ಅರ್ಬತ್ (ಸುಡಾನ್): ಪೂರ್ವ ಸುಡಾನ್‌ನಲ್ಲಿ ಸುರಿದ ಭಾರಿ ಮಳೆಗೆ ಅಣೆಕಟ್ಟು ಒಡೆದು ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಧಾರಾಕಾರ ಮಳೆಯಿಂದಾಗಿ ಕೆಂಪು ಸಮುದ್ರದ ಸಮೀಪದಲ್ಲಿದ್ದ ಅರ್ಬತ್ ಅಣೆಕಟ್ಟು ಒಡೆದಿದೆ. ಇದರ ಬೆನ್ನಲ್ಲೇ ಪ್ರವಾಹದ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 20 ಹಳ್ಳಿಗಳಿಗೆ ನೀರು ನುಗ್ಗಿದ್ದು, 50,000 ಮಂದಿಯ ಮನೆಗಳು ಹಾನಿಗೊಳಗಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಯ ಪ್ರಕಾರ ಸುಮಾರು 200 ಮಂದಿ ನಾಪತ್ತೆಯಾಗಿದ್ದಾರೆ. ಪ್ರದೇಶವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಈ ಅಣೆಕಟ್ಟು ಪೋರ್ಟ್ ಸುಡಾನ್‌ಗೆ ನೀರಿನ ಪ್ರಮುಖ ಮೂಲವಾಗಿತ್ತು.
ಈ ವರ್ಷ ಸುಡಾನ್‌ನಲ್ಲಿ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದಾಗಿ 132 ಮಂದಿ ಮೃತಪಟ್ಟಿದ್ದಾರೆ. 1,18,000 ಮಂದಿ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.
ಈಗಾಗಲೇ ಆಂತರಿಕ ಹಿಂಸಾಚಾರದಿಂದ (ಅಂತರ್ಯುದ್ಧ) ತತ್ತರಿಸಿರುವ ಸುಡಾನ್‌ನಲ್ಲಿ ಮತ್ತೊಂದು ವಿಪತ್ತು ಎದುರಾಗಿದೆ. ಸೇನೆ ಮತ್ತು ಅರೆಸೇನಾ ಪಡೆಗಳ ನಡುವಣ ಸಂಘರ್ಷದ ಪರಿಣಾಮ ಸುಡಾನ್ ನಲುಗಿತ್ತು.