ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಂಗ್ಲಾ ದಂಗೆ ತೀವ್ರಗೊಳಿಸಿದ್ದೇ ಪಾಕಿಸ್ತಾನದ ಐಎಸ್‌ಐ: ಶೇಖ್ ಹಸೀನಾ ಪುತ್ರ ಕಿಡಿ

Published 8 ಆಗಸ್ಟ್ 2024, 12:58 IST
Last Updated 8 ಆಗಸ್ಟ್ 2024, 12:58 IST
ಅಕ್ಷರ ಗಾತ್ರ

ಕೋಲ್ಕತ್ತ: ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಎಂದು ಶೇಖ್‌ ಹಸೀನಾ ಅವರ ಪುತ್ರ ಸಜೀದ್‌ ವಾಜೆದ್‌ ಜಾಯ್‌ ಆರೋಪಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ ಸಜೀದ್‌, 'ದೇಶವು ಅರಾಜಕತೆಯತ್ತ ಹೊರಳಿಕೊಳ್ಳುತ್ತಿದೆ. ಈ ಭಾಗದ ಮತ್ತೊಂದು ಅಫ್ಗಾನಿಸ್ತಾನವಾಗುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರ ರಚನೆಗೆ ಸಿದ್ಧತೆ ನಡೆಯುತ್ತಿದೆ. ಏತನ್ಮಧ್ಯೆ, ಸರ್ಕಾರವು ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲೆಗೊಳಿಸಲಿ ಎಂದು ಒತ್ತಾಯಿಸಿದ್ದಾರೆ. ಹಾಗೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿದ ಬಳಿಕ ಎಲ್ಲ ಪಕ್ಷಗಳಿಗೂ ಸಮಾನ ಅವಕಾಶ ಕಲ್ಪಿಸಲಿ ಹಾಗೂ ಹೊಸದಾಗಿ ಚುನಾವಣೆ ನಡೆಸಲಿ ಎಂದು ಸಲಹೆ ನೀಡಿದ್ದಾರೆ.

'ಅವಾಮಿ ಲೀಗ್‌ ಪಕ್ಷವನ್ನು ಹೊರದಬ್ಬಲು ಸಾಧ್ಯವೇ ಇಲ್ಲ. ಅವರ (ಮೊಹಮ್ಮದ್‌ ಯೂನಸ್‌) ವೈಯಕ್ತಿಕ ನಿಲುವು ಏನೇ ಆಗಿರಬಹುದು. ಆದರೆ, ಅವರು ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸಿ, ಮುನ್ನಡೆಯಬೇಕು ಮತ್ತು ಹಿಂದಿನ ಸರ್ಕಾರದಲ್ಲಿ ಆದ ತಪ್ಪುಗಳು ಮರುಕಳಿಸಬಾರದು ಎಂದು ಹೇಳಿದ್ದಾರೆ. ತಮ್ಮ ಮಾತಿಗೆ ಬದ್ಧವಾಗಿರುತ್ತಾರೆ ಎಂದು ಭಾವಿಸುತ್ತೇನೆ' ಎಂದಿದ್ದಾರೆ.

ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಮೊಹಮ್ಮದ್‌ ಯೂನಸ್‌ ಅವರು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಇಂದು ರಾತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಮೀಸಲಾತಿ ವಿಚಾರವಾಗಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಪ್ರಧಾನಿ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿರುವ ಹಸೀನಾ, ಭಾರತಕ್ಕೆ ಪಲಾಯನ ಮಾಡಿದ್ದಾರೆ.

'ಪಾಕಿಸ್ತಾನದ ಐಎಸ್‌ಐ ಕೈವಾಡ ಇರುವ ಬಗ್ಗೆ ನನಗೆ ಅನುಮಾನವಿದೆ. ಈ ವಿಷಯದಲ್ಲಿ ಸಾಂದರ್ಭಿಕ ಸಾಕ್ಷ್ಯಗಳು ಇದನ್ನು ಪುಷ್ಟೀಕರಿಸುತ್ತವೆ. ದಾಳಿಗಳು ಹಾಗೂ ಪ್ರತಿಭಟನೆಗಳು ಅತ್ಯಂತ ಸಂಘಟನಾತ್ಮಕವಾಗಿದ್ದವು. ಅಚ್ಚುಕಟ್ಟಾಗಿ ಯೋಜಿಸಲಾಗಿತ್ತು. ಪರಿಸ್ಥಿತಿಯನ್ನು ಹದಗೆಡಿಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿಯೂ ಮಾಡಲಾಯಿತು. ಪರಿಸ್ಥಿತಿ ನಿಯಂತ್ರಿಸಲು ಸರ್ಕಾರ ಎಷ್ಟೆಲ್ಲ ಪ್ರಯತ್ನ ಮಾಡಿದರೂ, ಹಾಳು ಮಾಡುವ ಪ್ರಯತ್ನಗಳು ನಡೆದೇ ಇದ್ದವು' ಎಂದು ದೂರಿದ್ದಾರೆ.

ಪ್ರತಿಭಟನಾಕಾರರು ಪೊಲೀಸರು ಮೇಲೆ ದಾಳಿ ನಡೆಸಲು ಬಳಸಿದ ಬಂಧೂಕುಗಳನ್ನು ಉಗ್ರ ಸಂಘಟನೆಗಳು ಮತ್ತು ವಿದೇಶಿ ಶಕ್ತಿಗಳು ಪೂರೈಸಿವೆ ಎಂದೂ ಒತ್ತಿ ಹೇಳಿದ್ದಾರೆ.

ಅಮೆರಿಕದ ಗುಪ್ತಚರ ಏಜೆನ್ಸಿ 'ಸಿಐಎ' ಪಾತ್ರದ ಕುರಿತು ಕೇಳಿದ ಪ್ರಶ್ನೆಗೆ, 'ಪಾತ್ರವಿದ್ದರೂ ಇರಬಹುದು. ಆದರೆ, ಆ ಕುರಿತ ಯಾವುದೇ ಸಾಕ್ಷ್ಯಗಳಿಲ್ಲ' ಎಂದು ಹೇಳಿದ್ದಾರೆ. ಚೀನಾ ಪಾತ್ರದ ಕುರಿತ ಪ್ರಶ್ನೆಯನ್ನು ತಳ್ಳಿಹಾಕಿದ್ದಾರೆ.

ಹಸೀನಾ ಅವರು ಲಂಡನ್‌ ಅಥವಾ ಇತರ ರಾಷ್ಟ್ರಗಳಲ್ಲಿ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬುದು ವದಂತಿ ಎಂದಿದ್ದಾರೆ. ಹಾಗೆಯೇ, ಹಸೀನಾ ಅವರ ವೀಸಾವನ್ನು ಅಮೆರಿಕ ರದ್ದುಪಡಿಸಿದೆ ಎಂಬುದು ಸತ್ಯವಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT