ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪಾನ್ ಹಡಗಿನಿಂದ ಇಂಧನ ಸೋರಿಕೆ: ಪರಿಸರ ತುರ್ತುಪರಿಸ್ಥಿತಿ ಘೋಷಿಸಿದ ಮಾರಿಷಸ್‌

Last Updated 8 ಆಗಸ್ಟ್ 2020, 11:37 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಜಪಾನ್‌ನ ಎಂ.ವಿ.ವಕಾಶಿಯೊ ಎಂಬ ಹೆಸರಿನ ಹಡಗಿನಿಂದ ಇಂಧನ ಸೋರಿಕೆಯಾಗಿರುವುದು ತಿಳಿಯುತ್ತಿದ್ದಂತೆ ಮಾರಿಷಸ್‌ ಸರ್ಕಾರವು ಶುಕ್ರವಾರ ಪರಿಸರ ತುರ್ತು ಪರಿಸ್ಥಿತಿ ಘೋಷಿಸಿದೆ.

‘ಇತ್ತೀಚೆಗೆ ತನ್ನ ಆಗ್ನೇಯ ಕರಾವಳಿ ಮೂಲಕ ಸಾಗಿರುವ ವಕಾಶಿಯೊ ಹಡಗಿನಲ್ಲಿ ಸುಮಾರು 4,000 ಟನ್‌ಗಳಷ್ಟು ಇಂಧನವಿತ್ತು. ನಮ್ಮ ಪರಿಸರ ಪ್ರದೇಶದ ಸಮೀಪದಲ್ಲೇ ಇಂಧನ ಸೋರಿಕೆಯಾಗಿರುವುದು ಉಪಗ್ರಹ ಚಿತ್ರಗಳಿಂದ ಸ್ಪಷ್ಟವಾಗಿದೆ’ ಎಂದು ಮಾರಿಷಸ್‌ ಸರ್ಕಾರ ತಿಳಿಸಿದೆ.

‘ನೀರಿನಲ್ಲಿ ಅಪಾರ ಪ್ರಮಾಣದ ಇಂಧನ ಬೆರೆತಿದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂಬುದೇ ನಮಗೆ ತೋಚುತ್ತಿಲ್ಲ. ಹೀಗಾಗಿ ಫ್ರಾನ್ಸ್‌ ಸರ್ಕಾರದ ನೆರವು ಕೋರಿದ್ದೇವೆ. ಆ ದೇಶದ ಅಧ್ಯಕ್ಷ ಎಮ್ಯಾನುವೆಲ್‌‌ ಮ್ಯಾಕ್ರನ್‌ ಅವರಿಗೂ ಮನವಿ ಮಾಡಿದ್ದೇವೆ’ ಎಂದು ಮಾರಿಷಸ್‌ನ ಪ್ರಧಾನ ಮಂತ್ರಿ ಪ್ರವಿಂದ್‌ ಜುಗ್ನಾಥ್‌ ತಿಳಿಸಿದ್ದಾರೆ.

‘ಇಂಧನ ಸೋರಿಕೆಯಿಂದ ಬ್ಲೂ ಬೇ ಮರಿನ್‌ ಪಾರ್ಕ್‌ ಹಾಗೂ ಇತರ ಪ್ರದೇಶಗಳ ನೀರು ರಾಸಾಯನಿಕಯುಕ್ತವಾಗಿದೆ. ನಾವೀಗ ಪರಿಸರ ಬಿಕ್ಕಟ್ಟು ಎದುರಿಸುತ್ತಿದ್ದೇವೆ’ ಎಂದು ಮಾರಿಷಸ್‌ನ ಪರಿಸರ ಸಚಿವ ಕ್ಯಾವಿ ರಮಣೊ ಹೇಳಿದ್ದಾರೆ.

‘ಈ ಹಡಗು ಜಪಾನ್‌ನ ಒಕಿಯೊ ಮಾರಿಟೈಮ್‌ ಕಾರ್ಪೊರೇಷನ್‌ ಆ್ಯಂಡ್‌ ನಾಗಸಾಕಿ ಶಿಪ್ಪಿಂಗ್‌ ಕಂಪನಿ‌ ಲಿಮಿಟೆಡ್‌ಗೆ ಸೇರಿದ್ದಾಗಿದೆ. ಈ ಕಂಪನಿಯ ವಿರುದ್ಧ ನಿರ್ಲಕ್ಷ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಹಡಗು ಜುಲೈ 25ರಂದು ನಮ್ಮ ಆಗ್ನೇಯ ಕರಾವಳಿ ಭಾಗದಲ್ಲಿ ಸಂಚರಿಸಿದೆ’ ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಹಡಗಿನಿಂದ ದೊಡ್ಡ ಪ್ರಮಾಣದಲ್ಲಿ ಡೀಸೆಲ್‌ ಮತ್ತು ತೈಲ ಸೋರಿಕೆಯಾಗಿದ್ದು ಅದು ನೀರಿನಲ್ಲೂ ಬೆರೆತಿದೆ. ಇದರಿಂದ ಜೀವ ಸಂಕುಲಕ್ಕೆ ಅಪಾಯ ಎದುರಾಗಿದೆ. ಮಾರಿಷಸ್‌ನ ಆರ್ಥಿಕತೆ ಹಾಗೂ ಆಹಾರ ಭದ್ರತೆಯ ಮೇಲೆ ಇದು ಭೀಕರ ಪರಿಣಾಮ ಉಂಟುಮಾಡಲಿದೆ. ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಲಿದೆ’ ಎಂದು ಗ್ರೀನ್‌ಪೀಸ್‌ ಆಫ್ರಿಕಾ ಸಂಸ್ಥೆಯ ಮ್ಯಾನೇಜರ್‌ (ಕ್ಲೈಮೇಟ್‌ ಆ್ಯಂಡ್‌ ಎನರ್ಜಿ) ಹ್ಯಾಪಿ ಖಾಂಬುಲೆ ಪ್ರಕಟಣೆಯಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT