ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಸಚಿವೆ ಸುಯೆಲ್ಲಾ ಬ್ರವರ್‌ಮನ್‌ರನ್ನು ವಜಾಗೊಳಿಸಿದ ಪ್ರಧಾನಿ ರಿಷಿ ಸುನಕ್

Published 13 ನವೆಂಬರ್ 2023, 10:06 IST
Last Updated 13 ನವೆಂಬರ್ 2023, 10:06 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರು ತಮ್ಮ ಸಂಪುಟದಿಂದ ಭಾರತೀಯ ಮೂಲದವರಾದ, ಗೃಹ ಸಚಿವೆ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ಸೋಮವಾರ ವಜಾಗೊಳಿಸಿ, ಅವರ ಸ್ಥಾನಕ್ಕೆ ವಿದೇಶಾಂಗ ಸಚಿವರಾಗಿದ್ದ ಜೇಮ್ಸ್ ಕ್ಲೆವರ್ಲಿ ಅವರನ್ನು ನೇಮಕ ಮಾಡಿದ್ದಾರೆ.

ಬ್ರಿಟನ್‌ಗೆ ಐದು ದಿನಗಳ ಅಧಿಕೃತ ಭೇಟಿ ಕೈಗೊಂಡಿರುವ ಭಾರತದ ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರೊಂದಿಗೆ ಸುಯೆಲ್ಲಾ ಅವರು ಮಾತುಕತೆ ನಡೆಸಬೇಕಿದ್ದಾಗಲೇ ಈ ಬದಲಾವಣೆ ನಡೆದಿದೆ. 

ಸುಯೆಲ್ಲಾ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಸಂಪುಟ ಪುನಾರಚನೆ ಮಾಡಿದ ಸುನಕ್‌, ಕ್ಲೆವರ್ಲಿಯವರಿಂದ ತೆರವಾದ ವಿದೇಶಾಂಗ ಸಚಿವ ಸ್ಥಾನಕ್ಕೆ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರನ್ನು ನೇಮಿಸಿದ ಅಚ್ಚರಿಯ ಬೆಳವಣಿಗೆಯೂ ನಡೆದಿದೆ.

ಇತ್ತೀಚೆಗೆ ಬ್ರಿಟನ್‌ನಲ್ಲಿ ನಡೆದಿದ್ದ ಪ್ಯಾಲೆಸ್ಟೀನ್‌ ಪರ ರ‍್ಯಾಲಿಗಳನ್ನು ನಿಭಾಯಿಸುವಲ್ಲಿ ಪೊಲೀಸರ ಕಾರ್ಯವೈಖರಿಯನ್ನು ಟೀಕಿಸಿ ಬ್ರೆವರ್‌ಮನ್ ವಿವಾದಾತ್ಮಕ ಲೇಖನವನ್ನು ‘ದಿ ಟೈಮ್ಸ್‌’ ಪತ್ರಿಕೆಗೆ ಬರೆದಿದ್ದರು. ಇದಕ್ಕೆ ಅವರು ಪ್ರಧಾನಿಯವರ ಅನುಮತಿ ಪಡೆದಿರಲಿಲ್ಲ ಎಂದು ಪ್ರಧಾನಿ ಕಚೇರಿ ಮೂಲಗಳು ಹೇಳಿವೆ.

ಸುನಕ್‌ ಅವರ ಸಂಪುಟದಲ್ಲಿ ಹಿರಿಯ ಸಚಿವೆಯಾಗಿದ್ದ 43 ವರ್ಷದ ಸುಯೆಲ್ಲಾ ಅವರು ಪದೇಪದೇ ವಿವಾದಗಳನ್ನು ಹುಟ್ಟು ಹಾಕಿ ಸುದ್ದಿಯಾಗಿದ್ದರು. ಭಾರತೀಯ ಮೂಲದ ಮೊದಲ ಬ್ರಿಟನ್‌ ಪ್ರಧಾನಿಯಾದ ರಿಷಿ ಸುನಕ್‌ ಅವರು ತಮ್ಮ ಸಂಪುಟದಲ್ಲಿ ಸುಯೆಲ್ಲಾ ಅವರನ್ನು ಉಳಿಸಿಕೊಂಡಿರುವುದಕ್ಕೆ ವಿರೋಧ ಪಕ್ಷ ಮತ್ತು ಸ್ವಪಕ್ಷೀಯರಿಂದಲೂ ಟೀಕೆ ಎದುರಿಸುತ್ತಿದ್ದು, ಸುಯೆಲ್ಲಾ ಅವರನ್ನು ಸಂಪುಟದಿಂದ ಕೈಬಿಡಬೇಕಾದ ಒತ್ತಡಕ್ಕೆ ಸಿಲುಕಿದ್ದರು.     

ಸಂಪುಟದಿಂದ ಹೊರಬಿದ್ದ ನಂತರ ಪ್ರತಿಕ್ರಿಯಿಸಿರುವ ಸುಯೆಲ್ಲಾ ಅವರು ‘ಸಮಯ ಬಂದಾಗ ಎಲ್ಲವನ್ನೂ ಹೇಳುವೆ. ಆದರೆ, ದೇಶದ ಗೃಹ ಸಚಿವೆಯಾಗಿ ಸೇವೆ ಸಲ್ಲಿಸಲು ನನಗೆ ಸಿಕ್ಕಿದ್ದ ಅವಕಾಶ ನನ್ನ ಬದುಕಿನ ದೊಡ್ಡ ಭಾಗ್ಯ’ ಎಂದು ಹೇಳಿದ್ದಾರೆ.

ಇನ್ನು, ವಿದೇಶಾಂಗ ಸಚಿವರಾಗಿ ನೇಮಕವಾದ ನಂತರ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ ಕ್ಯಾಮರೂನ್‌ ಅವರು ‘ಕಳೆದ ಏಳು ವರ್ಷಗಳಿಂದ ಮುನ್ನೆಲೆಯ ರಾಜಕೀಯದಿಂದ ಹೊರಗಿದ್ದೆ. ಕನ್ಸರ್ವೇಟಿವ್‌ ನಾಯಕನಾಗಿ 11 ವರ್ಷಗಳ ಮತ್ತು ಪ್ರಧಾನಿಯಾಗಿ ಐದು ವರ್ಷಗಳ ನನ್ನ ಅನುಭವವು ಪ್ರಧಾನಿಗೆ ನೆರವಾಗಲು ನನಗೆ ಸಹಾಯಕವಾಗಲಿದೆ ಎನ್ನುವುದು ನನ್ನ ಭಾವನೆ’ ಎಂದು ಹೇಳಿದ್ದಾರೆ.

2005ರಿಂದ 2016ರವರೆಗೆ ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ, 2010ರಿಂದ 2016ರವರೆಗೆ ಬ್ರಿಟನ್‌ ಪ್ರಧಾನಿಯಾಗಿದ್ದ ಕ್ಯಾಮರೂನ್ ಅವರು ಈಗ ವಿದೇಶಾಂಗ ಸಚಿವ ಸ್ಥಾನದ ಮೂಲಕ ಸುನಕ್‌ ನೇತೃತ್ವದ ಸರ್ಕಾರದಲ್ಲಿ ಮುಂಚೂಣಿಗೆ ಬಂದಿದ್ದಾರೆ. 

ಸಂಸದರಲ್ಲದವರು ಸರ್ಕಾರದಲ್ಲಿ ಇಂತಹ ಹುದ್ದೆ ಅಲಂಕರಿಸಿರುವುದು ಬ್ರಿಟನ್‌ನಲ್ಲಿ ಅಪರೂಪ. ಸಂಸತ್ತಿನ ಮೇಲ್ಮನೆಯಾದ ಹೌಸ್ ಆಫ್ ಲಾರ್ಡ್ಸ್‌ಗೆ ಕ್ಯಾಮರೂನ್ ಅವರನ್ನು ಪ್ರತಿನಿಧಿಯಾಗಿ ನೇಮಕ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT