ಟೆಲ್ ಅವೀವ್ (ಎ.ಪಿ): ಇರಾನ್ ಮತ್ತು ಇಸ್ರೇಲ್ ನಡುವಣ ಸಂಘರ್ಷ, ಕ್ಷಿಪಣಿಗಳ ದಾಳಿ ಆರಂಭವಾಗಿ ಒಂದು ವಾರ ಗತಿಸಿದ್ದು, ಮತ್ತಷ್ಟು ತೀವ್ರಗೊಳ್ಳುತ್ತಿದೆ. ಇಂತಹ ಪರಿಸ್ಥಿತಿ ಮಧ್ಯೆಯೂ, ಉಭಯ ದೇಶಗಳ ನಡುವಣ ಉದ್ವಿಗ್ನ ಶಮನಗೊಳಿಸುವ ಯತ್ನಗಳೂ ಚುರುಕು ಪಡೆದಿವೆ.
ಸಂಘರ್ಷ ಶಮನಕ್ಕೆ ರಾಜತಾಂತ್ರಿಕ ಯತ್ನ ನಡೆದಿದೆ ಎಂದು ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಇರಾನ್ ವಿರುದ್ಧದ ದಾಳಿಯಲ್ಲಿ ಅಮೆರಿಕ ಸೇನೆ ನೇರವಾಗಿ ಭಾಗವಹಿಸುವ ಬಗ್ಗೆ ಎರಡು ವಾರಗಳಲ್ಲಿ ನಿರ್ಧರಿಸಲಾಗುವುದು’ ಎಂದಿದ್ದಾರೆ.
ಇರಾನ್‌ನಲ್ಲಿ ಬೆಟ್ಟಗುಡ್ಡಗಳ ನಡುವೆ, ಭೂಗರ್ಭದಲ್ಲಿ ಸ್ಥಾಪಿಸಿರುವ ಅತಿ ಭದ್ರತೆಯ, ಫೋರ್ಡೊ ಯುರೇನಿಯಂ ಸಂಸ್ಕರಣ ಘಟಕದ ಮೇಲೆ ದಾಳಿ ಮಾಡುವ ಸಾಧ್ಯತೆ ಕುರಿತೂ ತೀರ್ಮಾನಿಸಲಾಗುವುದು ಎಂದು ಹೇಳಿದ್ದಾರೆ.
ಅಣ್ವಸ್ತ್ರ ಕಾರ್ಯಕ್ರಮ ಕುರಿತು ಒಪ್ಪಂದಕ್ಕೆ ಬರಲು ಇರಾನ್‌ಗೆ ಮತ್ತೊಂದು ಅವಕಾಶ ನೀಡುತ್ತೇವೆ. ಅಲ್ಲದೆ, ಇರಾನ್ ವಿರುದ್ಧದ ದಾಳಿಯಲ್ಲಿ ಅಮೆರಿಕ ಸೇನೆ ನೇರವಾಗಿ ಭಾಗವಹಿಸುವ ಕುರಿತು ನಿರ್ಧರಿಸುತ್ತೇವೆ ಎಂದಿದ್ದಾರೆ.
ಸಂಘರ್ಷ ಶಮನ ಕುರಿತು ಮಾತುಕತೆ ಜಿನೀವಾದಲ್ಲಿ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ತೆರಳಿದ್ದಾರೆ. ಐರೋಪ್ಯ ಒಕ್ಕೂಟದ ಹಿರಿಯ ರಾಜತಾಂತ್ರಿಕರು, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿಯ ವಿದೇಶಾಂಗ ಸಚಿವರೂ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅರಾಗ್ಚಿ ಭಾಗವಹಿಸುವಿಕೆಯನ್ನು ಇರಾನ್ ದೃಢಪಡಿಸಿದೆ.
ಈ ಮಧ್ಯೆ, ಬಿಕ್ಕಟ್ಟು ಶಮನದ ರಾಜಿಸೂತ್ರ ಕುರಿತು ಶ್ವೇತಭವನದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ರಾಯಭಾರಿ ಸ್ಟೀವ್ ವಿಟ್‌ಕಾಫ್ ಜೊತೆ ಚರ್ಚಿಸಿದ್ದಾಗಿ ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ. ಮಾತುಕತೆಯ ವಿವರ ನೀಡಿಲ್ಲ.
ಇರಾನ್ ಮತ್ತು ಇಸ್ರೇಲ್ ನಡುವೆ ಅಘೋಷಿತ ಯುದ್ಧ ಜೂನ್ 13ರಂದು ಆರಂಭವಾಗಿದ್ದು, ಉಭಯ ದೇಶಗಳು ಪರಸ್ಪರರ ನೆಲೆಗಳಲ್ಲಿ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ಸೇನಾ ನೆಲೆ ಗುರಿಯಾಗಿ ವಾಯುದಾಳಿ ನಡೆಸಿವೆ.
ವಾಷಿಂಗ್ಟನ್ ಮೂಲದ ಮಾನವ ಹಕ್ಕುಗಳ ಸಂಘಟನೆಯ ಪ್ರಕಾರ, ಇರಾನ್‌ನಲ್ಲಿ 263 ನಾಗರಿಕರು ಸೇರಿ 657 ಜನರು ಹತರಾಗಿದ್ದಾರೆ. 2 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪ್ರತೀಕಾರವಾಗಿ ಇರಾನ್ ಸುಮಾರು 450 ಕ್ಷಿಪಣಿಗಳು, 1000 ಡ್ರೋನ್‌ಗಳನ್ನು ಪ್ರಯೋಗಿಸಿದೆ. ಹೆಚ್ಚಿನ ಕ್ಷಿಪಣಿಗಳ ತಡೆದುರುಳಿಸಲಾಗಿದೆ. ದಾಳಿಯಿಂದ ಇಸ್ರೇಲ್‌ನಲ್ಲಿ 24 ಜನರು ಸತ್ತಿದ್ದು, ನೂರಾರು ಜನರು ಗಾಯಗೊಂಡಿದ್ದಾರೆ.
ಅಮೆರಿಕಕ್ಕೆ ಏನು ಅನುಕೂಲವೋ ಅದನ್ನು ಟ್ರಂಪ್ ಮಾಡುತ್ತಾರೆ. ಈಗಾಗಲೇ ನಮಗೆ ಅವರು ಸಾಕಷ್ಟು ನೆರವು ನೀಡುತ್ತಿದ್ದಾರೆ– ಬೆಂಜಮಿನ್ ನೆತನ್ಯಾಹು, ಪ್ರಧಾನಿ ಇಸ್ರೇಲ್
ಭವಿಷ್ಯದಲ್ಲಿ ಇರಾನ್ ಜೊತೆಗೆ ಸಂಧಾನ ಮಾತುಕತೆ ಅಸಾಧ್ಯ ಎಂಬ ಅಂಶವನ್ನು ಆಧರಿಸಿ ಸೇನಾ ದಾಳಿಯಲ್ಲಿ ಅಮೆರಿಕ ನೇರವಾಗಿ ಭಾಗವಹಿಸುವ ಕುರಿತು 2 ವಾರದಲ್ಲಿ ನಿರ್ಧರಿಸುತ್ತೇನೆ– ಡೊನಾಲ್ಡ್ ಟ್ರಂಪ್, ಅಧ್ಯಕ್ಷ ಅಮೆರಿಕ
ಇಸ್ರೇಲ್ ವಾಯುದಾಳಿ ನಿಲ್ಲಿಸುವವರೆಗೂ ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲ. ಅಮೆರಿಕ ಈಗಾಗಲೇ ಇಸ್ರೇಲ್ ಜೊತೆ ಕೈಜೋಡಿಸಿದೆ. ಇರಾನ್ ಬಗ್ಗೆ ಮಾತನಾಡುವಾಗ ಟ್ರಂಪ್ ‘ನಾವು’ ಎಂದೇ ಬಳಸುತ್ತಿದ್ದಾರೆ.– ಅಬ್ಬಾಸ್ ಅರಾಗ್ಚಿ, ಇರಾನ್‌ನ ವಿದೇಶಾಂಗ ಸಚಿವ
- ದಿನದ ಬೆಳವಣಿಗೆಗಳು...
* ಇಸ್ರೇಲ್ ದಾಳಿಯಿಂದ ವಾರದ ಹಿಂದೆ ತೀವ್ರವಾಗಿ ಗಾಯಗೊಂಡಿದ್ದ ಅಲಿ ಶಮ್‌ಖಾನಿ ಆರೋಗ್ಯ ಸ್ಥಿರವಾಗಿದೆ. ‘ನಾನು ಜೀವಂತವಾಗಿದ್ದೇನೆ. ಹೋರಾಡಲು ಸಜ್ಜಾಗಿದ್ದೇನೆ’ ಎಂದು ಹೇಳಿಕೆ ನೀಡಿದ್ದಾರೆ.
* ಇಸ್ರೇಲ್ ಕ್ಷಿಪಣಿ ದಾಳಿಯಿಂದ ಇರಾನ್‌ನ ‘ಅರಾಕ್ ಹೆವಿ ವಾಟರ್ ರಿಯಾಕ್ಟರ್’ ಘಟಕವು ತೀವ್ರವಾಗಿ ಹಾನಿಗೊಂಡಿದೆ ಎಂದು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯು ಶುಕ್ರವಾರ ತಿಳಿಸಿದೆ.
*ಇಸ್ರೇಲ್ ದಕ್ಷಿಣ ಭಾಗದ ಪ್ರಮುಖ ಆಸ್ಪತ್ರೆ ಮತ್ತು ಜನವಸತಿ ಕಟ್ಟಡ ಗುರಿಯಾಗಿ ಇರಾನ್ ಕ್ಷಿಪಣಿ ದಾಳಿ ನಡಸಿದ್ದು ಕನಿಷ್ಠ 200 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
* ಇರಾನ್–ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಬಲ್ಗೇರಿಯಾ ಇಸ್ರೇಲ್‌ನಿಂದ 80 ಪ್ರಜೆಗಳನ್ನು ಕರೆಸಿಕೊಂಡಿದೆ. ಚೀನಾ ಇಸ್ರೇಲ್‌ನಿಂದ 1600 ಇರಾನ್‌ನಿಂದ ನೂರಾರು ಪ್ರಜೆಗಳನ್ನು ವಾಪಸು ಕರೆಸಿದೆ. ಜರ್ಮನಿಯ 345 ಪ್ರಯಾಣಿಕರು ಎರಡು ವಿಶೇಷ ವಿಮಾನಗಳಲ್ಲಿ ಟೆಲ್‌ಅವೀವ್‌ನಿಂದ ನಿರ್ಗಮಿಸಿದ್ದಾರೆ.
* ಐರೋಪ್ಯ ಒಕ್ಕೂಟವು ತನ್ನ ಸದಸ್ಯ ರಾಷ್ಟ್ರಗಳಿಗೆ ಸೇರಿ 400 ಪ್ರಜೆಗಳ ಸುರಕ್ಷಿತ ನಿರ್ಗಮನಕ್ಕಾಗಿ ನೆರವು ನೀಡಿದೆ. ವಿಮಾನಯಾನ ವೆಚ್ಚದ ಶೇ 75ರಷ್ಟನ್ನು ಒಕ್ಕೂಟ ಭರಿಸಲಿದೆ ಎಂದು ಹೇಳಿಕೆ ತಿಳಿಸಿದೆ.
ಕ್ಷಿಪಣಿಗಳ ದಾಳಿ ಅವ್ಯಾಹತ ಹಾನಿ
ಟೆಲ್‌ಅವೀವ್ (ಎ.ಪಿ): ಶುಕ್ರವಾರವೂ ಇಸ್ರೇಲ್ ಮತ್ತು ಇರಾನ್ ಪರಸ್ಪರದ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳ ದಾಳಿ ನಡೆಸಿದ್ದು ಉಭಯ ಕಡೆಗಳಲ್ಲೂ ತೀವ್ರತರನಾದ ಹಾನಿಗಳಾಗಿವೆ. ಇರಾನ್‌ನ ಕೈಗಾರಿಕಾ ವಲಯದ ಕ್ಷಿಪಣಿ ತಯಾರಿಕಾ ಘಟಕದ ಮೇಲೆ 60ಕ್ಕೂ ಹೆಚ್ಚು ವಿಮಾನ ಬಳಸಿ ದಾಳಿ ನಡೆಸಿದ್ದಾಗಿ ಇಸ್ರೇಲ್ ಹೇಳಿದೆ. ರಕ್ಷಣಾ ಸಂಶೋಧನೆ ಕೇಂದ್ರದ ಮೇಲೂ ದಾಳಿ ನಡೆದಿದೆ ಎಂದು ತಿಳಿಸಿದೆ.
ಈ ಘಟಕದಲ್ಲೇ ಅಣ್ವಸ್ತ್ರ ಶಸ್ತ್ರಾಸ್ತ್ರಗಳ ಅಭಿವೃದ್ಧಿ ಪರೀಕ್ಷೆ ನಡೆಯುತ್ತಿದೆ ಎಂದು ಅಮೆರಿಕ ಹಿಂದೆ ಹೇಳಿತ್ತು. ಸಂಘರ್ಷ ಆರಂಭವಾಗಿ ವಾರ ಕಳೆದಿದೆ. ವಾಯುಗಡಿಯ ರಕ್ಷಣೆಯ ಜೊತೆಗೆ ದಾಳಿಯನ್ನು ತೀವ್ರಗೊಳಿಸಿದ್ದೇವೆ ಎಂದು ಇಸ್ರೇಲ್‌ನ ಸೇನಾ ವಕ್ತಾರ ಬ್ರಿಗೆಡಿಯರ್ ಜನರಲ್ ಎಫಿ ಡೆಫ್ರಿನ್ ತಿಳಿಸಿದ್ದಾರೆ.
ಇತ್ತ ಇರಾನ್‌ನ ಕ್ಷಿಪಣಿ ದಾಳಿಯಿಂದಾಗಿ ಇಸ್ರೇಲ್‌ನಲ್ಲಿ ಹಲವು ವಸತಿ ಕಟ್ಟಡಗಳಿಗೆ ಹಾನಿಯಾಗಿದ್ದು ಆತಂಕ ಮೂಡಿದೆ. ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೀರ್‌ಶೆಬಾ ನಗರದ ಸೊರೊಕಾ ವೈದ್ಯಕೀಯ ಕೇಂದ್ರದಲ್ಲಿ ಮೇಲಿನ ದಾಳಿಯಲ್ಲಿ 80 ರೋಗಿಗಳು ಗಾಯಗೊಂಡರು. ಟೆಹ್ರಾನ್ ಮತ್ತು ಇರಾನ್‌ನ ಪಶ್ಚಿಮ ವಲಯದ ಹಲವು ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆದಿದೆ. ಕ್ಯಾಸ್ಪಿಯನ್ ತೀರ ಭಾಗದ ರಶ್ತ್ ನಗರದ ಮೇಲೆ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಆದರೆ ಹಾನಿ ಕುರಿತು ವಿವರಗಳು ಲಭ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.