ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಷ್ಯಾ ರಾಸಾಯನಿಕ ಅಸ್ತ್ರ ಬಳಸಿದರೆ ಯುದ್ಧದ ಚಿತ್ರಣವೇ ಬದಲಾಗಲಿದೆ: ಪೋಲೆಂಡ್

Published : 13 ಮಾರ್ಚ್ 2022, 14:44 IST
ಫಾಲೋ ಮಾಡಿ
Comments

ವಾರ್ಸಾ, ಕೀವ್‌, ಲಂಡನ್‌: ‘ಉಕ್ರೇನ್‌ ಮೇಲೆ ರಷ್ಯಾ ರಾಸಾಯನಿಕ ಅಸ್ತ್ರ ಬಳಸಿದ್ದರೆ ಯುದ್ಧದ ಗತಿಯೇ ಬದಲಾಗಲಿದೆ’ ಎಂದು ಪೋಲೆಂಡ್‌ ಅಧ್ಯಕ್ಷ ಆಂಡ್ರೆ ಡುಡಾ ಭಾನುವಾರ ಎಚ್ಚರಿಸಿದರು.

‘ರಷ್ಯಾ ಇಂತಹ ಕ್ರಮಕ್ಕೆ ಮುಂದಾದರೆ, ಇದನ್ನು ನಿಭಾಯಿಸುವ ಬಗ್ಗೆ ಅಮೆರಿಕ ಮತ್ತು ನ್ಯಾಟೊ ರಾಷ್ಟ್ರಗಳು ಗಂಭೀರವಾಗಿ ಚಿಂತಿಸಬೇಕು.ರಷ್ಯಾ ಮುಂದೆ ಯುರೋಪ್‌ ಅಷ್ಟೇ ಅಲ್ಲ ಇಡೀ ಜಗತ್ತಿಗೆ ಅಪಾಯಕಾರಿಯಾಗಲಿದೆ’ ಎಂದು ಅವರು ಹೇಳಿದರು.

‘ರಷ್ಯಾ-ನ್ಯಾಟೊ ನಡುವೆ ಸಂಘರ್ಷವಾದರೆ ಅದು3ನೇ ಮಹಾಯುದ್ಧಕ್ಕೆ ನಾಂದಿ. ಯಾವುದೇ ಕಾರಣಕ್ಕೂ ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಮಧ್ಯಸ್ಥಿಕೆ ವಹಿಸಲ್ಲ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆ ನೀಡಿದ ಬೆನ್ನಲ್ಲೇ, ಪೋಲೆಂಡ್ ಅಧ್ಯಕ್ಷರು ಈ ರೀತಿ ಹೇಳಿದರು.

‘ರಷ್ಯಾ ಅಧ್ಯಕ್ಷ ಪುಟಿನ್‌ ಸಾಮೂಹಿಕ ವಿನಾಶದ ಅಸ್ತ್ರ ಬಳಸಿದರೆ, ಅದು ಯುದ್ಧದ ಗತಿಯನ್ನೇ ಬದಲಿಸುತ್ತದೆ. ಜೊತೆಗೆ ರಷ್ಯಾದೊಂದಿಗೆ ಇತರ ದೇಶಗಳ ಮೈತ್ರಿ ಮೇಲೂ ಪರಿಣಾಮ ಬೀರಲಿದೆ’ ಎಂದು ಅವರು ‘ಬಿಬಿಸಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ರಾಸಾಯನಿಕ ಬಾಂಬ್‌ ದಾಳಿ’: ಉಕ್ರೇನ್‌ನ ಪೂರ್ವ ಲುಹಾನ್‌ಸ್ಕ್‌ನಲ್ಲಿ ರಷ್ಯಾದ ಪಡೆಗಳು ನಿಷೇಧಿತ ರಾಸಾಯನಿಕ ಬಾಂಬ್‌ (ರಂಜಕ ಅನಿಲ) ದಾಳಿ ನಡೆಸಿವೆ ಎಂದು ಪೋಪಾಸ್‌ನಪೊಲೀಸ್‌ ಮುಖ್ಯಸ್ಥ ಒಲೆಕ್ಸಿ ಬಿಲೋಶಿಟ್‌ಸ್ಕಿ ಆರೋಪಿಸಿದ್ದಾರೆ.

ಲುಹಾನ್‌ಸ್ಕ್‌ನ ಪಶ್ಚಿಮದ 100 ಕಿ.ಮೀ. ವ್ಯಾಪ್ತಿಯಲ್ಲಿ ಶನಿವಾರ ರಾಸಾಯನಿಕ ಬಾಂಬ್‌ ಹಾಕಲಾಗಿದೆ. ನಾಗರಿಕರನ್ನು ಸ್ಥಳಾಂತರಿಸುವ ರೈಲಿನ ಮೇಲೂ ಶೆಲ್‌ ದಾಳಿ ನಡೆದಿದೆ. ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದಾರೆ ಎಂದು ಡೊನೆಟ್‌ಸ್ಕ್‌ ಮಿಲಿಟರಿ ಕಮಾಂಡರ್‌ ಹೇಳಿದ್ದಾರೆ.

ಥಾಯ್ಲೆಂಡ್‌ನಲ್ಲಿ ಸಿಲುಕಿದ ಸಾವಿರಾರು ರಷ್ಯನ್ನರು
ಬ್ಯಾಂಕಾಕ್‌:
ಉಕ್ರೇನ್‌ ಮೇಲಿನ ದಾಳಿ ಖಂಡಿಸಿ ರಷ್ಯಾದ ಮೇಲೆ ಹಲವು ದೇಶಗಳು ವಿಧಿಸಿರುವ ನಿರ್ಬಂಧದಿಂದ ಸಾವಿರಾರು ರಷ್ಯನ್‌ ಪ್ರವಾಸಿಗರು ತಮ್ಮ ತವರಿಗೆ ಮರಳಲಾಗದೆ ಥಾಯ್ಲೆಂಡ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಇಲ್ಲಿನ ಥಾಯ್‌ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ರಷ್ಯಾದ ಬ್ಯಾಂಕ್‌ಗಳು, ವ್ಯವಹಾರ ಮತ್ತು ಜಾಗತಿಕ ಪಾವತಿ ಮೇಲೆ ಹಲವು ರಾಷ್ಟ್ರಗಳು ನಿರ್ಬಂಧ ಹೇರಿವೆ. ಇದರಿಂದ ಥಾಯ್ಲೆಂಡ್‌ನಲ್ಲಿ ಸಿಲುಕಿರುವ ರಷ್ಯಾದ ಪ್ರವಾಸಿಗರು ಖರ್ಚಿಗೂ ಹಣವಿಲ್ಲದೆ ಸಂಕಷ್ಟದಲ್ಲಿದ್ದಾರೆ.

ಪತ್ರಕರ್ತನ ಹತ್ಯೆ
ಇರ್ಪಿನ್
: ಉಕ್ರೇನ್ ರಾಜಧಾನಿ ಕೀವ್ ಪ್ರಾಂತ್ಯದ ಇರ್ಪಿನ್ ನಗರದಲ್ಲಿ ರಷ್ಯಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಅಮೆರಿಕದ ಪತ್ರಕರ್ತ ಬ್ರೆಂಟ್‌ ರೆನಾಡ್‌ ಅವರು ಭಾನುವಾರ ಬಲಿಯಾಗಿದ್ದಾರೆ. ಮತ್ತೊಬ್ಬ ಪತ್ರಕರ್ತ ಗಾಯಗೊಂಡಿದ್ದಾರೆ ಎಂದು ಕೀವ್ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಆ್ಯಂಡ್ರಿಯ್ ನ್ಯೆಬಿತೋವ್ ತಿಳಿಸಿದ್ದಾರೆ.

ಗಾಯಗೊಂಡಿರುವ ಪತ್ರಕರ್ತನ ಗುರುತು ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT