ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪೌಲ್‌ ಆಲೆನ್‌ ನಿಧನ

Last Updated 16 ಅಕ್ಟೋಬರ್ 2018, 3:27 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಕಂಪ್ಯೂಟರ್‌ ಆಪರೇಟಿಂಗ್‌ ಸಾಫ್ಟ್‌ವೇರ್‌ ಮೈಕ್ರೋಸಾಫ್ಟ್‌ನ ವಿಂಡೋಸ್‌. ಈ ಸಾಫ್ಟ್‌ವೇರ್‌ ರೂಪಿಸುವ ಬೃಹತ್‌ ಸಂಸ್ಥೆಮೈಕ್ರೋಸಾಫ್ಟ್‌ ಕಾರ್ಪೊರೇಷನ್‌ನ್ನು ಬಿಲ್‌ ಗೇಟ್ಸ್‌ ಜತೆಗೂಡಿ ಸ್ಥಾಪಿಸಿದ ಪೌಲ್‌ ಆಲೆನ್‌ (65) ಸೋಮವಾರ ನಿಧನರಾದರು.

ರಕ್ತ ಕ್ಯಾನ್ಸರ್‌(ನಾನ್‌ ಹಾಡ್ಗ್‌ಕಿನ್ಸ್‌ ಲಿಂಫೋಮಾ)ನಿಂದಾಗಿ ಪೌಲ್‌ ಮೃತಪಟ್ಟಿರುವುದಾಗಿ ವಲ್ಕನ್‌ ಇಂಕ್‌., ಪ್ರಕಟಿಸಿದೆ. ವಿವಿಧ ವಲಯಗಳಲ್ಲಿನ ಹೂಡಿಕೆ ಮತ್ತು ಉತ್ತಮ ಕಾರ್ಯಗಳಿಗೆ ನೀಡಿದ ದೇಣಿಗಳಿಂದಪೌಲ್‌ ಮತ್ತಷ್ಟು ಹೆಸರಾದರು. ಕ್ರೀಡಾ ತಂಡಗಳು, ಕೇಬಲ್‌ ಟಿವಿ ಹಾಗೂ ರಿಯಲ್‌ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿದ್ದರು. ಬ್ಲೂಮ್‌ಬರ್ಗ್‌ ಪ್ರಕಾರ, ಅವರ ಸಂಪತ್ತಿನ ಮೌಲ್ಯ ಅಂದಾಜು ₹1.92 ಲಕ್ಷ ಕೋಟಿ.

ಬಳಕೆಗೆ ಸುಲಭವಾಗುವ ರೀತಿಯಲ್ಲಿ ಸಾಫ್ಟ್‌ವೇರ್‌ಗಳನ್ನು ರೂಪಿಸಿ ಗ್ರಾಹಕರಿಗೆಕಡಿಮೆ ಬೆಲೆಗೆ ತಲುಪಿಸುವ ಕಾರ್ಯದಲ್ಲಿ ಬಿಲ್‌ ಗೇಟ್ಸ್‌ಗೆ ಹೆಗಲಾದವರು ಅಲೆನ್ ಪೌಲ್‌.

ಬಿಲ್‌ ಗೇಟ್ಸ್‌ ಮತ್ತು ಪೌಲ್ ಆಲೆನ್
ಬಿಲ್‌ ಗೇಟ್ಸ್‌ ಮತ್ತು ಪೌಲ್ ಆಲೆನ್

’ಹಳೆಯ ಮತ್ತು ಪ್ರೀತಿಯ ಗೆಳೆಯನ ಅಗಲಿಕೆ ನನ್ನ ಮನಸ್ಸು ಛಿದ್ರಗೊಳಿಸಿದೆ. ಆತ್ಮೀಯ ಸ್ನೇಹಿತ ಮತ್ತು ಪಾಲುದಾರ ಪೌಲ್‌. ಆತನಿಲ್ಲದಿದ್ದರೆ ಪರ್ಸನಲ್‌ ಕಂಪ್ಯೂಟಿಂಗ್‌ ಬಹುಶಃ ಸಾಧ್ಯವೇ ಆಗುತ್ತಿರಲಿಲ್ಲ’ ಎಂದು ಬಿಲ್‌ ಗೇಟ್ಸ್‌ ನೋವು ಹಂಚಿಕೊಂಡಿದ್ದಾರೆ.

ಕಂಕುಳಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಸೇರಿದಂತೆ ವಿವಿಧ ಲಕ್ಷಣಗಳಿಂದ ಪೌಲ್‌ ದೇಹದಲ್ಲಿ ಕ್ಯಾನ್ಸರ್‌(ಹಾಡ್ಗ್‌ಕಿನ್ಸ್‌ ಲಿಂಫೋಮಾ) ಕಣಗಳು ಹರಡುತ್ತಿರುವುದು ಮೊದಲ ಬಾರಿಗೆ 1983ರಲ್ಲಿ ಪತ್ತೆಯಾಯಿತು. ಇದೇ ಕಾರಣದಿಂದ ಸಂಸ್ಥೆಯ ಉನ್ನತ ಸ್ಥಾನದಿಂದ ಅವರು ಹೊರಗುಳಿದರು. ಮತ್ತೆ, 2009ರಲ್ಲಿ ಅವರಿಗೆ ನಾನ್‌ ಹಾಡ್ಗ್‌ಕಿನ್ಸ್‌ ಲಿಂಫೋಮಾ ಸಮಸ್ಯೆ ಉಂಟಾಗಿ ಚಿಕಿತ್ಸೆ ಪಡೆದಿದ್ದರು. ಅದೇ ಸಮಸ್ಯೆ ಎರಡು ವಾರಗಳ ಹಿಂದೆ ಉಲ್ಬಣಿಸಿತ್ತು.

ಮಿದುಳು ಸಂಬಂಧಿತ ಸಂಶೋಧನೆಗಳಿಗೆ ₹730 ಕೋಟಿ, ಅನ್ಯಗ್ರಹದಲ್ಲಿನ ಜೀವ ಸಂಕುಲದ ಶೋಧ ಕಾರ್ಯಕ್ಕಾಗಿ ₹184 ಕೋಟಿ ಸೇರಿದಂತೆ ಸಂಶೋಧನಾ ಕ್ಷೇತ್ರಕ್ಕೆ ಪೌಲ್‌ ನೀಡಿರುವ ದೇಣಿ ಅಪಾರ.

ಪೌಲ್‌ ಗಾರ್ಡನರ್‌ ಅಲೆನ್‌ ಹುಟ್ಟಿದ್ದು, 1953ರ ಜನವರಿ 21ರಂದು ಅಮೆರಿಕದ ಸಿಯಾಟಲ್‌ನಲ್ಲಿ. ಇವರ ತಂದೆಗೆ ಯೂನಿವರ್ಸಿಟಿ ಗ್ರಂಥಾಲಯದಲ್ಲಿ ಕೆಲಸ ಹಾಗೂ ತಾಯಿ ಶಿಕ್ಷಕಿಯಾಗಿದ್ದರು. ಶಾಲಾದಿನಗಳಲ್ಲಿಯೇ ಗೇಟ್ಸ್‌ ಮತ್ತು ಪೌಲ್‌ ಜತೆಗಾರರಾಗಿದ್ದರು. ಶಾಲೆಯ ಪ್ರಯೋಗಾಲಯದಲ್ಲಿ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಕಾರ್ಯದಲ್ಲಿ ತೊಡುಗುವುದೆಂದರೆ ಇಬ್ಬರಿಗೂ ನೆಚ್ಚಿನ ಕೆಲಸ. ಪೌಲ್‌ ವಾಷಿಂಗ್ಟನ್‌ ಯೂನಿವರ್ಸಿಟಿಯ ಕಂಪ್ಯೂಟರ್‌ ಲ್ಯಾಬ್‌ನಲ್ಲಿ ಕೆಲ ಸಮಯ ಕಂಪ್ಯೂಟರ್‌ ಮೆಷಿನರಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಆದರೆ, ಆ ವಿಶ್ವವಿದ್ಯಾಲಯದಿಂದ ಪದವಿ ಪಡೆದೆ ಹೊರಬಿದ್ದರು.

1975ರಲ್ಲಿ ಪೌಲ್‌ ಮತ್ತು ಗೇಟ್ಸ್‌ ನ್ಯೂ ಮೆಕ್ಸಿಕೊದಲ್ಲಿ ಸ್ಥಾಪಿಸಿದ ಸಂಸ್ಥೆ ಮೈಕ್ರೋ–ಸಾಫ್ಟ್‌. ಕಂಪ್ಯೂಟರ್‌ ಮೆಷಿನ್‌ಗಳ ಬೆಲೆ ಕಡಿಮೆಯಾಗಬಹುದು, ಅದಕ್ಕೆ ಸಾಫ್ಟ್‌ವೇರ್‌ ಅಗತ್ಯತೆ ಹೆಚ್ಚು ಎಂಬುದನ್ನು ಕಂಡುಕೊಂಡರು. ಆಲ್ಟೈರ್‌ ಮತ್ತು ಇಂಟರ್‌ನ್ಯಾಷನಲ್‌ ಬಿಸಿನೆಸ್‌ ಮೆಷಿನ್ಸ್‌(ಐಬಿಎಂ)ನ ಮೈಕ್ರೋಕಂಪ್ಯೂಟರ್‌ಗಳಿಗೆ ಆಪರೇಟಿಂಗ್‌ ಸಾಫ್ಟ್‌ವೇರ್‌ ರೂಪಿಸುವಲ್ಲಿ ಪೌಲ್‌ ಶ್ರಮಿಸಿದರು. ಅಲ್ಲಿಂದ ಮುಂದೆ ಕಂಪ್ಯೂಟರ್‌ ವಿನ್ಯಾಸ ಮತ್ತು ಬಳಕೆ ವಿಧಾನದಲ್ಲಿ ಮಹತ್ತ ಬದಲಾವಣೆಯಾಯಿತು.

* ನಮ್ಮ ಸಂಸ್ಥೆಗೆ, ನಮ್ಮ ಸಮುದಾಯಕ್ಕೆ, ನಮ್ಮ ವಲಯಕ್ಕೆ ಪೌಲ್‌ ಆಲೆನ್‌ ಅವರ ಕೊಡುಗೆ ಮಹತ್ತರವಾದುದು. ರೂಪಿಸಿದ ಉತ್ಪನ್ನಗಳ ಮೂಲಕ ಇಡೀ ಜಗತ್ತನ್ನೇ ಬದಲಿಸಿದರು.

– ಸತ್ಯ ನಾದೆಲ್ಲ, ಸಿಇಒ, ಮೈಕ್ರೋಸಾಫ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT