ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಷಖಾನಾ ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್, ಪತ್ನಿಗೆ 14 ವರ್ಷ ಜೈಲು

Published 31 ಜನವರಿ 2024, 6:15 IST
Last Updated 31 ಜನವರಿ 2024, 6:15 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌: ಅಧಿಕೃತ ರಹಸ್ಯ ಮಾಹಿತಿ ಸೋರಿಕೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಮರುದಿನವೇ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ತೋಷಖಾನ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಕಠಿಣ ಶಿಕ್ಷೆಯನ್ನು ಬುಧವಾರ ವಿಧಿಸಲಾಗಿದೆ.

ಫೆಬ್ರುವರಿಯಲ್ಲಿ ನಡೆಯಲಿರುವ ದೇಶದ ಸಾರ್ವತ್ರಿಕ ಚುನಾವಣೆಗೆ ಎಂಟು ದಿನಗಳ ಮುನ್ನ, ಭ್ರಷ್ಟಾಚಾರ ಗಳ ಪ್ರಕರಣಗಳ ವಿಚಾರಣಾ ನ್ಯಾಯಾ ಲಯದ ನ್ಯಾಯಾಧೀಶ ಮೊಹಮ್ಮದ್‌ ಬಶೀರ್‌ ಈ ತೀರ್ಪು ನೀಡಿದ್ದಾರೆ. 

ಖಾನ್‌ ಮತ್ತು ಅವರ ಪತ್ನಿಗೆ 10 ವರ್ಷಗಳ ಕಾಲ ಸರ್ಕಾರದ ಯಾವುದೇ ಸ್ಥಾನಮಾನ ಅಲಂಕರಿಸದಂತೆ ನಿಷೇಧಿಸಲಾಗಿದೆ. ಅಲ್ಲದೆ, ಇಬ್ಬರಿಗೂ ತಲಾ ಸುಮಾರು 78 ಕೋಟಿ ಪಾಕಿಸ್ತಾನಿ ರೂಪಾಯಿ ದಂಡ ವಿಧಿಸಲಾಗಿದೆ. 

ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಖಾನ್‌ ಅವರ ವಿಚಾರಣೆ ನಡೆಸಲಾಯಿತು. ಪಾಕಿಸ್ತಾನದ ಪ್ರಧಾನಿ ಯಾಗಿದ್ದಾಗ ಇಮ್ರಾನ್ ಖಾನ್‌ ಅವರು ದುಬಾರಿ ಬೆಲೆಯ ಉಡುಗೊರೆ ಗಳನ್ನು ವೈಯಕ್ತಿಕ ಲಾಭಕ್ಕಾಗಿ ಮಾರಾಟ ಮಾಡಿಕೊಂಡ ಆರೋಪ ಎದುರಿಸುತ್ತಿದ್ದರು. 

ದೇಶದ ಸೂಕ್ಷ್ಮ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ್ದ ಆರೋಪದ ಪ್ರಕರಣದಲ್ಲಿ ಇಮ್ರಾನ್‌ ಖಾನ್‌ ಮತ್ತು ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್‌ ಖುರೇಷಿ ಅವರಿಗೆ ಮಂಗಳವಾರಷ್ಟೇ ವಿಶೇಷ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.

ಮಾಜಿ ಕ್ರಿಕೆಟಿಗ, ಪಾಕಿಸ್ತಾನ್‌– ತೆಹ್ರೀಕ್‌– ಎ– ಇನ್ಸಾಫ್‌ (ಪಿಟಿಐ) ಪಕ್ಷದ ಅಧ್ಯಕ್ಷರೂ ಆದ 71 ವರ್ಷದ ಖಾನ್‌, ಭ್ರಷ್ಟಾಚಾರದ ಆರೋಪದ ಮತ್ತೊಂದು ಪ್ರಕರಣದಲ್ಲಿ ಈಗಾಗಲೇ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 49 ವರ್ಷದ ಬುಶ್ರಾ ಬೀಬಿ ವಿಚಾರಣೆ ವೇಳೆ ಹಾಜರಿರಲಿಲ್ಲ. ತೀರ್ಪು ಪ್ರಕಟವಾದ ನಂತರ ಬುಶ್ರಾ ಅಡಿಯಾಲ ಜೈಲಿಗೆ ತೆರಳಿ ಅಲ್ಲಿ ಅಧಿಕಾರಿಗಳ ಎದುರು ಶರಣಾದರು.

ನ್ಯಾಯ ವಂಚನೆ– ಖಾನ್‌ ಆರೋಪ: ‘ತೋಷಖಾನಾ ಭ್ರಷ್ಟಾಚಾರ ಪ್ರಕರಣದ ವಿಚಾರಣೆಗಾಗಿ ಮಾತ್ರ ಹಾಜರಾಗುವಂತೆ ಕರೆಸಿ, ನನಗೆ ಮತ್ತು ನನ್ನ ಪತ್ನಿಗೆ 14 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ನ್ಯಾಯ ವಂಚಿಸಲಾಗಿದೆ’ ಎಂದು ಇಮ್ರಾನ್‌ ಖಾನ್‌, ಭ್ರಷ್ಟಾಚಾರ ಪ್ರಕರಣಗಳ ವಿಚಾರಣಾ ನ್ಯಾಯಾಲಯದ ವಿರುದ್ಧ ಬುಧವಾರ ಆರೋಪಿಸಿದ್ದಾರೆ.

ವಿಚಾರಣೆಯ ಆರಂಭದಲ್ಲಿ, ನ್ಯಾಯಾಧೀಶ ಬಶೀರ್ ಅವರು ಖಾನ್ ಅವರಿಗೆ ‘ನಿಮ್ಮ ಹೇಳಿಕೆ ದಾಖಲಿಸಿದ್ದೀರಾ ಎಂದು ಕೇಳಿದರು. ಇದಕ್ಕೆ ವಕೀಲರು ಬಂದ ನಂತರ ಹೇಳಿಕೆ ನೀಡುವೆ’ ಮಾಜಿ ಪ್ರಧಾನಿ ಉತ್ತರಿಸಿದರು. 

‘ಯಾಕೆ ಅವಸರ? ನಿನ್ನೆ ಸಹ ತರಾತುರಿಯಲ್ಲಿ ಶಿಕ್ಷೆ ಘೋಷಿಸಲಾಯಿತು’ ಎಂದು, ಹಿಂದಿನ ದಿನದ ತೀರ್ಪು ಉಲ್ಲೇಖಿಸಿದ ಇಮ್ರಾನ್‌ ಖಾನ್‌ ‘ನನ್ನ ವಕೀಲರು ಇನ್ನೂ ಬಂದಿಲ್ಲ. ಅವರು ಬಂದ ಮೇಲೆ ಹೇಳಿಕೆ ಸಲ್ಲಿಸುತ್ತೇನೆ. ಹಾಜರಾತಿಗಾಗಿ ಮಾತ್ರ ನ್ಯಾಯಾಲಯಕ್ಕೆ ಹಾಜರಾಗಿರುವೆ’ ಎಂದರು.

ನ್ಯಾಯಾಧೀಶರು, ‘ತಕ್ಷಣವೇ ತಮ್ಮ ಹೇಳಿಕೆ ದಾಖಲಿಸಬೇಕು. ನ್ಯಾಯಾಲಯದ ಸಮಯ ವ್ಯರ್ಥ ಮಾಡಬಾರದು’ ಎಂದು ಖಾನ್‌ಗೆ ಆದೇಶಿಸಿದರು.

‘ಸುಪ್ರೀಂ’ ಮೊರೆ ಹೋದ ಇಮ್ರಾನ್‌

ಫೆಬ್ರುವರಿ 8ರಂದು ನಡೆಯಲಿರುವ ದೇಶದ ಸಾರ್ವತ್ರಿಕ ಚುನಾವಣೆಗಾಗಿ ಪಂಜಾಬ್ ಪ್ರಾಂತ್ಯದ ಎರಡು ರಾಷ್ಟ್ರೀಯ ಅಸೆಂಬ್ಲಿ ಸ್ಥಾನಗಳಿಗೆ ಸಲ್ಲಿಸಿದ್ದ ತಮ್ಮ ನಾಮಪತ್ರಗಳನ್ನುತಿರಸ್ಕರಿಸಿರುವುದನ್ನು ಪ್ರಶ್ನಿಸಿ ಇಮ್ರಾನ್ ಖಾನ್ ಬುಧವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ.

ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ವರಿಷ್ಠರಾದ ಖಾನ್‌ ಅವರು, ಲಾಹೋರ್ ಮತ್ತು ಮಿಯಾನ್‌ವಾಲಿ ಜಿಲ್ಲೆಗಳ ಎರಡು ರಾಷ್ಟ್ರೀಯ ಅಸೆಂಬ್ಲಿ ಕ್ಷೇತ್ರಗಳಿಗೆ ಸಲ್ಲಿಸಿದ್ದ ನಾಮಪತ್ರಗಳನ್ನು ಕಳೆದ ತಿಂಗಳು ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ಕಾರಣಕ್ಕೆ ನೈತಿಕತೆ ಆಧಾರದ ಮೇಲೆ ತಿರಸ್ಕರಿಸಲಾಗಿತ್ತು.

ಎರಡು ಕ್ಷೇತ್ರಗಳಿಂದ ಚುನಾವಣೆಗೆ ಸ್ಪರ್ಧಿಸಲು ಅರ್ಹರೆಂದು ಘೋಷಿಸುವಂತೆ ಖಾನ್ ಅವರು ಸುಪ್ರೀಂ ಕೋರ್ಟ್‌ಗೆಮನವಿ ಮಾಡಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT