ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ–ಕಾಲೇಜುಗಳನ್ನು ಆರಂಭಿಸುವಂತೆ ಡೊನಾಲ್ಡ್ ಟ್ರಂಪ್‌ ಒತ್ತಡ: ಎಚ್ಚರಿಕೆ ಸಂದೇಶ

Last Updated 11 ಜುಲೈ 2020, 9:18 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಶಾಲಾ ಕಾಲೇಜುಗಳನ್ನು ಪುನರಾರಂಭಿಸದಿದ್ದರೆ, ಶಿಕ್ಷಣ ಸಂಸ್ಥೆಗಳ ತೆರಿಗೆ ವಿನಾಯಿತಿಯನ್ನು ರದ್ದುಪಡಿಸುವುದಾಗಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ. ಶಿಕ್ಷಣ ಸಂಸ್ಥೆಗಳ ನೀತಿಯ ವಿರುದ್ಧ ಅವರು ಟ್ವೀಟ್‌ ಮೂಲಕ ಕಿಡಿ ಕಾರಿದ್ದಾರೆ.

‘ಅನೇಕ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳು ಶಿಕ್ಷಣ ನೀಡುವ ಬದಲಿಗೆ ಎಡಪಂಥೀಯ ಸಿದ್ಧಾಂತವನ್ನು ಬೋಧಿಸುತ್ತವೆ. ಈ ಬೋಧನೆಯನ್ನು ಅಥವಾ ಸಾರ್ವಜನಿಕ ನೀತಿಯ ವಿರುದ್ಧದ ನಡೆಯನ್ನು ಮುಂದುವರಿಸುವ ಶಿಕ್ಷಣ ಸಂಸ್ಥೆಗಳ ಅನುದಾನ ಹಾಗೂ ತೆರಿಗೆ ವಿನಾಯಿತಿಗಳ ಬಗ್ಗೆ ಮರು ಪರಿಶೀಲಿಸುವಂತೆ ಖಜಾನೆ ವಿಭಾಗಕ್ಕೆ ಸೂಚಿಸಿದ್ದೇನೆ’ ಎಂದು ಟ್ರಂಪ್‌ ಟ್ವೀಟ್‌ ಮಾಡಿದ್ದಾರೆ.

‘ನಮ್ಮ ಮಕ್ಕಳನ್ನು ಸುಶಿಕ್ಷಿತರನ್ನಾಗಿಸಬೇಕೇ ವಿನಾ ಅವರಿಗೆ ಇಂಥ ಬೋಧನೆ ನೀಡಬಾರದು’ ಎಂದು ಅವರು ಹೇಳಿದ್ದಾರೆ. ಶಾಲೆಗಳನ್ನು ಪುನರಾರಂಭಿಸಲು ನಿರಾಕರಿಸಿದ ಶಿಕ್ಷಣ ಸಂಸ್ಥೆಗಳಿಗೆ ಟ್ರಂಪ್‌ ಅವರು ಈ ವಾರದಲ್ಲಿ ನೀಡಿರುವ ಎರಡನೇ ಎಚ್ಚರಿಕೆ ಇದಾಗಿದೆ. ಟ್ರಂಪ್‌ ಅವರ ಈ ಟ್ವೀಟ್‌ಗೆ ಶ್ವೇತಭವನವಾಗಲಿ, ಖಜಾನೆ ಇಲಾಖೆಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಚೀನಾ ಜತೆ ವ್ಯಾಪಾರ ಒಪ್ಪಂದವಿಲ್ಲ: ಚೀನಾದ ಜತೆಗೆ ಎರಡನೇ ಹಂತದ ವ್ಯಾಪಾರ ಒಪ್ಪಂದಗಳನ್ನು ಸದ್ಯಕ್ಕೆ ಮಾಡುವುದಿಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದ್ದಾರೆ. ಕೊರೊನಾ ಸೋಂಕನ್ನು ತಡೆಯುವಲ್ಲಿ ಚೀನಾದ ವೈಫಲ್ಯದಿಂದಾಗಿ ಉಭಯ ರಾಷ್ಟ್ರಗಳ ಸಂಬಂಧಕ್ಕೆ ಹಾನಿಯಾಗಿದೆ ಎಂದು ಅವರು ಹೇಳಿದ್ದಾರೆ.

‘ಚೀನಾದ ಜತೆಗಿನ ಸಂಬಂಧಕ್ಕೆ ಭಾರಿ ಹಾನಿ ಉಂಟಾಗಿದೆ. ಆದ್ದರಿಂದ ಆ ಬಗ್ಗೆ (ಎರಡನೇ ಹಂತದ ವ್ಯಾಪಾರ ಒಪ್ಪಂದ) ಸದ್ಯಕ್ಕೆ ನಾನು ಯೋಚನೆ ಮಾಡುತ್ತಿಲ್ಲ. ಕೊರೊನಾ ಪಿಡುಗನ್ನು ಅವರು ನಿಯಂತ್ರಿಸಬಹುದಾಗಿತ್ತು. ವುಹಾನ್‌ನಿಂದ ಚೀನಾದ ಇತರ ನಗರಗಳಿಗೆ ಹೋಗುವುದನ್ನು ಅವರು ತಡೆದರು. ಹಾಗೆಯೇ ಬೇರೆ ರಾಷ್ಟ್ರಗಳಿಗೆ ಹೋಗುವುದನ್ನು ಸಹ ತಡೆಯಬಹುದಾಗಿತ್ತು. ಆದರೆ ಅವರು ಅದನ್ನು ಮಾಡಲಿಲ್ಲ’ ಎಂದು ಟ್ರಂಪ್‌ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.

ಪ್ರಸಕ್ತ ಸಾಲಿನ ಆರಂಭದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಗಹನವಾದ ಮಾತುಕತೆ ನಡೆದ ನಂತರ, ಅಮೆರಿಕವು ಚೀನಾದ ಜತೆ ಮೊದಲ ಹಂತದ ವಾಣಿಜ್ಯ ಒಪ್ಪಂದಕ್ಕೆ ಸಹಿ ಮಾಡಿತ್ತು. ಆದರೆ, ಕೊರೊನಾ ವೈರಸ್‌ ಪ್ರಸರಣದ ಬಳಿಕ ಈ ರಾಷ್ಟ್ರಗಳ ನಡುವಿನ ಸಂಬಂಧ ಪುನಃ ಕೆಟ್ಟುಹೋಗಿದೆ. ಈ ವಿಚಾರದಲ್ಲಿ ಚೀನಾದ ಕ್ರಮವನ್ನು ಟ್ರಂಪ್‌ ಅವರು ತೀವ್ರವಾಗಿ ಟೀಕಿಸಿದ್ದರು.

ಹಾಂಗ್‌ಕಾಂಗ್‌ನಲ್ಲಿ ರಾಷ್ಟ್ರೀಯ ಭದ್ರತಾ ಕಾನೂನು ಜಾರಿ ಮಾಡಿದ್ದು, ಅಮೆರಿಕದ ಮಾಧ್ಯಮ ಪ್ರತಿನಿಧಿಗಳ ಮೇಲೆ ಚೀನಾ ನಿಷೇಧ ಹೇರಿದ್ದು, ಉಯಿಗರ್‌ ಸಮುದಾಯದವರ ಮೇಲೆ ದೌರ್ಜನ್ಯ, ಟಿಬೆಟನ್ನರ ಭದ್ರತೆ ಮುಂತಾದ ವಿಚಾರಗಳೂ ಉಭಯ ದೇಶಗಳ ಸಂಬಂಧ ಕೆಡಲು ಕಾರಣವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT