ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿ: ಪತ್ತೆಯಾಗದ ಐವರು ಭಾರತೀಯರು

ಆರೋಪಿ ವಿರುದ್ಧ ಹತ್ಯೆ ಪ್ರಕರಣ ದಾಖಲು * ಕೇರಳದ ಮಹಿಳೆ ಸಾವು
Last Updated 16 ಮಾರ್ಚ್ 2019, 20:10 IST
ಅಕ್ಷರ ಗಾತ್ರ

ಕ್ರೈಸ್ಟ್‌ಚರ್ಚ್‌/ತಿರುವನಂತಪುರ/ನವದೆಹಲಿ (ಪಿಟಿಐ/ಎಎಫ್‌ಐ): ನ್ಯೂಜಿಲೆಂಡ್‌ನ ಕ್ರೈಸ್ಟ್‌ಚರ್ಚ್‌ ನಗರದ ಅಲ್‌ನೂರ್‌ ಮತ್ತು ಲಿನ್‌ವುಡ್‌ ಮಸೀದಿಗಳ ಮೇಲೆ ದಾಳಿ ವೇಳೆ ನಾಪತ್ತೆಯಾಗಿರುವ ಐವರು ಭಾರತೀಯರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ನ್ಯೂಜಿಲೆಂಡ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ದಾಳಿಯಲ್ಲಿ ಗಾಯಗೊಂಡಿದ್ದ ಇಬ್ಬರು ಭಾರತೀಯರಿಗೆ ಈಗ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಚೇರಿ ತಿಳಿಸಿದೆ. ಬಂದೂಕುಧಾರಿ ಆಸ್ಟ್ರೇಲಿಯಾದ ಬ್ರೆಂಟನ್‌ ಟೆರ್ರಂಟ್‌ ಶುಕ್ರವಾರ ಮಸೀದಿಗೆ ನುಗ್ಗಿ ಗುಂಡಿನ ದಾಳಿ 49 ಜನರ ಸಾವಿಗೆ ಕಾರಣನಾಗಿದ್ದ.

ದಾಳಿಯಲ್ಲಿ ಕೇರಳದ ತ್ರಿಶೂರ್‌ ಜಿಲ್ಲೆಯ ಕೊಡುಂಗಲ್ಲೂರ್‌ ಜಿಲ್ಲೆಯ ಅಂಜಿ (27) ಎನ್ನುವವರು ಸಾವಿಗೀಡಾಗಿದ್ದರೆ. ಒಂದು ವರ್ಷದ ಹಿಂದೆ ನ್ಯೂಜಿಲೆಂಡ್‌ಗೆ ತೆರಳಿದ್ದ ಅಂಜಿ, ಸ್ನಾತಕೋತ್ತರ ಕೃಷಿ ಪದವಿಗಾಗಿ ಅಧ್ಯಯನ ಮಾಡುತ್ತಿದ್ದರು. ಅಂಜಿ ಅವರ ಪತಿ ನಝರ್‌ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ದಾಳಿಯಲ್ಲಿ ಅಂಜಿ ಸಾವಿಗೀಡಾಗಿರುವ ಮಾಹಿತಿಯನ್ನು ನಝರ್‌ ಅವರೇ ಕುಟುಂಬದ ಸದಸ್ಯರಿಗೆ ಶನಿವಾರ ನೀಡಿದ್ದಾರೆ.

‘ಗುಂಡಿನ ದಾಳಿಗೆ ಒಳಗಾದವರು ನನ್ನ ಮೇಲೆ ಬಿದ್ದಿದ್ದರಿಂದ ಸಾವಿನ ದವಡೆಯಿಂದ ಪಾರಾಗಿದ್ದೇನೆ’ ಎಂದು ನಝರ್‌ ತಿಳಿಸಿದ್ದಾರೆ.

ಸಹಾಯವಾಣಿ: ‘ದಾಳಿಯಿಂದ ತೊಂದರೆಗೊಳಗಾದ ಭಾರತೀಯರ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ. ಅಗತ್ಯವಿರುವವರು021803899 ಮತ್ತು 021850033 ಸಂಖ್ಯೆ ಸಂಪರ್ಕಿಸಬಹುದು’ ಎಂದು ಭಾರತೀಯ ರಾಯಭಾರ ಕಚೇರಿಯ ಸಂಜೀವ್‌ ಕೊಹ್ಲಿ ಟ್ವೀಟ್‌ ಮಾಡಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಸುಮಾರು 2 ಲಕ್ಷ ಭಾರತೀಯರು ಮತ್ತು ಭಾರತೀಯ ಮೂಲದವರು ನೆಲೆಸಿದ್ದಾರೆ. ಅಲ್ಲದೆ, 30 ಸಾವಿರಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ನ್ಯೂಜಿಲೆಂಡ್‌ನಲ್ಲಿದ್ದಾರೆ.

ಹತ್ಯೆ ಪ್ರಕರಣ ದಾಖಲು:ಮಸೀದಿ ದಾಳಿಕೋರನ ವಿರುದ್ಧ ಇಲ್ಲಿನ ನ್ಯಾಯಾಲಯದಲ್ಲಿ ಹತ್ಯೆ ಪ್ರಕರಣ ದಾಖಲಾಗಿದೆ.ಬಂಧನಕ್ಕೊಳಗಾಗಿರುವ ದಾಳಿ
ಕೋರ ಬ್ರೆಂಟನ್‌ ಟೆರ್ರಂಟ್‌ನಿಗೆ ಬೇಡಿ ಹಾಕಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು. ಸದ್ಯ, ಅವನ ವಿರುದ್ಧ ಒಂದೇ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚುವರಿ ಆರೋಪಪಟ್ಟಿ ದಾಖಲಾಗುವ ನಿರೀಕ್ಷೆ ಇದೆ. ಆರೋಪಿ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಅವನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಮುಂದಿನ ವಿಚಾರಣೆ ಏಪ್ರಿಲ್‌ 5ಕ್ಕೆ ನಡೆಯಲಿದೆ.

ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಹಾಜರಿದ್ದ ಮಾಧ್ಯಮದವರತ್ತ ಪದೇ ಪದೇ ನೋಡುತ್ತಿದ್ದ ಟೆರ್ರಂಟ್‌, ಅವರತ್ತ ಹುಸಿನಗೆ ಬೀರುತ್ತಿದ್ದ. ಸುರಕ್ಷತೆ ದೃಷ್ಟಿಯಿಂದ ನ್ಯಾಯಾಲಯದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

‘ನನ್ನ ಮಗನನ್ನು ಹುಡುಕಿಕೊಡಿ’
ಹೈದರಾಬಾದ್‌: ‘ನ್ಯೂಜಿಲೆಂಡ್‌ನಲ್ಲಿ ಮಸೀದಿ ಮೇಲೆ ದಾಳಿ ನಂತರ ನನ್ನ ಮಗ ಕಾಣಿಸುತ್ತಿಲ್ಲ. ದಯವಿಟ್ಟು ಹುಡುಕಿಕೊಡಿ’ ಎಂದು ಮೊಹಮ್ಮದ್‌ ಸಯೀದುದ್ದೀನ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

‘ನನ್ನ ಮಗ ಫರ್ಹಾಜ್‌ ಅಹ್ಸಾನ್‌ ಕ್ರೈಸ್ಟ್‌ಚರ್ಚ್‌ನಲ್ಲಿರುವ ಮಸೀದಿಗೆ ಶುಕ್ರವಾರ ಪ್ರಾರ್ಥನೆಗೆ ತೆರಳಿದ್ದ. ನಂತರ, ಅವನು ಹಿಂದಿರುಗಿಲ್ಲ’ ಎಂಬುದಾಗಿ ಸಯೀದುದ್ದೀನ್‌ ಅಳಲು ತೋಡಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವೆಬ್‌ಸೈಟ್‌ ವರದಿ ಮಾಡಿದೆ.

‘ನ್ಯೂಜಿಲೆಂಡ್‌ನಲ್ಲಿರುವ ಮಗನ ಪತ್ನಿಗೆ ಕರೆ ಮಾಡಿ ವಿಚಾರಿಸಿದರೂ, ಯಾವುದೇ ಮಾಹಿತಿ ಸಿಕ್ಕಿಲ್ಲ’ ಎಂದು ಅವರು ಹೇಳಿದ್ದಾರೆ.

ಅಹ್ಸಾನ್‌ ನ್ಯೂಜಿಲೆಂಡ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿದ್ದಾರೆ. 2010ರಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿನ ಅಕ್ಲಂಡ್‌ ವಿಶ್ವವಿದ್ಯಾಲಯದಿಂದ 2010ರಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

‘ಬದುಕುಳಿಸಿದ ವ್ಯಕ್ತಿಗೆ ಸಲಾಂ’
ಕ್ರೈಸ್ಟ್‌ಚರ್ಚ್‌ (ನ್ಯೂಜಿಲೆಂಡ್‌):‘ಅಬ್ಬ ಅದೊಂದು ಮೈ ನಡುಗಿಸುವ ಕ್ಷಣ. ಬಂದೂಕುಧಾರಿಯೊಬ್ಬ ಮಸೀದಿಯ ಒಳಹೊಕ್ಕು ಇನ್ನೇನು ಗುಂಡು ಹಾರಿಸಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಬ್ಬ ಹೀರೋ ರೀತಿ ಬಂದು ಆತನನ್ನು ಹಿಂದಿನಿಂದ ಹಿಡಿದುಕೊಂಡ. ಬಡಿತ ನಿಂತಿದ್ದ ಹೃದಯಕ್ಕೆ ಮತ್ತೆ ಜೀವ ಬಂದಂತಾಯಿತು’

ದಾಳಿಯಲ್ಲಿ ಅಪಾಯದಿಂದ ಪಾರಾದ ಭಾರತ ಮೂಲದ ಫೈಸಲ್‌ ಸೈಯದ್‌ ಆ ಘಟನೆಯನ್ನು ಸ್ಮರಿಸಿಕೊಂಡಿದ್ದು ಹೀಗೆ..

‘ಬಂದೂಕುಧಾರಿಯೊಬ್ಬ ಒಳಗೆ ಬಂದು ಇನ್ನೇನು ಗುಂಡು ಹಾರಿಸುತ್ತಾನೆ ಎನ್ನುವಷ್ಟರಲ್ಲಿ ಆ ವ್ಯಕ್ತಿ, ಅವನನ್ನು ಹಿಂದಿನಿಂದ ಹಿಡಿದು ನಮ್ಮನ್ನು ಬದುಕಿಸಿದ’ ಎಂದು ಫೈಸಲ್‌ ತಮ್ಮ ಅನುಭವವನ್ನು ಬಿಚ್ಚಿಟ್ಟರು.

‘ನಾನು ಈ ದೇಶದಲ್ಲಿ 10 ವರ್ಷದಿಂದ ವಾಸಿಸುತ್ತಿದ್ದೇನೆ. ನನ್ನ ಪ್ರೀತಿ ಪಾತ್ರರಾಗಲಿ, ಕುಟುಂಬದವರಾಗಿ ಅಥವಾ ನನ್ನ ಸಮುದಾಯದವರಾಗಿ ಯಾವುದೇ ರೀತಿಯ ಅಹಿತಕರ ಘಟನೆಯನ್ನು ಎದುರಿಸಿಲ್ಲ. ಬೇರೆಯವರ ರೀತಿ ನಾನು ಏನೋ ಒಂದು ಹೇಳಿಕೆಯನ್ನು ನೀಡಲು ಸಾಧ್ಯವಿಲ್ಲ. ಈ ಘಟನೆಯಿಂದ ದೇಶ ಬಿಟ್ಟು ಹೋಗಬೇಕು ಎಂಬ ಆಲೋಚನೆ ನನ್ನ ಮನಸ್ಸಿನಲ್ಲಿ ಸುಳಿದಿಲ್ಲ’ ಎಂದು ಹೇಳಿದರು. ಫೈಸಲ್‌ ಅವರ ಅನುಭವದ ವರದಿಯನ್ನು ‘ಎನ್‌ಝಹೆರಾಲ್ಡ್‌’ ವೆಬ್‌ಸೈಟ್‌ ಪ್ರಕಟಿಸಿದೆ.

ಸೈಯದ್‌ ನ್ಯೂಜಿಲೆಂಡ್‌ಗೆ ಹೋಗುವ ಮೊದಲು ದೆಹಲಿಯಲ್ಲಿ ವಾಸಿಸುತ್ತಿದ್ದರು.

ಕಠಿಣ ಕಾನೂನು ರೂಪಿಸಲು ತೀರ್ಮಾನ
ದಾಳಿ ನಂತರ ಎಚ್ಚೆತ್ತುಕೊಂಡಿರುವ ನ್ಯೂಜಿಲೆಂಡ್‌ನ ಪ್ರಧಾನಿ ಜೆಸಿಂದಾ ಆರ್ಡರ್ನ್‌, ದೇಶದಲ್ಲಿ ಸದ್ಯ ಜಾರಿಯಲ್ಲಿರುವ ಬಂದೂಕು ಪರವಾನಗಿ ಕಾನೂನನ್ನು ಕಠಿಣಗೊಳಿಸುವುದಾಗಿ ಶಪಥ ಮಾಡಿದ್ದಾರೆ.

ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ, ನ್ಯೂಜಿಲೆಂಡ್‌ನಲ್ಲಿ ಶಸ್ತ್ರಾಸ್ತ್ರ ಪರವಾನಗಿ ನೀಡುವ ಕಾನೂನು ಸರಳವಾಗಿದೆ. ಮಸೀದಿ ಮೇಲೆ ದಾಳಿ ನಡೆಸಿದ್ದ ಬ್ರೆಂಟನ್‌ ಟೆರ್ರಂಟ್‌, ಕಾನೂನಾತ್ಮಕವಾಗಿಯೇ ಐದು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ.

‘ನಾನು ನಿಮಗೆ ಒಂದು ವಿಷಯ ಹೇಳಲು ಇಷ್ಟಪಡುತ್ತೇನೆ. ಬಂದೂಕು ಪರವಾನಗಿ ಕಾನೂನು ಖಂಡಿತವಾಗಿಯೂ ಬದಲಾಗಲಿದೆ’ ಎಂದು ಜೆಸಿಂದಾ ಹೇಳಿದ್ದಾರೆ.

ಉಗ್ರ ಬ್ರೆಂಟನ್‌ ಟೆರ್ರಂಟ್‌ನನ್ನು ಕ್ರೈಸ್ಟ್‌ಚರ್ಚ್‌ನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು -ಎಎಫ್‌ಪಿ ಚಿತ್ರ
ಉಗ್ರ ಬ್ರೆಂಟನ್‌ ಟೆರ್ರಂಟ್‌ನನ್ನು ಕ್ರೈಸ್ಟ್‌ಚರ್ಚ್‌ನಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು -ಎಎಫ್‌ಪಿ ಚಿತ್ರ

*
ಮಸೀದಿ ಮೇಲಿನ ದಾಳಿ ಭಯಾನಕ ಹತ್ಯಾಕಾಂಡ. ಆದರೆ, ಇದರಿಂದ ಬಲಪಂಥೀಯ ಉಗ್ರವಾದಿಗಳ ಹಾವಳಿ ಎಲ್ಲೆಡೆ ಹೆಚ್ಚಾಗುತ್ತಿದೆ ಎಂಬ ವಾದ ಸರಿಯಲ್ಲ.
-ಡೊನಾಲ್ಡ್‌ ಟ್ರಂಪ್‌, ಅಮೆರಿಕ ಅಧ್ಯಕ್ಷ

*
ಮುಸ್ಲಿಮರ ಮೇಲೆ ನಡೆದ ಈ ದಾಳಿ ಪೂರ್ವನಿಯೋಜಿತ ಕೃತ್ಯ. ಆಸ್ಟ್ರೇಲಿಯಾದ ಮಸೀದಿಗಳ ಮೇಲೂ ಇಂತಹ ದಾಳಿ ಸುಲಭವಾಗಿ ನಡೆಯಬಹುದು.
-ಬಿಲಾಲ್‌ ರವುಫ್‌, ಆಸ್ಟ್ರೇಲಿಯಾದ ಇಮಾಮ್‌ ಮಂಡಳಿ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT