ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಜಾ ಜನರ ಬಲವಂತದ ಸ್ಥಳಾಂತರ: ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

Published 17 ಅಕ್ಟೋಬರ್ 2023, 16:25 IST
Last Updated 17 ಅಕ್ಟೋಬರ್ 2023, 16:25 IST
ಅಕ್ಷರ ಗಾತ್ರ

ಜಿನಿವಾ/ಟೆಲ್‌ ಅವೀವ್ (/ಎಪಿ): ಗಾಜಾ ಪಟ್ಟಿಯಲ್ಲಿ ಇರುವ ನಾಗರಿಕರನ್ನು ‘ಒತ್ತಾಯದಿಂದ ಇನ್ನೊಂದೆಡೆ ಕಳುಹಿಸುವ’ ಕ್ರಮ ಸರಿಯಲ್ಲ ಎಂದು ವಿಶ್ವಸಂಸ್ಥೆಯು ಇಸ್ರೇಲ್‌ಗೆ ಮಂಗಳವಾರ ಎಚ್ಚರಿಕೆ ನೀಡಿದೆ. ಈ ರೀತಿ ಮಾಡುವುದು ಅಂತರರಾಷ್ಟ್ರೀಯ ಕಾನೂನುಗಳ ಉಲ್ಲಂಘನೆ ಎಂದು ಅದು ಹೇಳಿದೆ.

ನಾಗರಿಕರನ್ನು ಕಾನೂನಿಗೆ ಅನುಗುಣವಾಗಿ ತಾತ್ಕಾಲಿಕ ಅವಧಿಗೆ ಸ್ಥಳಾಂತರಿಸುವ ಪ್ರಕ್ರಿಯೆಯಲ್ಲಿ ಇಸ್ರೇಲ್ ಮೇಲೆ ಹೊಣೆಗಾರಿಕೆಗಳು ಇರುತ್ತವೆ. ಆದರೆ ಆ ಹೊಣೆಗಾರಿಕೆಗಳನ್ನು ನಿಭಾಯಿಸುವಲ್ಲಿ ಇಸ್ರೇಲ್ ಯಾವುದೇ ಪ್ರಯತ್ನ ಮಾಡಿದಂತೆ ಕಾಣುತ್ತಿಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿಯು ಹೇಳಿದೆ.

ಉತ್ತರ ಗಾಜಾದ ನಿವಾಸಿಗಳು ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲ್ ಆಗ್ರಹಿಸಿದೆ. ಭೂದಾಳಿ ನಡೆಸುವ ಮೊದಲು ಆ ಪ್ರದೇಶದಲ್ಲಿನ ನಾಗರಿಕರನ್ನು ಸ್ಥಳಾಂತರಿಸಬಹುದು ಎಂಬುದು ಇಸ್ರೇಲ್‌ನ ಆಲೋಚನೆ. ‘ಮುಂದಿನ ದಿನಗಳಲ್ಲಿ ನಾಗರಿಕರು ತೆರಬೇಕಿರುವ ಬೆಲೆಯ ವಿಚಾರವಾಗಿ ನಮಗೆ ಬಹಳ ಆತಂಕ ಮೂಡಿದೆ. ಮಿಲಿಟರಿ ಕಾರ್ಯಾಚರಣೆಗಳು ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ಮಾನವ ಹಕ್ಕುಗಳ ಕಚೇರಿಯ ವಕ್ತಾರೆ ರವೀನಾ ಶಂದಸಾನಿ ಹೇಳಿದ್ದಾರೆ.

‘ಜನರನ್ನು ಕಾನೂನುಬದ್ಧವಾಗಿ ತಾತ್ಕಾಲಿಕ ಅವಧಿಗೆ ಸ್ಥಳಾಂತರ ಮಾಡುವಾಗ ಅವರಿಗೆ ಸೂಕ್ತ ವಸತಿ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಹೇಳಿದ್ದಾರೆ. ‘ಗಾಜಾದ ಜನರಿಗೆ ಸ್ಥಳಾಂತರಗೊಳ್ಳಲು ನೀಡಿರುವ ಆದೇಶ ಹಾಗೂ ಗಾಜಾ ಪಟ್ಟಿಯ ಮೇಲೆ ವಿಧಿಸಿರುವ ಸಂಪೂರ್ಣ ದಿಗ್ಬಂಧನವನ್ನು ಕಾನೂನುಬದ್ಧ ತಾತ್ಕಾಲಿಕ ಸ್ಥಳಾಂತರ ಎಂದು ‍‍ಪರಿಗಣಿಸಲು ಆಗದು. ಇದು ಅಂತರರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಾಗಿ ನಾಗರಿಕರನ್ನು ಬಲವಂತವಾಗಿ ಸ್ಥಳಾಂತರ ಮಾಡುವುದಕ್ಕೆ ಸಮ’ ಎಂದೂ ಅವರು ಎಚ್ಚರಿಸಿದ್ದಾರೆ.

ದಾಳಿಯ ಚಿತ್ರ ಬಿಡುಗಡೆ

ಇಸ್ರೇಲ್‌ನ ದಕ್ಷಿಣ ಭಾಗದಲ್ಲಿ ಹಮಾಸ್ ಬಂಡುಕೋರರು ನಡೆಸಿದ ನಾಗರಿಕರ ಹತ್ಯೆಯ ಭೀಕರ ಚಿತ್ರಗಳು ಇರುವ ವಿಡಿಯೊ ಒಂದನ್ನು ಇಸ್ರೇಲ್ ಬಿಡುಗಡೆ ಮಾಡಿದ್ದು, ಬಂಡುಕೋರರ ಕ್ರೌರ್ಯವನ್ನು ಅದು ದಾಖಲಿಸಿದೆ.

ಸುಟ್ಟುಹೋಗಿರುವ ಮಗುವಿನ ಚಿತ್ರ, ನಾಗರಿಕರ ಮೃತದೇಹಗಳಿಗೆ ಬಂಡುಕೋರರು ಗುಂಡು ಹಾರಿಸುತ್ತಿರುವ ಚಿತ್ರ, ಗುದ್ದಲಿಯಂತಹ ಸಲಕರಣೆ ಬಳಸಿ ದೇಹವೊಂದರ ತಲೆ ಕಡಿಯುತ್ತಿರುವ ಚಿತ್ರ ಈ ವಿಡಿಯೊದಲ್ಲಿ ಇವೆ. ಇಸ್ರೇಲ್ ಆಡಳಿತವು ಈ ಚಿತ್ರಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದೆ.

ಹಿಂದಿನ ಮಿಲಿಟರಿ ಕಾರ್ಯಾಚರಣೆಗಳಲ್ಲಿ ನಾಗರಿಕರ ಸಾವಿಗೆ ಕಾರಣವಾಗಿದ್ದಕ್ಕೆ ಇಸ್ರೇಲ್ ವಿರುದ್ಧ ಅಂತರರಾಷ್ಟ್ರೀಯ ಸಮುದಾಯವು ಟೀಕೆಗಳನ್ನು ಮಾಡಿದೆ. ಈಗ ಇಸ್ರೇಲ್ ಬಿಡುಗಡೆ ಮಾಡಿರುವ ವಿಡಿಯೊ, ಈ ಟೀಕೆಗಳನ್ನು ಎದುರಿಸುವ ಹಾಗೂ ಜಗತ್ತಿನ ಗಮನವು ತನ್ನ ಪ್ರಜೆಗಳ ಹತ್ಯೆಯ ಮೇಲೆ ಕೇಂದ್ರೀಕೃತವಾಗಿರಬೇಕು ಎಂಬ ಉದ್ದೇಶ ಹೊಂದಿರುವಂತಿದೆ. 

‘ಇದು ಇಸ್ರೇಲ್ ವಿರುದ್ಧದ ಯುದ್ಧವಷ್ಟೇ ಅಲ್ಲ. ಇದು ಇಡೀ ಮನುಕುಲದ ವಿರುದ್ಧದ ಯುದ್ಧ’ ಎಂದು ಹಮಾಸ್ ದಾಳಿಯ ಬಗ್ಗೆ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ. ವಿಡಿಯೊದಲ್ಲಿ ಇರುವ ಚಿತ್ರಗಳನ್ನು ಹಮಾಸ್ ಬಂಡುಕೋರರು ಹೊಂದಿದ್ದ ಕ್ಯಾಮೆರಾಗಳಿಂದ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿಡಿಯೊಗಳಿಂದ ಮತ್ತು ಇಸ್ರೇಲ್‌ನ ಕೆಲವು ಪ್ರಜೆಗಳ ಮೊಬೈಲ್‌ ಕ್ಯಾಮೆರಾಗಳಿಂದ ಪಡೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT