ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಲ್ಲಿ ಇಮ್ರಾನ್‌ ಖಾನ್‌ಗೆ ಐಷಾರಾಮಿ ವ್ಯವಸ್ಥೆ: ಮಾಸಿಕ ₹12 ಲಕ್ಷ ಖರ್ಚು

Published 9 ಏಪ್ರಿಲ್ 2024, 9:13 IST
Last Updated 9 ಏಪ್ರಿಲ್ 2024, 9:13 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ರಾವಲ್ಪಿಂಡಿಯ ಅದಿಯಾಲ ಜೈಲಿನಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಭದ್ರತೆಗೆ ಮಾಸಿಕ ₹12 ಲಕ್ಷ ವೆಚ್ಚವಾಗುತ್ತಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

71 ವರ್ಷದ ಇಮ್ರಾನ್‌ ಖಾನ್‌ ಅವರಿಗೆ ಜೈಲಿನಲ್ಲಿ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಅವರಿರುವ ಜೈಲು ಆವರಣಕ್ಕೆ ₹5 ಲಕ್ಷ ಮೌಲ್ಯದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜೈಲು ವರಿಷ್ಠಾಧಿಕಾರಿ, ಲಾಹೋರ್‌ ಹೈಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯಲ್ಲಿ ಉಲ್ಲೇಖಿಸಿದ್ದಾರೆ.

ಪ್ರತ್ಯೇಕ ಅಡುಗೆಕೋಣೆಯಲ್ಲಿ ಇಮ್ರಾನ್ ಖಾನ್ ಅವರಿಗೆ ಆಹಾರ ತಯಾರಿಸಲಾಗುತ್ತಿದ್ದು, ಅದರ ಪರಿವೀಕ್ಷಣೆಗೆಂದೇ ಸಹಾಯಕ ವರಿಷ್ಠಾಧಿಕಾರಿಯೊಬ್ಬರಿದ್ದಾರೆ. ವೈದ್ಯಕೀಯ ಅಧಿಕಾರಿಯೊಬ್ಬರ ತಪಾಸಣೆ ಬಳಿಕವೇ ಅವರಿಗೆ ಆಹಾರ ನೀಡಲಾಗುತ್ತಿದೆ ಎಂದು ‘ದಿ ಎಕ್ಸ್‌ಪ್ರೆಸ್‌ ಟ್ರಿಬ್ಯೂನ್’ ವರದಿ ಮಾಡಿದೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯ ಆರಕ್ಕೂ ಅಧಿಕ ವೈದ್ಯರು ಸ್ಥಳದಲ್ಲಿದ್ದುಕೊಂಡು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಹೆಚ್ಚುವರಿ ವಿಶೇಷ ತಂಡವು ನಿಯಮಿತ ತಪಾಸಣೆ ಮಾಡುತ್ತಿದ್ದಾರೆ. ಏಳು ವಿಶೇಷ ಸೆಲ್‌ಗಳ ಪೈಕಿ ಎರಡನ್ನು ಇಮ್ರಾನ್‌ ಅವರಿಗೆ ಮೀಸಲಿರಿಸಲಾಗಿದ್ದು, ಉಳಿದ ಐದು ಸೆಲ್‌ಗಳನ್ನು ಭದ್ರತಾ ದೃಷ್ಟಿಯಿಂದ ಬಂದ್ ಮಾಡಲಾಗಿದೆ. ಇದರಲ್ಲಿ 35 ಕೈದಿಗಳನ್ನು ಇಡಬಹುದಾಗಿದೆ.

ಇಮ್ರಾನ್ ಖಾನ್ ಅವರ ಸೆಲ್‌ಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಪ್ರವೇಶಕ್ಕೂ ಮುನ್ನ ಅನುಮತಿ ಕಡ್ಡಾಯ. ಭದ್ರತೆಗೆ ವೃತ್ತಿಪರವಾಗಿ ತರಬೇತಿ ಪಡೆದ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಬ್ಬರು ಭದ್ರತಾ ಅಧಿಕಾರಿಗಳು ಹಾಗೂ ಮೂವರು ವೈಯಕ್ತಿಕ ಭದ್ರತಾ ಸಿಬ್ಬಂದಿ ಸೇರಿ ಒಟ್ಟು 15 ಮಂದಿ ಇಮ್ರಾನ್‌ ಖಾನ್‌ಗೆ ಭದ್ರತೆ ಒದಗಿಸುತ್ತಿದ್ದಾರೆ.

ನಡಿಗೆಗೆ ವಿಶೇಷ ಜಾಗ ಮೀಸಲಿರಿಸಲಾಗಿದೆ. ವ್ಯಯಾಮಕ್ಕೆ ಯಂತ್ರಗಳು ಹಾಗೂ ಇತರ ಸೌಕರ್ಯಗಳನ್ನು ನೀಡಲಾಗಿದೆ. ಸಂದರ್ಶಕರಿಗೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಸಮಗ್ರ ಭದ್ರತಾ ಶಿಷ್ಟಾಚಾರಗಳನ್ನು ಒದಗಿಸಲಾಗಿದೆ.

ಅದಿಯಾಲ ಜೈಲಿನೊಳಗೆ ಹಾಗೂ ಸುತ್ತಮುತ್ತ ಇಮ್ರಾನ್ ಖಾನ್ ಹಾಗೂ ಇತರ ಕೈದಿಗಳ ಭದ್ರತೆಗೆ ಹೆಚ್ಚುವರಿ ಪೊಲೀಸ್‌, ರೇಂಜರ್‌ಗಳು, ಉನ್ನತ ಮಟ್ಟದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT