ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೈರೂತ್‌ನಲ್ಲಿ ಭಾರಿ ದಾಳಿ | ಹಿಜ್ಬುಲ್ಲಾ ಮುಖ್ಯಸ್ಥನ ಹತ್ಯೆ: ಇಸ್ರೇಲ್

Published : 28 ಸೆಪ್ಟೆಂಬರ್ 2024, 10:26 IST
Last Updated : 28 ಸೆಪ್ಟೆಂಬರ್ 2024, 10:26 IST
ಫಾಲೋ ಮಾಡಿ
Comments

ಬೈರೂತ್‌: ಬೈರೂತ್‌ ನಗರದ ದಕ್ಷಿಣ ಉಪನಗರದಲ್ಲಿ ನಡೆಸಿದ ವಾಯುದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದು ಹಾಕಲಾಗಿದೆ ಎಂದು ಇಸ್ರೇಲ್ ಸೇನೆ ಶನಿವಾರ ತಿಳಿಸಿದೆ.‌

‘ಹಸನ್ ನಸ್ರಲ್ಲಾ ಸಾವಿಗೀಡಾಗಿದ್ದಾನೆ’ ಎಂದು ಇಸ್ರೇಲ್ ಸೇನೆಯ ವಕ್ತಾರ ಲೆಫ್ಟಿನೆಂಟ್ ಕರ್ನಲ್ ನಾಡವ್ ಶೋಷನಿ ‘ಎಕ್ಸ್‌’ನಲ್ಲಿ ಘೋಷಣೆ ಮಾಡಿದ್ದಾರೆ.

‘ಶುಕ್ರವಾರ ರಾತ್ರಿ ಬೈರೂತ್‌ನಲ್ಲಿ ನಡೆದ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥನನ್ನು ಕೊಂದು ಹಾಕಲಾಗಿದೆ’ ಎಂದು ಇಸ್ರೇಲ್ ಸೇನೆಯ ಮತ್ತೊಬ್ಬ ವಕ್ತಾರ ಕ್ಯಾಪ್ಟನ್‌ ಡೇವಿಡ್ ಅವ್ರಹಮ್ ತಿಳಿಸಿದ್ದಾರೆ.

ಒಂದು ವೇಳೆ ಆತನ ಸಾವು ಖಚಿತವಾಗಿದ್ದೇ ಆದಲ್ಲಿ‌ ‌‌‌1992ರಲ್ಲಿ ಲೆಬನಾನ್‌ನಲ್ಲಿ ಅಸ್ಥಿರತೆ ಉಂಟು ಮಾಡುತ್ತಿರುವ ಇರಾನ್ ಬೆಂಬಲಿತ ಹಿಜ್ಬುಲ್ಲಾಗೆ ದೊಡ್ಡ ಹೊಡೆತ ಬಿದ್ದಂತಾಗಲಿದೆ.

ನಸ್ರಲ್ಲಾ ಶುಕ್ರವಾರದಿಂದ ಕಾಣೆಯಾಗಿದ್ದಾನೆ ಎಂದು ಹಿಜ್ಬುಲ್ಲಾದ ಆಪ್ತ ಮೂಲಗಳು ತಿಳಿಸಿವೆ.

ಅಪಾರ ಸಂಖ್ಯೆಯಲ್ಲಿ ಶಿಯಾ ಮುಸ್ಲಿಮರ ಬೆಂಬಲ ಹೊಂದಿರುವ ನಸ್ರಲ್ಲಾ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪ. ಲೆಬನಾನ್‌ನಲ್ಲಿ ಯುದ್ಧ ಅಥವಾ ಶಾಂತಿ ಸ್ಥಾಪಿಸಲು ಅಧಿಕಾರ ಹೊಂದಿರುವ ಏಕೈಕ ವ್ಯಕ್ತಿ ಎಂದೇ ಗುರುತಿಸಿಕೊಂಡಿದ್ದಾರೆ.

ಸಾಮಾನ್ಯವಾಗಿ ಮೇಲ್ದರ್ಜೆಯ ನಾಯಕರು ಸಾವಿಗೀಡಾದರೆ, ಅದರ ಘೋಷಣೆಯನ್ನು ಅದೇ ದಿನ ಹಿಜ್ಬುಲ್ಲಾ ಮಾಡುತ್ತದೆ. ಆದರೆ ನಸ್ರಲ್ಲಾನ ಹತ್ಯೆ ಕುರಿತ ಯಾವುದೇ ಅಧಿಕೃತ ಪ್ರಕಟಣೆ ಹಿಜ್ಬುಲ್ಲಾದಿಂದ ಬಂದಿಲ್ಲ.

‘ಹಿಜ್ಬುಲ್ಲಾದ ಸೆಕ್ರಟರಿ ಜನರಲ್ ಆಗಿ ಕಳೆದ 32 ವರ್ಷಗಳಿಂದ ಇದ್ದ ಹಸನ್ ನಸ್ರಲ್ಲಾ, ಸುಮಾರು ಇಸ್ರೇಲಿ ನಾಗರಿಕರು ಹಾಗೂ ಸೈನಿಕರ ಹತ್ಯೆಗೆ ಕಾರಣನಾಗಿದ್ದ. ಆತ ಸಾವಿರಾರು ಉಗ್ರವಾದ ಚಟುವಟಿಕೆ ನಡೆಸಲು ಸಂಚು ರೂಪಿಸುವಲ್ಲಿ ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವುದಕ್ಕೂ ಕಾರಣನಾಗಿದ್ದ’ ಎಂದು ಇಸ್ರೇಲ್ ಸೇನೆಯ ‍ಪ್ರಕಟಣೆಯಲ್ಲಿ ಹೇಳಲಾಗಿದೆ.

‘ಇದರ ಸಂದೇಶ ಸರಳ. ಇಸ್ರೇಲ್ ಜನರಿಗೆ ಬೆದರಿಕೆ ಹಾಕುವ ಯಾರನ್ನೂ ನಾವು ಬಿಡುವುದಿಲ್ಲ’ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹೆರ್ಜಿ ಹಲೆವಿ ಹೇಳಿದ್ದಾರೆ.

ದಾಳಿಯಲ್ಲಿ ಇಸ್ರೇಲ್ ಕಮಾಂಡ್‌ರಗಳಾದ ಮುಹಮ್ಮದ್ ಅಲಿ ಹಾಗೂ ಅಲಿ ಕರ್ಕೆರೆಯನ್ನೂ ಕೊಂದು ಹಾಕಲಾಗಿದೆ ಎಂದು ಸೇನೆ ತಿಳಿಸಿದೆ. ದಾಳಿಯಲ್ಲಿ ಡಜನ್‌ಗೂ ಅಧಿಕ ಕಟ್ಟಡಗಳು ಧ್ವಂಸಗೊಂಡಿವೆ.

ದಾಳಿ ನಡೆದ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚಿದ್ದು, ಜನರು ಭೀತಿಗೀಡಾಗಿದ್ದಾರೆ. ಸಾವಿರಾರು ಮಂದಿ ಇಡೀ ರಾತ್ರಿ ಮನೆಯ ಹೊರಗೆ ಕಾಲ ಕಳೆದಿದ್ದಾರೆ.

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT