ವಾಷಿಂಗ್ಟನ್: ಟೆಸ್ಲಾ ಮುಖ್ಯಸ್ಥ ಮತ್ತು ಜಗತ್ತಿನ ಸಿರಿವಂತ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟರ್ ಮುಂದಿಟ್ಟಿರುವ ಪ್ರಸ್ತಾಪಕ್ಕೆ ಕಂಪನಿಯು ಸಮ್ಮತಿ ಸೂಚಿಸುವ ಬಗ್ಗೆ ವರದಿಯಾಗಿದೆ. ಅದರ ಬೆನ್ನಲ್ಲೇ ರಿಪಬ್ಲಿಕನ್ ಪಕ್ಷದ ಸಂಸದರು 'ಡೊನಾಲ್ಡ್ ಟ್ರಂಪ್ ಅವರನ್ನು ಮುಕ್ತಗೊಳಿಸಲು ಇದು ಸೂಕ್ತ ಸಮಯ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಿಪಬ್ಲಿಕ್ ಪಕ್ಷವು 209 ಸಂಸದರನ್ನು ಒಳಗೊಂಡಿರುವ ಹೌಸ್ ರಿಪಬ್ಲಿಕನ್ಸ್ ಟ್ವಿಟರ್ ಖಾತೆಯು ಟ್ರಂಪ್ ಅವರ ಹೆಸರು ಪ್ರಸ್ತಾಪಿಸಿದೆ. ಎಲಾನ್ ಮಸ್ಕ್ ಅವರನ್ನು ಟ್ಯಾಗ್ ಮಾಡಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಟ್ವಿಟರ್ ನಿರ್ಬಂಧವನ್ನು ಮುಕ್ತಗೊಳಿಸಲು ಇದು ಸಕಾಲ ಎಂದಿದೆ.
Hey, @elonmusk it's a great week to free @realDonaldTrump.
— House Republicans (@HouseGOP) April 25, 2022
ಅಮೆರಿಕದ ಕ್ಯಾಪಿಟಲ್ ಭವನದಲ್ಲಿ 2021ರ ಜನವರಿ 6ರಂದು ಹಿಂಸಾಚಾರ ಉಂಟಾದ ನಂತರದಲ್ಲಿ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಯಿತು.
ಇದನ್ನೂ ಓದಿ–ದಾಖಲೆಯ ಆದಾಯ ಗಳಿಸಿದ ಎಲೊನ್ ಮಸ್ಕ್ ಕಂಪನಿ ಟೆಸ್ಲಾ
ಕೋವಿಡ್–19 ಕುರಿತು ತಪ್ಪು ಮಾಹಿತಿಗಳನ್ನು ಹಂಚಿಕೊಂಡ ಕಾರಣದಿಂದ ಶಾಶ್ವತವಾಗಿ ಟ್ವಿಟರ್‌ನಿಂದ ನಿರ್ಬಂಧಕ್ಕೆ ಒಳಗಾಗಿರುವ ಸಂಸದೆ ಮಾರ್ಜೊರಿ ಟೇಲರ್ ಗ್ರೀನ್, ಮತ್ತೆ ತಮ್ಮ ಟ್ವಿಟರ್ ಖಾತೆಯನ್ನು ಸಕ್ರಿಯಗೊಳಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
43 ಬಿಲಿಯನ್ ಡಾಲರ್ (ಸುಮಾರು 3.29 ಲಕ್ಷ ಕೋಟಿ ರೂಪಾಯಿ) ನೀಡಿ ಕಂಪನಿಯನ್ನು ಖರೀದಿಸುವ ಪ್ರಸ್ತಾಪವನ್ನು ಎಲಾನ್ ಮಸ್ಕ್ ಟ್ವಿಟರ್ ಮುಂದಿಟ್ಟಿದ್ದಾರೆ. ಟ್ವಿಟರ್‌ನ ಪ್ರತಿ ಷೇರಿಗೆ 54.20 ಡಾಲರ್ ಕೊಡುವುದಾಗಿ ಏಪ್ರಿಲ್ 14ರಂದು ಎಲಾನ್ ಮಸ್ಕ್ ಷೇರುಪೇಟೆ ನಿಯಂತ್ರಣ ಮಂಡಳಿಗೆ ಸಲ್ಲಿಸಿರುವ ದಾಖಲೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಟ್ವಿಟರ್‌ನಲ್ಲಿ ಅವರು 8 ಕೋಟಿಗೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.
ಎಲಾನ್ ಅವರ ಖರೀದಿ ಪ್ರಸ್ತಾಪದ ನಂತರ ಟ್ವಿಟರ್ ಷೇರು ಬೆಲೆ ಹಲವು ಬಾರಿ ಏರಿಕೆ ದಾಖಲಿಸಿದ್ದು, ಪ್ರಸ್ತುತ 50.74 ಡಾಲರ್‌ಗಳಲ್ಲಿ ವಹಿವಾಟು ನಡೆದಿದೆ.
ಪ್ರಸ್ತುತ ಟ್ವಿಟರ್‌ನಲ್ಲಿ ಎಲಾನ್ ಅವರು ಶೇಕಡ 9.2ರಷ್ಟು ಷೇರುಗಳನ್ನು (7.35 ಕೋಟಿ ಷೇರುಗಳು) ಹೊಂದಿದ್ದು, ಪೂರ್ಣ ಶೇ 100ರಷ್ಟು ಷೇರುಗಳನ್ನು ಖರೀದಿಸಲು ಪ್ರಯತ್ನಿಸುತ್ತಿದ್ದಾರೆ.
'ಪ್ರಸ್ತುತ ಜಾರಿಯಲ್ಲಿರುವ ನಿಯಮಗಳು, ಅವುಗಳ ಉಲ್ಲಂಘಟನೆಗೆ ತಕ್ಕಂತೆ ಸೂಕ್ತ ಕ್ರಮ ಕೈಗೊಳ್ಳುವುದನ್ನು ಉಳಿಸಿಕೊಳ್ಳಬೇಕು. ಕೆಟ್ಟದಾಗುವುದನ್ನು ತಡೆಯಲು ಟ್ವಿಟರ್ ಮಂಡಳಿಗೆ ಇನ್ನೂ ಸಮಯವಿದೆ' ಎಂದು ಸರ್ಕಾರೇತರ ಸಂಘದ ಮುಖ್ಯಸ್ಥರಾದ ಏಂಜೆಲೊ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.