ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರೂನೈಗೆ ಸೋಮವಾರದಿಂದ ಎರಡು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಭಾರತದ ಪ್ರಧಾನಿಯೊಬ್ಬರು ಬ್ರೂನೈಗೆ ದ್ವಿಪಕ್ಷೀಯ ಸಂಬಂಧ ವರ್ಧನೆಯ ಮಾತುಕತೆಗಾಗಿ ಭೇಟಿ ನೀಡುತ್ತಿರುವುದು ಇದೇ ಮೊದಲು ಎಂದು ವಿದೇಶಾಂಗ ಇಲಾಖೆ(ಎಮ್‌ಇಎ) ತಿಳಿಸಿದೆ.
ಭಾರತ ಮತ್ತು ಬ್ರೂನೈ ನಡುವೆ ರಾಜತಾಂತ್ರಿಕ ಸಂಬಂಧ ಶುರುವಾಗಿ 40 ವರ್ಷಗಳಾಗುತ್ತಿದ್ದು, ಅದರ ಪ್ರತೀಕವೆಂಬಂತೆ ಪ್ರಧಾನಿಯವರು ಈ ಪ್ರವಾಸ ಕೈಗೊಂಡಿದ್ದಾರೆ. ಇದು ಉಭಯರಾಷ್ಟ್ರಗಳ ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಎಮ್‌ಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ಬ್ರೂನೈ ಪ್ರವಾಸದ ಬಳಿಕ ಮೋದಿ ಅವರು ಸಿಂಗಪುರ ಪ್ರಧಾನಿ ಲಾರೆನ್ಸ್ ವಾಂಗ್ ಅವರ ಆಹ್ವಾನದ ಮೇರೆಗೆ ಸಿಂಗಪುರಕ್ಕೆ ಸೆಪ್ಟಂಬರ್ 4ರಂದು ತೆರಳಲಿದ್ದಾರೆ. ಈ ವೇಳೆ ಉಭಯ ನಾಯಕರು ಮಹತ್ವದ ಸಭೆ ನಡೆಸಲಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ.
ಲಾರೆನ್ಸ್ ಭೇಟಿ ನಂತರ ಪ್ರಧಾನಿ ಮೋದಿಯವರು ಅಲ್ಲಿನ ಅಧ್ಯಕ್ಷ ಧರ್ಮನ್ ಷಣ್ಮುಗರತ್ನಂ ಅವರನ್ನು ಭೇಟಿಯಾಗಲಿದ್ದಾರೆ. ಸಿಂಗಪುರದ ಉದ್ಯಮಿಗಳೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.