ ಬಣಕ್ಕೆ ಸೇರ್ಪಡೆಗೊಂಡರು.

ನೊಬೆಲ್‌ ವಿವಾದ

ವಿಯೆಟ್ನಾಂ ಮೇಲೆ ಅಮೆರಿಕ ನಡೆಸಿದ ಯುದ್ಧದಲ್ಲಿ ಹೆನ್ರಿ ಅವರ ಪಾತ್ರವಿದೆ ಎಂದು ಹೇಳಲಾಗಿದೆ. 1973ರಲ್ಲಿ ವಿಯೆಟ್ನಾಂ ಕದನ ವಿರಾಮಕ್ಕೆ ಜಂಟಿಯಾಗಿ ಸಂಧಾನದ ಹೊಣೆ ಹೊತ್ತಿದ್ದರು ಎಂದು ಹೆನ್ರಿಗೆ ಜಂಟಿಯಾಗಿ ಶಾಂತಿ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ, ವಿಯೆಟ್ನಾಂನ ಜಂಟಿ ಸಂಧಾನಕಾರ ಲಿ ಡಕ್‌ ತೋ ಅವರು, ಒಟ್ಟಾಗಿ ನೊಬೆಲ್ ಸ್ವೀಕರಿಸಲು ನಿರಾಕರಿಸಿದ್ದರು.

ಕಾಂಬೋಡಿಯಾದಲ್ಲಿ ನಡೆದ ಬಾಂಬ್‌ದಾಳಿಯಲ್ಲಿ ಸಾವಿರಾರು ಜನರು ಜೀವತೆತ್ತರು. ಇದರ ಹಿಂದೆ ಹೆನ್ರಿ ಅವರ ಪಾತ್ರವಿದೆ ಎಂದು ಆರೋಪಿಸಲಾಗಿತ್ತು.   

‘ವಾಟರ್‌ಗೇಟ್‌’ ಹಗರಣದ ಬಳಿಕ ನಿಕ್ಸನ್‌ ಅಧಿಕಾರದಿಂದ ಕೆಳಗಿಳಿದರು. ಬಳಿಕ ಅಧ್ಯಕ್ಷ ಗಾದಿಗೆ ಹೇರಿದ ಜೆರಾಲ್ಡ್ ಫೋರ್ಡ್ ಅವಧಿಯಲ್ಲಿಯೂ ಹೆನ್ರಿ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 

ಇಂದಿರಾ ವಿರುದ್ಧ ಅವಾಚ್ಯ ಪದ ಬಳಕೆ

ರಿಚರ್ಡ್ಸ್‌ ನಿಕ್ಸನ್‌ ಹಾಗೂ ಹೆನ್ರಿ ಕಿಸ್ಸಿಂಜರ್ ಅವರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತದ ಪರ ಅಷ್ಟೊಂದು ಒಲವು ಇರಲಿಲ್ಲ. ಹಾಗಾಗಿ ನಿಕ್ಸನ್‌ ಅವಧಿಯಲ್ಲಿ ಭಾರತದೊಂದಿಗಿನ ಅಮೆರಿಕದ ಸಂಬಂಧವೂ ಹಳಿ ತಪ್ಪಿತ್ತು ಎಂದು ರಾಜಕೀಯ ತಜ್ಞರು ಹೇಳುತ್ತಾರೆ. ಬಾಂಗ್ಲಾ ಬಿಕ್ಕಟ್ಟು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಡಲು ಮೂಲ ಕಾರಣವಾಗಿತ್ತು. ಬಾಂಗ್ಲಾ ವಿಮೋಚನೆ ವೇಳೆ ಇಂದಿರಾ ಗಾಂಧಿ ಹಾಗೂ ಭಾರತೀಯರ ವಿರುದ್ಧ ನಿಕ್ಸನ್‌ ಹಾಗೂ ಕಿಸ್ಸಿಂಜರ್‌ ಅವಾಚ್ಯ ಪದಗಳನ್ನು ಬಳಸಿದ್ದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಇದಕ್ಕೆ ಅವರು ವಿಷಾದ ವ್ಯಕ್ತಪಡಿಸಿದ್ದರು. 

ಮೋದಿ ಅವರ ಅಭಿಮಾನಿ

ಎಪ್ಪತ್ತರ ದಶಕದಲ್ಲಿ ಇಂದಿರಾ ಗಾಂಧಿ ಅವರ ಆಡಳಿತದ ಬಗ್ಗೆ ಹೆನ್ರಿ ಅವರು ತಿರಸ್ಕಾರದ ಮಾತುಗಳನ್ನಾಡಿದ್ದರು. ಆದರೆ ನರೇಂದ್ರ ಮೋದಿ  ಅವರು ಭಾರತದ ಪ್ರಧಾನಿಯಾದ ಬಳಿಕ ಭಾರತ–ಅಮೆರಿಕದ ನಡುವಣ ರಾಜತಾಂತ್ರಿಕ ಸಂಬಂಧದ ಬಲವರ್ಧನೆಯ ಪ್ರತಿಪಾದಕರಲ್ಲಿ ಅವರು ಒಬ್ಬರಾಗಿದ್ದರು.     ಕಳೆದ ವರ್ಷದ ಜೂನ್‌ನಲ್ಲಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಮತ್ತು ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಜಂಟಿಯಾಗಿ ಆಯೋಜಿಸಿದ್ದ ಔತಣದಲ್ಲಿ ಮೋದಿ ಅವರ ಭಾಷಣ ಕೇಳಲು ಅನಾರೋಗ್ಯದ ನಡುವೆಯೂ ಹೆನ್ರಿ ವಾಷಿಂಗ್ಟನ್‌ಗೆ ಆಗಮಿಸಿದ್ದರು. ಮೋದಿ ಅವರ ಅಭಿಮಾನಿಯೂ ಆಗಿದ್ದರು ಎಂದು ಹೇಳಲಾಗಿದೆ.

ಹೆನ್ರಿ ಕಿಸ್ಸಿಂಜರ್ –ಪಿಟಿಐ ಚಿತ್ರ
ಹೆನ್ರಿ ಕಿಸ್ಸಿಂಜರ್ –ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT