ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್ ಬೆನ್ನಲ್ಲೇ ಇಸ್ರೇಲ್‌ಗೆ ಸುನಕ್ ಭೇಟಿ; ನೆತನ್ಯಾಹು ಜತೆ ಗೋಪ್ಯ ಚರ್ಚೆ

Published 19 ಅಕ್ಟೋಬರ್ 2023, 10:52 IST
Last Updated 19 ಅಕ್ಟೋಬರ್ 2023, 10:52 IST
ಅಕ್ಷರ ಗಾತ್ರ

ಜೆರುಸಲೇಂ: ‘ಇಸ್ರೇಲ್‌ ಪಾಲಿನ ಕಡುಕಷ್ಟದ ಈ ಹೊತ್ತಿನಲ್ಲಿ ನಾವು ಇಸ್ರೇಲ್ ಜೊತೆ ಇರುತ್ತೇವೆ’ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಹೇಳಿದ್ದಾರೆ.

‘ನಿಮ್ಮ ಸ್ನೇಹಿತನಾಗಿ, ಈ ಕಡುಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಿಲ್ಲುತ್ತಿರುವುದು ನನಗೆ ಹೆಮ್ಮೆಯ ಸಂಗತಿ’ ಎಂದು ಸುನಕ್ ಅವರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಜೊತೆಯಲ್ಲಿ ನಿಂತು ಘೋಷಿಸಿದರು.

ಗಾಜಾದ ನಾಗರಿಕರಿಗೆ ಆಹಾರ, ನೀರು ಮತ್ತು ಔಷಧ ಲಭ್ಯವಾಗುವಂತೆ ಮಾಡುವುದು ಕೂಡ ಬಹಳ ಮಹತ್ವದ್ದು ಎಂದು ಸುನಕ್ ಅವರು ಹೇಳಿದ್ದಾರೆ.

ಸುನಕ್ ಅವರು ಸೌದಿ ಅರೇಬಿಯಾಕ್ಕೆ ತೆರಳಿ ಅಲ್ಲಿನ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟನ್ನು ತಿಳಿಗೊಳಿಸುವುದು, ಗಾಜಾ ಪಟ್ಟಿಗೆ ಅಗತ್ಯ ವಸ್ತುಗಳ ಪೂರೈಕೆ ಆಗುವಂತೆ ನೋಡಿಕೊಳ್ಳುವುದು ಮತ್ತು ಹಮಾಸ್ ವಶದಲ್ಲಿ ಇರುವ ಬ್ರಿಟನ್ನಿನ ಒತ್ತೆಯಾಳುಗಳ ಬಿಡುಗಡೆ ಸುನಕ್ ಅವರ ಭೇಟಿಯ ಉದ್ದೇಶ.

ಚೀನಾ ಕರೆ

ಬೀಜಿಂಗ್ (ಎಎಫ್‌ಪಿ): ‘ಮಧ್ಯಪ್ರಾಚ್ಯದಲ್ಲಿ ಇನ್ನಷ್ಟು ಸ್ಥಿರತೆ ಮೂಡಿಸಲು ನಾವು ಕೆಲಸ ಮಾಡಬೇಕು’ ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಈಜಿಪ್ಟ್ ಪ್ರಧಾನಿ ಮುಸ್ತಫಾ ಮುದ್ಬೌಲಿ ಅವರಲ್ಲಿ ಹೇಳಿದ್ದಾರೆ.

‘ಪ್ಯಾಲೆಸ್ಟೀನ್‌ ಮತ್ತು ಇಸ್ರೇಲ್‌ ಶಾಂತಿಯುತವಾಗಿ ಸಹಬಾಳ್ವೆ ನಡೆಸಲು ದ್ವಿರಾಷ್ಟ್ರ ಸೂತ್ರವನ್ನು ಚೀನಾ ಬೆಂಬಲಿಸುತ್ತದೆ’ ಎಂದು ಜಿನ್‌ಪಿಂಗ್ ಅವರು ಪುನರುಚ್ಚರಿಸಿದ್ದಾರೆ.

* ಗಾಜಾದಲ್ಲಿ ಇರುವ ಪ್ಯಾಲೆಸ್ಟೀನ್‌ ನಾಗರಿಕರಿಗೆ ಇಸ್ರೇಲ್ ಸಾಮೂಹಿಕವಾಗಿ ಶಿಕ್ಷೆ ವಿಧಿಸುತ್ತಿದೆ ಎಂದು ಈಜಿಪ್ಟ್ ಮತ್ತು ಜೋರ್ಡನ್ ಆರೋಪಿಸಿವೆ.

* ಇಸ್ರೇಲ್‌ ಮಿಲಿಟರಿಯ ಬಳಕೆಗಾಗಿ ಅಮೆರಿಕವು ಕಳುಹಿಸಿರುವ ಮಿಲಿಟರಿ ವಾಹನಗಳನ್ನು ಹೊತ್ತ ವಿಮಾನವು ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಬಂದಿದೆ ಎಂದು ‘ಟೈಮ್ಸ್ ಆಫ್ ಇಸ್ರೇಲ್’ ವರದಿ ಮಾಡಿದೆ.

* ಗಾಜಾ ಮೇಲಿನ ಇಸ್ರೇಲ್ ವಾಯುದಾಳಿಯಲ್ಲಿ ಧ್ವಂಸಗೊಂಡಿದ್ದ ಮನೆಯೊಂದರ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಪ್ಯಾಲೆಸ್ಟೀನ್‌ ಬಾಲಕನೊಬ್ಬನನ್ನು ರಕ್ಷಿಸಲಾಗಿದೆ ಎಂದು ಪ್ಯಾಲೆಸ್ಟೀನ್‌ನ ಕುದ್ಸ್ ನ್ಯೂಸ್‌ ನೆಟ್‌ವರ್ಕ್‌ ತನ್ನ ಎಕ್ಸ್ ಖಾತೆ ಮೂಲಕ ತಿಳಿಸಿದೆ.

ಇಸ್ರೇಲಿನ ಜನ ಇಷ್ಟು ಒಗ್ಗಟ್ಟು ಪ್ರದರ್ಶಿಸಿದ್ದನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ನಮ್ಮಲ್ಲಿ ಎಲ್ಲೆಲ್ಲೂ ಒಗ್ಗಟ್ಟು ಮೂಡಬೇಕು. ನ್ಯಾಯಬದ್ಧವಾದ ಈ ಯುದ್ಧವನ್ನು ಗೆಲ್ಲಲು ನಾವು ಈ ಒಗ್ಗಟ್ಟನ್ನು ಕಾಯ್ದುಕೊಳ್ಳಬೇಕು. –

-ಬೆಂಜಮಿನ್ ನೆತನ್ಯಾಹು ಇಸ್ರೇಲ್ ಪ್ರಧಾನಿ

ನಾಗರಿಕರ ಜೀವ ರಕ್ಷಣೆಗೆ ಇಸ್ರೇಲ್‌ ಎಲ್ಲ ಬಗೆಯ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ ಎಂಬುದು ಬ್ರಿಟನ್‌ಗೆ ಗೊತ್ತಿದೆ. ಆದರೆ ಹಮಾಸ್ ಹಾಗಲ್ಲ; ಅದು ನಾಗರಿಕರನ್ನು ಅಪಾಯಕ್ಕೆ ನೂಕುತ್ತಿದೆ.  – ರಿಷಿ ಸುನಕ್ ಬ್ರಿಟನ್ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT