ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿಖ್‌ ಪೊಲೀಸ್‌ ಅಧಿಕಾರಿ ಗಡ್ಡ ಬೆಳೆಸುವುದಕ್ಕೆ ನಿರ್ಬಂಧ: ಭಾರತೀಯ ರಾಯಭಾರ ಆಕ್ಷೇಪ

Published : 11 ಆಗಸ್ಟ್ 2023, 14:21 IST
Last Updated : 11 ಆಗಸ್ಟ್ 2023, 14:21 IST
ಫಾಲೋ ಮಾಡಿ
Comments

ನ್ಯೂಯಾರ್ಕ್: ನ್ಯೂಯಾರ್ಕ್‌ ರಾಜ್ಯದ ಪೊಲೀಸ್‌ ಇಲಾಖೆಯ ಹಿರಿಯ ಶ್ರೇಣಿಯ ಸಿಖ್‌ ಅಧಿಕಾರಿಗೆ ಗಡ್ಡ ಬೆಳೆಸುವುದಕ್ಕೆ ನಿರ್ಬಂಧ ಹೇರಿರುವುದಕ್ಕೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿದೆ.

ಪೊಲೀಸ್‌ ಅಧಿಕಾರಿ ಚರಣ್‌ಜೋತ್‌ ತಿವಾನ ಎಂಬವರು ತಮ್ಮ ಮದುವೆಗಾಗಿ ಗಡ್ಡ ಬೆಳೆಸಲು ಅನುಮತಿ ಕೋರಿದ್ದರು. ಅನುಮತಿ ನಿರಾಕರಿಸಿದ ಪೊಲೀಸ್‌ ಇಲಾಖೆಯು, ಅಗತ್ಯ ಸಂದರ್ಭಗಳಲ್ಲಿ ಗ್ಯಾಸ್‌ ಮಾಸ್ಕ್‌ ಬಳಸಬೇಕಾದರೆ ಇದರಿಂದ ಅಪಾಯವುಂಟಾಗಬಹುದು ಎಂದು ಕಾರಣ ನೀಡಿತ್ತು. 

ಈ ವಿಚಾರವನ್ನು ಭಾರತ ಮೂಲದ ಅಧಿಕಾರಿಗಳು ನ್ಯೂಯಾರ್ಕ್‌ ಸ್ಟೇಟ್‌ ಗವರ್ನರ್‌ ಅವರ ಗಮನಕ್ಕೆ ತಂದಿದ್ದರು. ಅಮೆರಿಕದಲ್ಲಿನ ಭಾರತದ ರಾಯಭಾರಿ ತರಣ್‌ಜಿತ್‌ ಸಿಂಗ್ ಸಂಧು ಅವರು ಕೂಡ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದು, ಈ ವಿಷಯವನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಿದ್ದರು.

ಪೊಲೀಸ್‌ ಇಲಾಖೆಯ ನಡೆಗೆ ವಿರೋಧ ವ್ಯಕ್ತಪಡಿಸಿರುವ ನ್ಯೂಯಾರ್ಕ್‌ ರಾಜ್ಯದ ಕ್ವೀನ್ಸ್‌ ಕ್ಷೇತ್ರದ ಪ್ರತಿನಿಧಿ ಡೇವಿಡ್‌ ವೆಪ್ರಿನ್‌, ‘ಇದು ಧಾರ್ಮಿಕ ತಾರತಮ್ಯ‘ ಎಂದಿದ್ದಾರೆ.

‘ಇಂತಹ ತಾರತಮ್ಯ ಧೋರಣೆಯು ಕಾನೂನಿನ ಉಲ್ಲಂಘನೆಯಾಗಿದ್ದು, ಚರಣ್‌ಜೋತ್‌ ಅವರಿಗೆ ಗಡ್ಡ ಬೆಳೆಸಲು ಅನುಮತಿ ನೀಡಬೇಕು’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ (ಟ್ವಿಟರ್‌)ನಲ್ಲಿ ಹೇಳಿದ್ದಾರೆ.

‘ನ್ಯೂಯಾರ್ಕ್‌ ರಾಜ್ಯವು ದೇಶದಲ್ಲೇ ಅತ್ಯಂತ ವೈವಿಧ್ಯಮಯವಾಗಿದೆ. ಅಧಿಕಾರಿಗಳಿಗೆ ಅವರ ಧರ್ಮ ಮತ್ತು ನಂಬಿಕೆಯೊಂದಿಗೆ ಕೆಲಸ ಮಾಡಲು ಅವಕಾಶ ನೀಡದಿದ್ದರೆ. ಸಾಕಷ್ಟು ಪೊಲೀಸ್‌ ಅಧಿಕಾರಿಗಳು ನಮಗೆ ದೊರಕಲಾರರು’ ಎಂದು ಸಿಖ್‌ ಅಧಿಕಾರಿಗಳ ಸಂಘದ ಅಧ್ಯಕ್ಷ ಸಾರ್ಜೆಂಟ್ ಗುರುವಿಂದರ್‌ ಸಿಂಗ್‌ ಹೇಳಿರುವುದಾಗಿ ‘ಸಿಬಿಎಸ್‌ ನ್ಯೂಸ್‌’ ವರದಿ ಮಾಡಿದೆ.

‘ಅಧಿಕಾರಿಗಳು ಗಡ್ಡ ಬೆಳೆಸುವ ವಿಚಾರವಾಗಿ ನಾವು ಈಚೆಗೆ ಮೂರ್ಗಸೂಚಿಯನ್ನು ಪರಿಷ್ಕರಿಸಿದ್ದೇವೆ. ಈ ಕುರಿತು ಸಮಿತಿಯೊಂದು ಪರಿಶೀಲಿಸುತ್ತಿದೆ’ ಎಂದು ನ್ಯೂಯಾರ್ಕ್‌ ಪೊಲೀಸ್‌ ಇಲಾಖೆಯ ವಕ್ತಾರರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT